ಕೋಲಾರ: ನಗರದಿಂದ ಮಲ–ಮೂತ್ರದೊಂದಿಗೆ ಹರಿಯುತ್ತಿರುವ ಕೊಳಚೆ ನೀರಿನ ಪೈಪ್ ದುರಸ್ತಿಗೆಂದು ರಾಷ್ಟ್ರೀಯ ಹೆದ್ದಾರಿ ರಾಯಲ್ ಎನ್‌ಫೀಲ್ಡ್ ಶೋ ರೂಂ ಬಳಿ ಗುಂಡಿ ತೋಡಿರುವುದರಿಂದ ಗಬ್ಬು ನಾರುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ–ಮೂತ್ರ ಕಟ್ಟಿಕೊಂಡಿರುವ ಜಾಗದಲ್ಲಿ ಗುಂಡಿ ತೋಡಿದ್ದು, ಮೂರು ದಿನಗಳಿಂದ ತೆರೆದೇ ಇದೆ. ನಗರಸಭೆ ಸಿಬ್ಬಂದಿ ಯಾವುದೇ ಸುರಕ್ಷತಾ ಸಾಧನವಿಲ್ಲದೆ ಕಾಮಗಾರಿಯಲ್ಲಿ ತೊಡಗಿದ್ದಾರೆ.
‘ಜೆಸಿಬಿ ಬಳಸಿ ಸುಮಾರು 10 ಅಡಿ ಗುಂಡಿ ತೋಡಿದ್ದು, ಮೂರು ದಿನಗಳಿಂದ ಹಾಗೆಯೇ ಇದೆ. ಈ ಭಾಗದಲ್ಲಿ ತಿರುಗಾಡಲು ಸಾಧ್ಯವಾಗದ ರೀತಿಯಲ್ಲಿ ದುರ್ವಾಸನೆ ಬರುತ್ತಿದೆ. ಸುತ್ತಲಿನ ಅಂಗಡಿಗಳವರಗೆ ವಾಸನೆ ಹರಡಿದೆ’ ಎಂದು ಸಾರ್ವಜನಿಕರು ದೂರಿದ್ದಾರೆ.
‘ನಗರಸಭೆ ಕಾರ್ಮಿಕರು ಯಾವುದೇ ಸುರಕ್ಷತಾ ಸಾಧನೆ ಇಲ್ಲದೆ ಕೆಲಸದಲ್ಲಿ ತೊಡಗಿದ್ದಾರೆ. ಅದು ಮಲಮೂತ್ರ ತುಂಬಿಕೊಂಡಿದ್ದು ಡೀಸೆಲ್ ಪಂಪ್ ಬಳಸಿ ಪೈಪ್‌ನಿಂದ ಕೈಯಲ್ಲೇ ಕೆಲಸ ಮಾಡುತ್ತಿದ್ದಾರೆ. ಇಂಥ ಕೆಲಸವನ್ನು ಸಕ್ಕಿಂಗ್ ಯಂತ್ರ ಬಳಸಿ ಮಾಡಬೇಕಿತ್ತು. ಆರೋಗ್ಯ ನಿರೀಕ್ಷಕರು ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಇಲ್ಲ. ಈ ರೀತಿ ಕೆಲಸ ಮಾಡಿಸುವುದು ಕಾನೂನು ಬಾಹಿರ. ನಗರಸಭೆ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿಯ ಪರಮಾವಧಿ ಇದು’ ಎಂದು ಆರೋಪಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಸ್ಥಳದ ಬಳಿ ಫಲಕವಾಗಲಿ, ತಡೆಗೋಡೆ ಆಗಲಿ ಹಾಕಿಲ್ಲ. ಇದರಿಂದ ವಾಹನ ಸವಾರರು, ಪಾದಚಾರಿಗಳು ಆತಂಕದಿಂದಲೇ ತೆರಳಬೇಕಾದ ಪರಿಸ್ಥಿತಿ ನೆಲೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.