ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯತೆ ಇಲ್ಲದ ಪಠ್ಯ ಅಪೂರ್ಣ: ಕೋಟಿಗಾನಹಳ್ಳಿ ರಾಮಯ್ಯ

ಜಿಲ್ಲಾಮಟ್ಟದ ನಾಟಕ ಸ್ಪರ್ಧೆಗೆ ಕೋಟಿಗಾನಹಳ್ಳಿ ರಾಮಯ್ಯ ಚಾಲನೆ
Last Updated 8 ಸೆಪ್ಟೆಂಬರ್ 2022, 6:58 IST
ಅಕ್ಷರ ಗಾತ್ರ

ಕೋಲಾರ: ‘ಭಾರತದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ, ಮಕ್ಕಳ ಬೆಳವಣಿಗೆಗೆ ಅಷ್ಟಾಗಿ ಆದ್ಯತೆ ನೀಡುತ್ತಿಲ್ಲ. ಸ್ವೀಡನ್‌ನಂಥ ದೇಶದಲ್ಲಿ ರಂಗಭೂಮಿಯು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಮಕ್ಕಳ ಕಲಿಕೆಗೆ ಪ್ರಾಧಾನ್ಯ ಕೊಡಲಾಗುತ್ತಿದೆ. ಆ ಪದ್ಧತಿ ಇಲ್ಲೂ ಬರಬೇಕಿದೆ’ ಎಂದು ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಪಾದಿಸಿದರು.

ಕರ್ನಾಟಕ ನಾಟಕ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಲಾ ನಿತಾಂತ ಟ್ರಸ್ಟ್ ಹಾಗೂ ರಂಗ ವಿಜಯಾ ಟ್ರಸ್ಟ್ ಬುಧವಾರ ಇಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪಠ್ಯ ಪರಿಷ್ಕರಣೆ ಗೊಂದಲದ‌ ಗೂಡಾಗಿದೆ. ಸ್ಥಳೀಯತೆ ಇಲ್ಲದಿದ್ದರೆ ಅದು ಅಪೂರ್ಣ. ಮಾಸ್ತಿ ಹಾಗೂ ಮಾಸ್ತಮ್ಮನ ಕಥೆ (ಕೆರೆ ಕಥೆ) ಎರಡೂ ಇರಬೇಕು. ಒಂದು ಇಲ್ಲದಿದ್ದರೂ ಪರಿಪೂರ್ಣಗೊಳ್ಳುವುದಿಲ್ಲ. ಕೆರೆ ಬಗ್ಗೆ ಒಂದು ಪಠ್ಯ ಇಲ್ಲದ ಮೇಲೆ ಅದೆಂಥಾ ಪಠ್ಯ’ ಎಂದು ಪ್ರಶ್ನಿಸಿದರು.

‘ಪಠ್ಯಗಳನ್ನು ಪರಿಷ್ಕರಣೆ ಮಾಡುವುದು ಅಲ್ಲ; ಬದಲಾಗಿ ಪಠ್ಯ ಸೌಂದರ್ಯೀಕರಣಗೊಳಿಸಬೇಕು, ನ್ಯಾಯಿಕರಣಗೊಳಿಸಬೇಕು. ಮಕ್ಕಳಿಗೆ ಅ‌ ಆ ಇ ಈ ಕಲಿಸುವ ಮೊದಲು ಚಿತ್ರಕಲೆ ಬಗ್ಗೆ ಹೇಳಿಕೊಡಬೇಕು' ಎಂದು ಸಲಹೆ ನೀಡಿದರು.

‘ತಜ್ಞರು ರೂಪಿಸುವ ಶಿಕ್ಷಣ ಪದ್ಧತಿ, ಪಠ್ಯ ವಿಧಾನ ನ್ಯಾಯಯುತವಾಗಿಲ್ಲ. ಏಕೆಂದರೆ ಅವರು ತಜ್ಞರಾಗಿರುವುದಿಲ್ಲ. ಮಕ್ಕಳ ಅಭಿಪ್ರಾಯ ಆಲಿಸಿ ಯಾವತ್ತಾದರೂ ಪಠ್ಯ ತಯಾರಿಸಿದ್ದೇವೆಯೇ? ಮಕ್ಕಳಿಗೆ ಬೇಕಿರುವುದು ಕಲ್ಪನೆಯ ಹಕ್ಕು’ ಎಂದು ತಿಳಿಸಿದರು.

ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಮಾತನಾಡಿ, ‘ಕಾರ್ಯಕ್ರಮಕ್ಕೆಣಕಾಸಿನ ನೆರವು ನೀಡಲು ಸಾಧ್ಯವಾಗಿಲ್ಲ ಎಂಬ ನೋವು ಇದೆ. ಆದರೆ, ಅತ್ಯುತ್ತಮ ವೇದಿಕೆ ದೊರಕಿಸಿಕೊಟ್ಟ ಖುಷಿ ಇದೆ. ಇದೇ ನಮಗೆ ಆದರ್ಶ. ಇಲ್ಲಿ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಬರಬೇಕು' ಎಂದರು.

ಜಿಲ್ಲೆಯ ವಿವಿಧ ಶಾಲೆಯ ಮಕ್ಕಳು ನಾಟಕ ಪ್ರದರ್ಶಿಸಿದರು. ಅಕಾಡೆಮಿ ಸದಸ್ಯರಾದ ಮಾಲೂರು ವಿಜಿ, ಪ್ರಸನ್ನ ಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಎನ್‌.ಬಿ.ಗೋಪಾಲಗೌಡ, ಡಿಡಿಪಿಐ ಕೃಷ್ಣಮೂರ್ತಿ, ಡಿಡಿಪಿಐ ಕಚೇರಿಯ ಕನ್ನಡ ವಿಷಯ ಪರಿಣತ ಶಂಕರೇಗೌಡ, ಕನ್ನಡ ಹೋರಾಟಗಾರ ಶ್ರೀನಿವಾಸ್, ರಂಗ ವಿಜಯಾ ಟ್ರಸ್ಟ್‌ನ ಗೌರವ ಅಧ್ಯಕ್ಷ ಪಲ್ಲವಿ ಮಣಿ, ಕರ್ನೂಲ್‌ ಕನ್ನಡ ಸಂಘದ ಅಧ್ಯಕ್ಷೆ ಗೀತಾಚಂದ್ರ,‌ ಕಲಾ ನಿತಾಂತ ಟ್ರಸ್ಟ್‌ನ ಗೀತಾ ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT