ಶುಕ್ರವಾರ, ಜುಲೈ 30, 2021
27 °C

ಕೋಲಾರ: ಸಾಲ ಮನ್ನಾ ವದಂತಿಗೆ ಕಿವಿಗೊಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಸಕಾಲಕ್ಕೆ ಸಾಲದ ಕಂತು ಪಾವತಿಸಿದರೆ ಮಾತ್ರ ಶೂನ್ಯ ಬಡ್ಡಿ ಯೋಜನೆಯ ಪ್ರಯೋಜನ ಸಿಗುತ್ತದೆ. ಇಲ್ಲವಾದರೆ ಬಡ್ಡಿಯ ಹೊರೆ ಬೀಳುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಎಚ್ಚರಿಸಿದರು.

ತಾಲ್ಲೂಕಿನ ಅಣ್ಣಿಹಳ್ಳಿ ಎಸ್‍ಎಫ್‌ಸಿಎಸ್‌ ವ್ಯಾಪ್ತಿಯ ರೈತರಿಗೆ ಇಲ್ಲಿ ಶನಿವಾರ ₹ 98.70 ಲಕ್ಷ ಬೆಳೆ ಸಾಲದ ಚೆಕ್‌ ವಿತರಿಸಿ ಮಾತನಾಡಿ, ‘ರೈತರಿಗೆ ₹ 3 ಲಕ್ಷದವರೆಗೆ ಬೆಳೆ ಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ₹ 5 ಲಕ್ಷ ಶೂನ್ಯ ಬಡ್ಡಿ ಸಾಲ ನೀಡಲಾಗುತ್ತದೆ. ಉಳಿದಂತೆ ಕುರಿ, ಕೋಳಿ, ರೇಷ್ಮೆ ಹುಳು ಸಾಕಾಣಿಕೆಗೆ ಶೇ 3ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಸಾಲ ನೀಡಲಾಗುತ್ತದೆ’ ಎಂದರು.

‘ಸಾಲ ಮನ್ನಾ ವದಂತಿಗೆ ಕಿವಿಗೊಡಬೇಡಿ. ಸರ್ಕಾರ ಇದೀಗ ಕಂತು ಪಾವತಿಗೆ ಅವಕಾಶ ನೀಡಿರುವುದರಿಂದ ಬಡ್ಡಿ ಹೊರೆಯಾಗುತ್ತದೆ ಎಂಬ ಸತ್ಯ ಅರಿತು ಸಕಾಲಕ್ಕೆ ಮರುಪಾವತಿಸಿ. ಇದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಡ್ಡಿ ಯೋಜನೆಗಳ ಪ್ರೋತ್ಸಾಹಧನ ಸಿಗುತ್ತದೆ. ಬ್ಯಾಂಕ್ ಪೋಷಿಸುವ ಹೊಣೆ ನಿಮ್ಮ ಮೇಲಿದೆ’ ಎಂದು ಕಿವಿಮಾತು ಹೇಳಿದರು.

‘ಬ್ಯಾಂಕ್ ಪ್ರತಿ ಕುಟುಂಬಕ್ಕೂ ಸಾಲ ನೀಡುವ ಬದ್ಧತೆ ಹೊಂದಿದೆ. ₹ 15 ಕೋಟಿಯಿದ್ದ ಠೇವಣಿ ಹಣ ಇಂದು ₹ 300 ಕೋಟಿಯಾಗಲು ಬಡವರು, ರೈತರು ಮತ್ತು ಮಹಿಳೆಯರೇ ಕಾರಣ. ಬಡವರ ಶ್ರೇಯೋಭಿವೃದ್ದಿಯೇ ಬ್ಯಾಂಕ್‌ನ ಗುರಿ’ ಎಂದು ತಿಳಿಸಿದರು.

ಹೆಮ್ಮರವಾಗಿ ಬೆಳೆದಿದೆ: ‘ಡಿಸಿಸಿ ಬ್ಯಾಂಕ್ ದಿವಾಳಿಯಾಗಿದ್ದಾಗ ಸೊಸೈಟಿಗಳು ಸಂಪೂರ್ಣ ಮುಚ್ಚಿ ಹೋಗಿ ರೈತರು ಮತ್ತು ಮಹಿಳೆಯರಿಗೆ ಸರ್ಕಾರದ ಸಾಲ ಯೋಜನೆಗಳ ಪ್ರಯೋಜನ ಸಿಗದ ಪರಿಸ್ಥಿತಿ ಸೃಷ್ಟಿಯಾಗಿತ್ತು’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್‌ ವಿವರಿಸಿದರು.

‘ಬ್ಯಾಂಕ್ ಆರ್ಥಿಕವಾಗಿ ಚೇತರಿಸಿಕೊಂಡು ಹೆಮ್ಮರವಾಗಿ ಬೆಳೆದಿದೆ. ರೈತರು ಮತ್ತು ಮಹಿಳೆಯರ ಆರ್ಥಿಕ ಸಬಲತೆಗೆ ಶಕ್ತಿ ತುಂಬುವ ಸಾಮರ್ಥ್ಯ ಬ್ಯಾಂಕ್‌ ಪಡೆದುಕೊಂಡಿದೆ. ಸೊಸೈಟಿಗಳು ಆರ್ಥಿಕವಾಗಿ ಬಲಗೊಂಡು ರೈತರು, ಮಹಿಳೆಯರ ಬದುಕಿಗೆ ಆಸರೆಯಾಗಿವೆ. ಸೊಸೈಟಿಗಳಲ್ಲಿ ಪಾರದರ್ಶಕತೆ ಕಾಪಾಡಲು ಗಣಕೀಕರಣಕ್ಕೆ ಒತ್ತು ನೀಡಿದ್ದೇವೆ’ ಎಂದರು.

ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ವನಿತಾ, ನಿರ್ದೇಶಕರಾದ ಮುನೇಗೌಡ, ಸೊಸೈಟಿ ಮಾಜಿ ನಿರ್ದೇಶಕ ಚಂದ್ರಶೇಖರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು