ಕೃಷಿಗೆ ಕೆರೆ ನೀರು ಬಳಸಿದರೆ ಶಿಸ್ತುಕ್ರಮ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶ

ಶುಕ್ರವಾರ, ಮೇ 24, 2019
26 °C
ಕೆ.ಸಿ ವ್ಯಾಲಿ ಯೋಜನೆ ಸಭೆ

ಕೃಷಿಗೆ ಕೆರೆ ನೀರು ಬಳಸಿದರೆ ಶಿಸ್ತುಕ್ರಮ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶ

Published:
Updated:
Prajavani

ಕೋಲಾರ: ‘ಕೆರೆಗಳಲ್ಲಿ ಸಂಗ್ರಹವಾಗಿರುವ ಕೆ.ಸಿ ವ್ಯಾಲಿ ಯೋಜನೆ ನೀರನ್ನು ಕೃಷಿ ಚಟುವಟಿಕೆಗೆ ಬಳಸುವವರ ವಿರುದ್ಧ ನಿರ್ದಾಕ್ಷಣ್ಯವಾಗಿ ಶಿಸ್ತುಕ್ರಮ ಜರುಗಿಸಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಆದೇಶಿಸಿದರು.

ಕೆ.ಸಿ ವ್ಯಾಲಿ ಯೋಜನೆ ಸಂಬಂಧ ಇಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಈಗಾಗಲೇ ತಾಲ್ಲೂಕಿನ ನರಸಾಪುರ ಭಾಗದ ಕೆಲ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ಹರಿದಿದೆ. ಈ ಕೆರೆಗಳ ಅಕ್ಕಪಕ್ಕದ ರೈತರು ಪಂಪ್‌ನ ಮೂಲಕ ನೀರನ್ನು ಜಮೀನಿಗೆ ಹರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಂಡಿದ್ದೀರಾ?’ ಎಂದು ಪ್ರಶ್ನಿಸಿದರು.

‘ಕೆ.ಸಿ ವ್ಯಾಲಿ ಯೋಜನೆ ನೀರು ಹರಿಯುವ ಕಾಲುವೆಗಳ ಪಕ್ಕದಲ್ಲಿ ರೈತರು ಚಿಕ್ಕ ಕಾಲುವೆ ತೆಗೆದು ಜಮೀನಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅಂತಹ ಸ್ಥಳಗಳಿಗೆ ಭೇಟಿ ನೀಡಿ ನೀರು ಬಂದ್‌ ಮಾಡಿಸಬೇಕು. ಈ ವಿಚಾರದಲ್ಲಿ ಸಂಧಾನದ ಪ್ರಶ್ನೆಯೇ ಇಲ್ಲ. ನೇರವಾಗಿ ನೋಟಿಸ್‌ ಕೊಟ್ಟು ಕಾನೂನು ಕ್ರಮ ಕೈಗೊಳ್ಳಿ’ ಎಂದು ತಿಳಿಸಿದರು.

ಗುತ್ತಿಗೆದಾರರ ಜವಾಬ್ದಾರಿ: ‘ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಕ್ಕೆ ₹ 1,300 ಕೋಟಿ ವೆಚ್ಚ ಮಾಡಲಾಗಿದೆ. ಕೆರೆಗಳಿಗೆ ನೀರು ಹರಿಸಿದರೆ ಮಾತ್ರಕ್ಕೆ ಕೆಲಸ ಮುಗಿಯಿತೆಂದು ಭಾವಿಸಬಾರದು. ಹಳ್ಳಿಗಳಲ್ಲಿ ರಸ್ತೆ ಪಕ್ಕದಲ್ಲೇ ರಾಜಕಾಲುವೆಗಳಿದ್ದು, ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಸುರಕ್ಷತಾ ಕ್ರಮ ಕೈಗೊಳ್ಳುವುದು ಗುತ್ತಿಗೆದಾರರ ಜವಾಬ್ದಾರಿ’ ಎಂದು ಹೇಳಿದರು.

‘ಯಾವುದೇ ಯೋಜನೆ ಜಾರಿಗೊಳಿಸುವಾಗ ಮುಂದಾಲೋಚನೆ ಇರಬೇಕು. ಭವಿಷ್ಯದಲ್ಲಿ ಉತ್ತಮ ಮಳೆಯಾದರೆ ನೀರು ಹರಿಯುವಷ್ಟು ಸಾಮರ್ಥ್ಯ ರಾಜಕಾಲುವೆಗಳಿಗೆ ಇಲ್ಲ. ಮಳೆ ಹೇಳಿ ಕೇಳಿ ಬರುತ್ತದೆಯೇ? ನೀರು ಸರಾಗವಾಗಿ ಹರಿದು ಹೋಗುವಂತೆ ರಾಜಕಾಲುವೆ ಸ್ವಚ್ಛಗೊಳಿಸದೆ ಏನು ಮಾಡುತ್ತಿದ್ದೀರಿ?’ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಮಾಹಿತಿ ನೀಡಿಲ್ಲ: ‘ಉದ್ದಪ್ಪನಹಳ್ಳಿ ಕೆರೆಯಿಂದ ನರಸಾಪುರ ಕೆರೆಗೆ ನೀರು ಬರುವ ರಾಜಕಾಲುವೆಗೆ ಅಡ್ಡಲಾಗಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ಈ ಹಿಂದೆ ರಾಜಕಾಲುವೆ ವಿಸ್ತೀರ್ಣ ಎಷ್ಟಿತ್ತು ಎಂಬ ಬಗ್ಗೆ ಶೀಘ್ರವೇ ಪರಿಶೀಲನೆ ನಡೆಸಿ ಅಕ್ರಮ ಕಟ್ಟಡ ನೆಲಸಮಗೊಳಿಸುವಂತೆ ಸೂಚಿಸಿದ್ದೆ. ಆದರೆ, ಅಧಿಕಾರಿಗಳು ಈವರೆಗೂ ಮಾಹಿತಿ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಧಾರಾಕಾರ ಮಳೆ ಬಂದಾಗ ಕೆ.ಸಿ ವ್ಯಾಲಿ ಯೋಜನೆಯಿಂದ ಯಾವುದೇ ಪ್ರಾಣಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು. ರಾಷ್ಟ್ರೀಯ ಹೆದ್ದಾರಿಯಿಂದ ನರಸಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಬೇಕು.ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಗುತ್ತಿಗೆದಾರರಿಂದ ಈ ಕೆಲಸ ಮಾಡಿಸಬೇಕು’ ಎಂದು ಹೇಳಿದರು.

ಮೀನುಗಾರಿಕೆ ತಡೆಯಿರಿ: ‘ಕೆ.ಸಿ ವ್ಯಾಲಿ ಯೋಜನೆಯಿಂದ ದಿನಕ್ಕೆ 252 ಎಂಎಲ್‌ಡಿ ನೀರು ಹರಿಯುತ್ತಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ನೀರು ತುಂಬಿರುವ ಕೆರೆಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಇದಕ್ಕೆ ಅನುಮತಿ ನೀಡಿದವರು ಯಾರು? ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೀನುಗಾರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ರಾಜಕಾಲುವೆಗಳ ವಿಸ್ತೀರ್ಣ ಈ ಹಿಂದೆ ಎಷ್ಟಿತ್ತು, ಈಗ ಎಷ್ಟಿದೆ ಎಂಬ ಬಗ್ಗೆ ಕಂದಾಯ, ಗ್ರಾಮ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು 2 ದಿನದಲ್ಲಿ ಮಾಹಿತಿ ನೀಡಬೇಕು. ಬೆಟ್ಟಗಳಿಂದ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ಕಾಲುವೆಗಳು ಸಂಪೂರ್ಣ ಒತ್ತುವರಿಯಾಗಿದ್ದು, ಮಳೆಗಾಲದಲ್ಲಿ ಅನಾಹುತ ಸಂಭವಿಸಿದರೆ ಜನ ಪರಿಹಾರಕ್ಕೆ ಅಂಗಲಾಚುತ್ತಾರೆ. ಒತ್ತುವರಿದಾರರಿಗೆ ಕಡಿವಾಣ ಹಾಕುವವರೇ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !