ಬುಧವಾರ, ಆಗಸ್ಟ್ 4, 2021
22 °C

ಬಲವಂತದ ಸಾಲ ವಸೂಲಿ ಬೇಡ: ಎಸ್‌.ಟಿ.ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡದಂತೆ ಸಹಕಾರಿ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಮಂಗಳವಾರ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.

‘ಕೊರೊನಾ ಸೋಂಕಿನ ಕಾರಣಕ್ಕೆ ಜಾರಿಯಾದ ಲಾಕ್‌ಡೌನ್‌ನಿಂದ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾಗಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರು ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್‌ಗಳು ಕೃಷಿ ಸಾಲದ ಕಂತು ಕಟ್ಟುವಂತೆ ರೈತರಿಗೆ ನೋಟಿಸ್‌ ನೀಡುತ್ತಿವೆ’ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿನಿಂದ ಕೃಷಿ ಕ್ಷೇತ್ರ ತತ್ತರಿಸಿದೆ. ದೇಶದ ಅರ್ಥ ವ್ಯವಸ್ಥೆ ಬುಡಮೇಲಾಗಿದ್ದು, ಕೋಟ್ಯಂತರ ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಬೀದಿ ಪಾಲಾಗಿದ್ದಾರೆ. ರೈತರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲ. ಬೆಳೆಗೆ ಖರ್ಚು ಮಾಡಿದ ಬಂಡವಾಳ ಸಹ ಕೈಸೇರದೆ ಎಂದು ರೈತರಿಗೆ ದಿಕ್ಕು ತೋಚದಂತಾಗಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ರೈತರಿಗೆ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆರ್‌ಬಿಐ ಸಾಲ ಪಾವತಿಗೆ 3 ತಿಂಗಳ ಕಾಲಾವಕಾಶ ನೀಡಿದೆ. ಆದರೆ, ಕೆಲವೆಡೆ ಸಹಕಾರಿ ಬ್ಯಾಂಕ್‌ಗಳು ಸಾಲ ಕಟ್ಟುವಂತೆ ರೈತರಿಗೆ ನೋಟಿಸ್‌ ಜಾರಿ ಮಾಡುತ್ತಿವೆ. ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐ ಆದೇಶ ಉಲ್ಲಂಘಿಸಿ ರೈತರನ್ನು ಶೋಷಿಸುತ್ತಿವೆ’ ಎಂದು ಕಿಡಿಕಾರಿದರು.

ಕಾಲಾವಕಾಶ ಬೇಕು: ‘ಆರ್‌ಬಿಐ ಮತ್ತು ಸರ್ಕಾರದ ಆದೇಶ ಕಡತಕ್ಕೆ ಮಾತ್ರ ಸೀಮಿತವಾಗಿದೆ. ರೈತರು ಸಾಲ ಮರುಪಾವತಿ ಮಾಡಲು ಸಿದ್ಧರಿದ್ದಾರೆ. ಆದರೆ, ಇದಕ್ಕೆ ಹೆಚ್ಚಿನ ಕಾಲಾವಕಾಶ ಕೊಡಬೇಕು. ಸಾಲದ ಕಂತು ಕಟ್ಟುವಂತೆ ರೈತರಿಗೆ ನೋಟಿಸ್‌ ಜಾರಿ ಮಾಡಬಾರದು. ಬಲವಂತವಾಗಿ ಸಾಲ ವಸೂಲಿ ಮಾಡದಂತೆ ಸಹಕಾರಿ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು’ ಎಂದು ಸಂಘಟನೆ ಸದಸ್ಯರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಸದಸ್ಯರಾದ ಮಂಜುನಾಥ್, ತಿಮ್ಮಣ್ಣ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು