ಗುರುವಾರ , ಅಕ್ಟೋಬರ್ 29, 2020
19 °C
ಮಹತ್ವದ ಯೋಜನೆಗಳಿಗೆ ಮುನ್ನುಡಿ: ಅಭಿವೃದ್ಧಿ ಪಥದಲ್ಲಿ ದಾಪುಗಾಲು

ಜಿಲ್ಲೆಯಲ್ಲಿ ಗರಿಗೆದರಿದ ಕೈಗಾರಿಕೀಕರಣದ ಕನಸು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೃಷಿ ಪ್ರಧಾನ ಜಿಲ್ಲೆಯಲ್ಲಿ ಕೈಗಾರಿಕೀಕರಣದ ಕನಸು ಗರಿಗೆದರಿದ್ದು, ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ದಾಪುಗಾಲಿಟ್ಟಿದೆ.

ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಯತ್ತ ದೇಸಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳು, ಕೈಗಾರಿಕೆಗಳು ಮುಖ ಮಾಡುತ್ತಿವೆ. ಜಿಲ್ಲೆಯು ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಳವೆಂಬ ಭಾವನೆ ಬಲಗೊಂಡಿದ್ದು, ಹೂಡಿಕೆದಾರರು ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಜಾಗತಿಕವಾಗಿ ದೇಶ ಹಾಗೂ ರಾಜ್ಯ ಮಟ್ಟದಲ್ಲಿ ಕ್ಷಿಪ್ರ ಗತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ತಕ್ಕಂತೆ ಜಿಲ್ಲೆಯ ಅಭಿವೃದ್ಧಿ ವೇಗ ಹೆಚ್ಚಬೇಕು ಎಂಬುದು ಜನರ ಅಪೇಕ್ಷೆಯಾಗಿದೆ. ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಚಟುವಟಿಕೆಗಳು ಕಾಲಕ್ಕೆ ತಕ್ಕಂತೆ ಸಾಕಷ್ಟು ಪ್ರಗತಿ ಸಾಧಿಸುತ್ತಾ ಬಂದಿವೆ. ಇದರ ಜತೆಗೆ ಇಂದಿನ ಕೈಗಾರಿಕೀಕರಣ ಯುಗದಲ್ಲಿ ಕೈಗಾರಿಕೆಗಳು ಬೆಳೆಯುವ ಅಗತ್ಯವಿದೆ.

ಜಿಲ್ಲೆಯು ಅಭಿವೃದ್ಧಿ ದಿಸೆಯಲ್ಲಿ ನಾಗಾಲೋಟದಿಂದ ಸಾಗುತ್ತಿದ್ದು, ಲಭ್ಯ ಮಾನವ ಸಂಪನ್ಮೂಲ ಸದ್ಬಳಕೆಗೆ ಉದ್ಯೋಗಾವಕಾಶ ಸೃಷ್ಟಿಸುವುದು ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗಾರಿಕಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ.

ಬೆಂಗಳೂರಿನ ಮೇಲಿನ ಒತ್ತಡ ನಿವಾರಣೆಗಾಗಿ ಸರ್ಕಾರ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಮುಂದಾಗಿದೆ. ಮುಖ್ಯವಾಗಿ ಬೆಂಗಳೂರಿಗೆ ಸಮೀಪದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಕೈಗಾರಿಕಾ ಪ್ರದೇಶಗಳ ಆರಂಭಕ್ಕೆ ಆಸಕ್ತಿ ತೋರಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶಗಳ ಸ್ಥಾಪನೆ, ವಿಶೇಷ ಆರ್ಥಿಕ ವಲಯ ಸ್ಥಾಪನೆ ಹಾಗೂ ಚಿನ್ನದ ಗಣಿಗಾರಿಕೆ ಪುನರಾರಂಭದಂತಹ ಮಹತ್ವದ ಯೋಜನೆಗಳಿಗೆ ಸರ್ಕಾರ ಮುನ್ನುಡಿ ಬರೆದಿದ್ದು, ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಪ್ರಸ್ತಾಪಿತ ಯೋಜನೆಗಳು: ಬೆಂಗಳೂರಿಗೆ ಪರ್ಯಾಯವಾಗಿ ಕೋಲಾರ ಜಿಲ್ಲೆಯನ್ನು ‘ಕೈಗಾರಿಕಾ ಹಬ್‌’ ಮಾಡಲು ಮುಂದಾಗಿರುವ ಸರ್ಕಾರ ಕೆಜಿಎಫ್‌ನ ಬಿಜಿಎಂಎಲ್‌ ಕಾರ್ಖಾನೆ ವಶದಲ್ಲಿರುವ 2,212 ಎಕರೆ ಜಮೀನಿನಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಮಾಡಲು ಉದ್ದೇಶಿಸಿದೆ.

ಕೆಜಿಎಫ್‌ನ ಬೆಮಲ್‌ ಸುಪರ್ದಿನಲ್ಲಿರುವ 973 ಎಕರೆ ಜಮೀನಿನಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲು ಉದ್ದೇಶಿಸಲಾಗಿದೆ. ಹೊಸ ಕೈಗಾರಿಕಾ ಪ್ರದೇಶಕ್ಕಾಗಿ ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಗ್ರಾಮದ ಸುತ್ತಮುತ್ತ 1,558 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

ಕೋಲಾರ ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದ ಪಕ್ಕ 2ನೇ ಹಂತದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು 520 ಎಕರೆ ಜಮೀನು ಗುರುತಿಸಿದ್ದು, ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ನರಸಾಪುರ ಕೈಗಾರಿಕಾ ಪ್ರದೇಶದ ಬಳಿಯ ಮಿಂಡಹಳ್ಳಿ, ಕರಡುಬಂಡೆ, ಹೊಸಹಳ್ಳಿ, ಖಾಜಿ ಕಲ್ಲಹಳ್ಳಿ, ಅಚ್ಚಟ್ನಹಳ್ಳಿ ಸುತ್ತಮುತ್ತ 2ನೇ ಹಂತದಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ 877 ಎಕರೆ ಜಮೀನು ಗುರುತಿಸಿ, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ.

50 ಸಾವಿರ ಉದ್ಯೋಗ: ಕೆಜಿಎಫ್‌ನ ಚಿನ್ನದ ಗಣಿ ಪ್ರದೇಶದಲ್ಲಿನ ಜಮೀನು ಬಳಕೆಗೆ ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಕೇಂದ್ರದ ತಂಡವು ಸಮೀಕ್ಷೆ ನಡೆಸಿ ಖನಿಜಗಳು ಇಲ್ಲದಿರುವ ಬಗ್ಗೆ ವರದಿ ನೀಡಿದರೆ ರಾಜ್ಯ ಸರ್ಕಾರಕ್ಕೆ ಜಮೀನು ಹಸ್ತಾಂತರವಾಗಲಿದೆ. ಅದೇ ರೀತಿ ಬೆಮಲ್‌ ಒಡೆತನದ ಜಮೀನನ್ನು ಕೈಗಾರಿಕಾ ವಸಾಹತು ಸ್ಥಾಪನೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಜಮೀನು ಹಸ್ತಾಂತರಿಸುವಂತೆ ಕೋರಿ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ.

ಬರಪೀಡಿತ ಜಿಲ್ಲೆಯಲ್ಲಿ ಕೃಷಿ ನಿರ್ವಹಣೆ ದೊಡ್ಡ ಸವಾಲಾಗಿದೆ. ಕೆಜಿಎಫ್‌ನ ಚಿನ್ನದ ಗಣಿ ಮುಚ್ಚಿದ ಬಳಿಕ ಸುಮಾರು 3 ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ ಗಣಿ ಕಾರ್ಮಿಕರು ಸೇರಿದಂತೆ ಸುಮಾರು 20 ಸಾವಿರ ಮಂದಿ ನಿರುದ್ಯೋಗಿಗಳು ಕೆಲಸಕ್ಕಾಗಿ ಪ್ರತಿನಿತ್ಯ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಹೊಸ ಕೈಗಾರಿಕಾ ಪ್ರದೇಶಗಳ ಸ್ಥಾಪನೆ ಮತ್ತು ಕೈಗಾರಿಕಾ ಪ್ರದೇಶಗಳ ವಿಸ್ತರಣೆಯ ಕನಸು ಸಾಕಾರಗೊಂಡರೆ ಸ್ಥಳೀಯವಾಗಿ ಸುಮಾರು 50 ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು, ಕಾರ್ಮಿಕರ ಮಹಾ ವಲಸೆ ತಪ್ಪುವ ನಿರೀಕ್ಷೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.