ಗುರುವಾರ , ಸೆಪ್ಟೆಂಬರ್ 23, 2021
27 °C

ಗಿಲಿಟ್ ರಾಜಕಾರಣ ಗೊತ್ತಿಲ್ಲ ಸಹಾಯ ಮಾಡಲು ಜಾತಿ ಪಕ್ಷ ಅಮುಖ್ಯ: ರಮೇಶ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಹಾಯ ಮಾಡುವಾಗ ಜಾತಿ, ಪಕ್ಷ ಮುಖ್ಯವಲ್ಲ. ಮಾನವತ್ವ ಇರಬೇಕು. ನಮಗೆ ಗಿಲಿಟ್ ರಾಜಕಾರಣ ಗೊತ್ತಿಲ್ಲ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಹೇಳಿದರು.

ತಾಲ್ಲೂಕಿನ ಹೋಳೂರು ಗ್ರಾಮದಲ್ಲಿ ಶುಕ್ರವಾರ ನಡೆದ ಡಿಸಿಸಿ ಬ್ಯಾಂಕ್‌ನ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ನಾನು ನಂಬಿರುವ ಸಾಯಿ ಬಾಬಾ ಮೇಲೆ ಆಣೆ ಮಾಡಿ ಹೇಳುತ್ತೇನೆ. ಸಾಮಾಜಿಕ ಕೆಲಸಗಳಲ್ಲಿ ಜಾತಿ ಪಕ್ಷ ನೋಡುವುದಿಲ್ಲ. ಆದರೆ, ಕೆಲವರಿಗೆ ಕೂತರೆ, ನಿಂತರೆ ಅದೇ ಚಿಂತೆ’ ಎಂದು ವಿರೋಧಿಗಳನ್ನು ಟೀಕಿಸಿದರು.

‘ಶಾಸಕ ಶ್ರೀನಿವಾಸಗೌಡರದು ಎಳೆ ಮಗುವಿನ ಮನಸ್ಸು. ಇಂತಹವರು ರಾಜಕಾರಣದಲ್ಲಿ ಇದ್ದರೆ ಮಾತ್ರ ರಾಜಕಾರಣಕ್ಕೆ ಗೌರವ. ನಮ್ಮ ಬಗ್ಗೆ ಕೆಲವರಿಗೆ ಹೊಟ್ಟೆ ಉರಿ. ಏನು ಮಾಡುವುದು ಕ್ಯಾನ್ಸರ್‌ಗೆ ಔಷಧವಿದೆ, ಹೊಟ್ಟೆ ಕಿಚ್ಚಿಗೆ ಔಷಧವಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

‘ಮಡಿಕೆ ಚೂರುಗಳಾಗಿದ್ದ ಡಿಸಿಸಿ ಬ್ಯಾಂಕನ್ನು ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿ ಸುಂದರ ಮಡಿಕೆ ಮಾಡಿದೆ. ಇದನ್ನು ಹೇಗೆ ಹಾಳು ಮಾಡೋದು ಎಂಬ ಚಿಂತೆ ಕೆಲವರನ್ನು ಕಾಡುತ್ತಿದೆ. ಇಂತಹವರಿಗೆ ದೇವರೇ ಒಳ್ಳೆ ಬುದ್ದಿ ಕೊಡಬೇಕು. ಇಲ್ಲವಾದರೆ ಜನ ಎಂದಿಗೂ ಕ್ಷಮಿಸಲ್ಲ’ ಎಂದರು.

‘ಹೊಸ ಸದಸ್ಯರೂ ಇಲ್ಲ, ಜನರಿಗೆ ಪ್ರಯೋಜನವೂ ಇಲ್ಲ. ಇಂತಹ ಸೊಸೈಟಿ ಬೇಕಾ? ಎಷ್ಟು ಸಾಲ ನೀಡಿದೆವು ಎಂಬುದಕ್ಕಿಂತ ಎಷ್ಟು ಕುಟುಂಬಗಳಿಗೆ ಸಾಲ ಕೊಟ್ಟೆವು ಎಂಬುದು ಮುಖ್ಯ. ಹೋಳೂರು ಸೊಸೈಟಿ ವ್ಯಾಪ್ತಿಯ 25 ಹಳ್ಳಿಗಳ ಪ್ರತಿ ಕುಟುಂಬವೂ ಸೊಸೈಟಿ ಸದಸ್ಯತ್ವ ಪಡೆಯುವಂತೆ ಮಾಡಿ’ ಎಂದು ಸೂಚಿಸಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಕಷ್ಟದಲ್ಲಿರುವ ಕೃಷಿಕರ ನೆರವಿಗೆ ನಿಲ್ಲುತ್ತೇವೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೈತರೇ ಸದಸ್ಯರಾಗಿರುವ ಸಮಿತಿ ರಚಿಸಿ, ಬೆಳೆಯ ಖರ್ಚು ಲೆಕ್ಕ ಹಾಕಿ ರೈತರಿಗೆ ನಷ್ಟವಾಗದಂತೆ ಕೃಷಿ ಉತ್ಪನ್ನಗಳಿಗೆ  ಬೆಲೆ ನಿಗದಿಪಡಿಸುವ ಕುರಿತು ಗೆಜೆಟ್‌ ಹೊರಡಿಸಿ ಕಾರ್ಯಗತ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಗೆಲುವಿಗೆ ಕಾರಣ: ‘ನನ್ನ ಗೆಲುವಿಗೆ ರಮೇಶ್‌ಕುಮಾರ್ ಕಾರಣ. ಚುನಾವಣೆ ಸಂದರ್ಭದಲ್ಲಿ ಅವರ ಕ್ಷೇತ್ರ ಬಿಟ್ಟು ನನ್ನ ಪರ ಕೆಲಸ ಮಾಡಿದರು. ಹೋಳೂರು ಹೋಬಳಿ ಜನ ಸದಾ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸ್ಮರಿಸಿದರು.

‘ಡಿಸಿಸಿ ಬ್ಯಾಂಕ್ ಅವಿಭಜಿತ ಕೋಲಾರ ಜಿಲ್ಲೆಯ ರೈತರು ಹಾಗೂ ಮಹಿಳೆಯರ ಬದುಕಿಗೆ ಆಸರೆಯಾಗಿದೆ. ಇಂದಿನ ರಾಜಕಾರಣ ನಮ್ಮಂತವರಿಗಲ್ಲ, ದರೋಡೆಕೋರರಿಗೆ ರಾಜಕಾರಣ ಎಂಬಂತಾಗುತ್ತಿದೆ’ ಎಂದು ವಿಷಾದಿಸಿದರು.

ಸಿಬ್ಬಂದಿಗೆ ತರಾಟೆ: ‘ಅಣ್ಣಿಹಳ್ಳಿ ಸೊಸೈಟಿಯಲ್ಲಿ 500 ಸ್ವಸಹಾಯ ಗುಂಪುಗಳನ್ನು ರಚಿಸಿ ಸಾಲ ನೀಡಿದ್ದೇವೆ. ನಿಮಗೆ ಕೆಲಸ ಮಾಡಲು ಏನು ಕಷ್ಟ? ಸೊಸೈಟಿ ಗಣಕೀಕರಣ ಪೂರ್ಣಗೊಂಡಿಲ್ಲ, ಸಾಲ ಸಹ ನೀಡಲ್ಲ, ನಿಮಗೆ ಬಡವರಿಗೆ ನೆರವಾಗುವ ಇಚ್ಛಾಶಕ್ತಿ ಇಲ್ಲ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡರು ಹೋಳೂರು ಸೊಸೈಟಿ ಸಿಇಒ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

‘ರೈತರಿಗೆ ನೀಡುತ್ತಿರುವ ಸಾಲದ ಹಣವನ್ನು ಎಟಿಎಂ ಮೂಲಕವೇ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಆದರೂ ಕೆಲವರು ಬ್ಯಾಂಕ್‌ ವಿರುದ್ಧ ಅನಗತ್ಯ ಟೀಕೆ ಮಾಡುತ್ತಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದರು.

ರೈತರಿಗೆ ₹ 1.50 ಕೋಟಿ ಸಾಲ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್‌, ವೆಂಕಟರೆಡ್ಡಿ, ಎಸ್.ವಿ.ಸುಧಾಕರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್, ಹೋಳೂರು ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಅಣ್ಣಿಹಳ್ಳಿ ನಾಗರಾಜ್, ಸೊಣ್ಣೇಗೌಡ, ಕೃಷ್ಣಾರೆಡ್ಡಿ, ನೆನುಮನಹಳ್ಳಿ ಚಂದ್ರಶೇಖರ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು