ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆಗೆ ಕಳಂಕ ತರುವ ಕೆಲಸ ಮಾಡಬೇಡಿ: ಎಸ್ಪಿ ಎಂ.ನಾರಾಯಣ ಸೂಚನೆ

Last Updated 21 ಜನವರಿ 2023, 5:55 IST
ಅಕ್ಷರ ಗಾತ್ರ

ಕೋಲಾರ: ‘ಭೂ ವ್ಯಾಜ್ಯ, ಹಣಕಾಸು ಸಂಬಂಧಿಸಿದ ಸಿವಿಲ್‌ ಪ್ರಕರಣಗಳನ್ನು ಕಾನೂನು ಪ್ರಕಾರ ನಿಭಾಯಿಸಬೇಕು. ಈ ಪ್ರಕರಣಗಳಲ್ಲಿ ಪೊಲೀಸರು ಕೈಹಾಕುತ್ತಾರೆಂಬ ಕೆಟ್ಟ ಹೆಸರು ಜಿಲ್ಲೆಯಲ್ಲಿ ಬರಬಾರದು. ಈ ಸಂಬಂಧ ದೂರು ಬಂದರೆ ಸುಮ್ಮನಿರುವುದಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಶುಕ್ರವಾರ ಜಿಲ್ಲೆಯ ಸಮಸ್ತ ಪೊಲೀಸರಿಂದ ಕವಾಯತು ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಮಾದಕ ವಸ್ತು ಮಾರಾಟ, ಸಾಗಣೆದಾರರು ಹಾಗೂ ಬೆಟ್ಟಿಂಗ್‌ನಲ್ಲಿ ತೊಡಗುವವರನ್ನು ಮಟ್ಟಹಾಕಬೇಕು. ಆಕಸ್ಮಾತ್‌ ಅವರ ಜೊತೆ ಪೊಲೀಸ್‌ ಸಿಬ್ಬಂದಿ ಕೈಜೋಡಿಸಿದ್ದು ಕಂಡುಬಂದರೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು. ಅಂಥ ಪೊಲೀಸರು ನಮಗೆ ಬೇಡ. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಏನೇ ತಪ್ಪು ಮಾಡಿದರೂ ಬೇಗನೇ ಗೊತ್ತಾಗಿಬಿಡುತ್ತದೆ. ಇಲಾಖೆಗೆ ಕೆಟ್ಟ ಹೆಸರು ತರಬೇಡಿ’ ಎಂದು ಕಿವಿಮಾತು ಹೇಳಿದರು.

‘ರೌಡಿ ಶೀಟರ್‌ ವಿಚಾರದಲ್ಲಿ ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ನಡೆದಿದೆ. ವಯಸ್ಸಾದವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಶೋ ಮಾಡಿಕೊಳ್ಳಲು ಕೆಲವರು ಬಾಲ ಬಿಚ್ಚುತ್ತಾರೆ. ಬೆಂಗಳೂರಿನಿಂದ ಬರುವ ಸಾಧ್ಯತೆಯೂ ಇರುತ್ತದೆ. ಪುಂಡು ಪೋಕರಿಗಳ ಹಾವಳಿಯನ್ನು ನಿರ್ನಾಮ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಅಂಥವರು ಕಂಡರೆ ಗಡಿಪಾರು ಮಾಡಲು ಕ್ರಮ ವಹಿಸೋಣ. ಸಮನ್ಸ್‌ ಮತ್ತು ವಾರಂಟ್‌ ಹೊರಡಿಸಿ ತಲೆಮರೆಸಿಕೊಂಡ ಆರೋಪಿಗಳನ್ನು ಪತ್ತೆ ಹಚ್ಚಬೇಕು. ಈ ಸಂಬಂಧ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಪೊಲೀಸರ ಮೇಲಿದೆ’ ಎಂದು ತಿಳಿಸಿದರು.

‘ಕರ್ತವ್ಯಕ್ಕೆ ಹಾಜರಾಗದೆ ವಿನಾಕಾರಣ ಯಾವುದೇ ಪೊಲೀಸ್ ಸಿಬ್ಬಂದಿ ಕೇಂದ್ರ ಕಚೇರಿಗೆ ಅಥವಾ ಹೊರಗಡೆ ಓಡಾಡುವುದಕ್ಕೆ ಅನುಮತಿ ಇಲ್ಲ. ಏನೇ ದೂರುಗಳಿದ್ದರೂ ಸಂಬಂಧಪಟ್ಟ ಡಿವೈಎಸ್ಪಿ ಅನುಮತಿ ಪಡೆದು ಕೇಂದ್ರ ಕಚೇರಿಗೆ ಬರಬೇಕು’ ಎಂದರು.

ರಾತ್ರಿ ತಿರುಗಾಟಕ್ಕೆ ಕಡಿವಾಣ: ‘ಮಧ್ಯರಾತ್ರಿಯ 12 ಗಂಟೆ ನಂತರ ಸಾರ್ವಜನಿಕರ ತಿರುಗಾಟಕ್ಕೆ ಕಡಿವಾಣ ಹಾಕಬೇಕು. ಚಹಾ ಅಂಗಡಿ, ಮದ್ಯದ ಅಂಗಡಿ, ಹೋಟೆಲ್‌ ಸೇರಿದಂತೆ ಇತರೆ ಅಂಗಡಿಗಳು ತೆರೆಯುವುದನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕೆಲಸ ಮಾಡಬೇಕು. ಈ ಸಂಬಂಧ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಸೂಕ್ತವಾಗಿ ಕಾರ್ಯ ನಿರ್ವಹಿಸಬೇಕು. ನಾನು ಕೂಡ ದಿಢೀರ್‌ ಭೇಟಿ ನೀಡುತ್ತೇನೆ’ ಎಂದು ತಿಳಿಸಿದರು.

‘ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂಚಾರಿ ಪೊಲೀಸ್ ಮಾಡಬೇಕು’ ಎಂದು ನಿರ್ದೇಶಿಸಿದರು.

‘ಸಾರ್ವಜನಿಕರಿಗೆ ಸಮಸ್ಯೆಯಾದಲ್ಲಿ ಕೂಡಲೇ ಪೊಲೀಸ್ ಇಲಾಖೆಯ 112 ಟೋಲ್ ಫ್ರೀ ನಂಬರ್‌ಗೆ ಕರೆಮಾಡಿ ದೂರು ನೀಡಬಹುದು. ರಾತ್ರಿ ಹೆದ್ದಾರಿ ಸಂಚರಿತ ವಾಹನಗಳು ಸರಿಯಾದ ಸುರಕ್ಷಿತ ಕ್ರಮವನ್ನು ಕೈಗೊಳ್ಳಬೇಕು. ಹೊರ ರಾಜ್ಯಗಳಿಂದ ಬರುವ ವಾಹನಗಳ ಮೇಲೆ ನಿಗಾ ವಹಿಸಬೇಕು. ಇದರ ಜೊತೆಗೆ ಅಪಘಾತಗಳು ಸಂಭವಿಸಿದಾಗ ಅವರನ್ನು ರಕ್ಷಿಸಬೇಕು. ಹೆದ್ದಾರಿಗಳಲ್ಲಿ ವೈನ್‌ ಶಾಪ್‌ ಕಂಡುಬಂದರೆ ಕ್ರಮವಹಿಸಿ. ಅದರಿಂದ ಅಪಘಾತ ಹೆಚ್ಚುವ ಸಾಧ್ಯತೆಗಳಿರುತ್ತವೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪರೇಡ್‌ ಕಮಾಂಡರ್‌ ರಘು, ಬ್ಯಾಂಡ್‌ ಮಾಸ್ಟರ್‌ ಶಿವಾನಂದ್‌ ನೇತೃತ್ವದಲ್ಲಿ ಪೊಲೀಸರು ಪರೇಡ್‌ ನಡೆಸಿದರು. ಈ ವೇಳೆ ರಾತ್ರಿ ಗಸ್ತಿನಲ್ಲಿ ಉತ್ತಮವಾದ ಕರ್ತವ್ಯ ನಿಭಾಯಿಸಿದ ಸಿಬ್ಬಂದಿ ಕೃಷ್ಣಪ್ಪ, ಗುಣಶೇಖರ್ ಹಾಗೂ ಚಂದ್ರಶೇಖರ್ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಭಾರತ ಸೇವಾದಳದ ಅಧ್ಯಕ್ಷ ಕೆ.ಎಸ್‌.ಗಣೇಶ್‌, ಪ್ರೊಬೇಷನರಿ ಐಎಎಸ್‌ ಅಧಿಕಾರಿ ವಿನಾಯಕ, ಕೋಲಾರ ವಿಭಾಗದ ಡಿವೈಎಸ್ಪಿ ಮುರಳೀಧರ್‌, ಮುಳಬಾಗಿಲು ವಿಭಾಗದ ಡಿವೈಎಸ್ಪಿ ಜಯಶಂಕರ್‌, ಕಾರಾಗೃಹ ಅಧೀಕ್ಷಕ ಪರಮೇಶ್ವರ್‌ ಹಾಗೂ ಎಲ್ಲಾ ಪೊಲೀಸ್ ಅಧಿಕಾರಿಗಳು ಇದ್ದರು.

ಸೂಕ್ಷ್ಮ ಗ್ರಾಮಗಳಲ್ಲಿ ಬೀಟ್‌

‘ಚುನಾವಣೆ ಹಿನ್ನೆಲೆಯಲ್ಲಿ ಹೊಸ ಸ್ಪಾಟ್‌ ಬೀಟ್‌ ಮಾಡಬೇಕು. ಪ್ರಮುಖವಾಗಿ ಸೂಕ್ಷ್ಮ ಗ್ರಾಮಗಳಲ್ಲಿ ಶೇ 90ರಷ್ಟು ಬೀಟ್‌ ಮಾಡಬೇಕು. ಈ ಬಗ್ಗೆ ಕೇಂದ್ರ ವಲಯ ಐಜಿ ಡಾ.ಬಿ.ಆರ್‌.ರವಿಕಾಂತೇಗೌಡ ಅವರ ಸೂಚನೆ ಇದೆ. ಹೀಗಾಗಿ, ಎಲ್ಲಾ ಠಾಣಾಧಿಕಾರಿಗಳು ಪಾಲಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಚುನಾವಣೆ ವೇಳೆ ಸರಾಗವಾಗಿ ನಡೆಸಲು ಸಾಧ್ಯವಾಗುತ್ತದೆ’ ಎಂದು ನಾರಾಯಣ ಹೇಳಿದರು.

ದೌರ್ಜನ್ಯ; ಎಫ್‌ಐಆರ್‌ ದಾಖಲಿಸಿ’

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ನಮ್ಮದು ಶೇ ನೂರು ಎಫ್‌ಐಆರ್‌ ನೀತಿ. ದೂರು ಕೊಡಲು ಬಂದವರನ್ನು ಸತಾಯಿಸುವುದು, ಎಫ್‌ಐಆರ್‌ ದಾಖಲಿಸದಿರುವುದು, ಸ್ಥಳೀಯ ಪ್ರಭಾವಿಗಳಿಗೆ ಮಣೆ ಹಾಕುವುದನ್ನು ಮಾಡಬೇಡಿ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ಕಳುಹಿಸಿ. ಯಾವುದೇ ಮುಲಾಜಿಗೆ ಒಳಗಾಗಬೇಡಿ’ ಎಂದು ಎಸ್‌ಪಿ ನಾರಾಯಣ ತಿಳಿಸಿದರು.

ಕೊಲೆ ಪ್ರಕರಣ ಬಯಲಿಗೆ ತಂಡ

‘ಜಿಲ್ಲೆಯಲ್ಲಿ ಪತ್ತೆಯಾಗದ ಕೊಲೆ ಪ್ರಕರಣ ಬಯಲಿಗೆಳೆಯಲು ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗುವುದು. ಹೊಸದಾಗಿ ಬಂದ ಸಿಬ್ಬಂದಿ ಇರುಬಹುದು, ಪ್ರೊಬೇಷನರಿಗಳು, ಅನುಭವಿಗಳನ್ನು ಹಾಕಬೇಕು’ ಎಂದು ಹೇಳಿದರು.

‘ಈ ಸಂಬಂಧ ಡಿಆರ್‌ನಲ್ಲಿ ಅತ್ಯಾಧುನಿಕ ಕಂಪ್ಯೂಟರ್‌ ಹಾಗೂ ಇತರ ಅಗತ್ಯ ಉಪಕರಣ ಖರೀದಿಸಲಾಗುತ್ತಿದೆ. ತಂತ್ರಜ್ಞರ ತಂಡವೂ ಇರಲಿದೆ. ಈ ಸಂಬಂಧ ಎಲ್ಲಾ ಸಹಾಯ ಸಿಗಲಿದೆ’ ಎಂದರು.

ಮಧ್ಯಾಹ್ನ ಸಾರ್ವಜನಿಕರಿಗೆ ಲಭ್ಯ

‘ಸಾರ್ವಜನಿಕರು ತಮ್ಮ ಯಾವುದೇ ರೀತಿಯ ಕುಂದು ಕೊರತೆ ಅಥವಾ ದೂರನ್ನು ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಸಲ್ಲಿಸಬೇಕಾದರೆ ಮಧ್ಯಾಹ್ನ 3.30ರಿಂದ 5.30ವರೆಗೆ ಬರಬಹುದು. ಆ ಸಂದರ್ಭದಲ್ಲಿ ಕಚೇರಿಯಲ್ಲಿ ಲಭ್ಯವಿರುತ್ತೇನೆ. ಈ ಸಂಬಂಧ ಸಾರ್ವಜನಿಕರು ಸಹಕಾರ ನೀಡಬೇಕು. 112 ಸಂಖ್ಯೆಗೂ ಕರೆ ಮಾಡಿ ದೂರು ಕೊಡಬಹುದು’ ಎಂದು ನಾರಾಯಣ ಮನವಿ ಮಾಡಿದರು.

‘ಸಾರ್ವಜನಿಕರು ಅಥವಾ ಸಂಘ-ಸಂಸ್ಥೆಗಳು ಸಾರ್ವಜನಿಕ ಸ್ಥಳದಲ್ಲಿ ಬಹಿರಂಗ ಸಭೆ, ಪ್ರತಿಭಟನೆ, ಮೆರವಣಿಗೆಗಳಾಗಲಿ ನಡೆಸಬೇಕೆಂದರೆ ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯಲೇಬೇಕು. ತಪ್ಪಿದಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು’ ಎಂದರು.

‘ಪೊಲೀಸ್‌ ಸಿಬ್ಬಂದಿ ಕೂಡ ತಮ್ಮ ಕುಂದುಕೊರತೆಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ಎಎಸ್‌ಐ ಮೇಲಿನ ಅಧಿಕಾರಿಗಳು ಸ್ವರಕ್ಷಣೆಗಾಗಿ ಪಿಸ್ತೂಲ್‌, ರಿವಾಲ್ವಾರ್‌ ಇಟ್ಟು ಕೊಂಡಿರಬೇಕು. ಬರೀ ಆಯುಧಪೂಜೆ ದಿನ ಹೊರತೆಗೆಯುವುದಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT