ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ಹರಿದ ಯರಗೋಳ್‌ ನೀರು!

ಕೋಲಾರ ನಗರದಲ್ಲಿ ನೀರು ಹರಿಸಿ ಪ್ರಾಯೋಗಿಕ ಪರೀಕ್ಷೆ–ಉದ್ಘಾಟನೆ ನಂತರ ಬಳಕೆಗೆ ಲಭ್ಯ
Published 20 ಅಕ್ಟೋಬರ್ 2023, 5:39 IST
Last Updated 20 ಅಕ್ಟೋಬರ್ 2023, 5:39 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿ ಯರಗೋಳ್‌ ಜಲಾಶಯದ ಕುಡಿಯುವ ನೀರು ಪೂರೈಕೆ ಯೋಜನೆಯು ಕೊನೆಗೂ ಅನುಷ್ಠಾನಗೊಳ್ಳುವ ದಿನಗಳು ಸನ್ನಿಹಿತವಾಗಿವೆ.

ಜಲಾಶಯದ ನೀರನ್ನು ಕೋಲಾರ ನಗರದ ವಿವಿಧ ಬಡಾವಣೆಗಳಲ್ಲಿನ ಮನೆಗಳಿಗೆ ಪ್ರಾಯೋಗಿಕವಾಗಿ ಹರಿಸಿ ಪರೀಕ್ಷಿಸುವ ಕಾರ್ಯ ನಡೆಯುತ್ತಿದೆ.

ಕರ್ನಾಟಕ ನಗರ ನೀರು ಸರಬರಾಜು ಒಳ ಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಶರತ್ ಹಾಗೂ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದರು.

ಸ್ಯಾನಿಟೋರಿಯಂ ಬಳಿ ಇರುವ ಗಾಜಲದಿನ್ನೆಯಲ್ಲಿನ ಶುದ್ಧೀಕರಣ ಘಟಕದಿಂದ ನಗರದಲ್ಲಿನ ಆರು ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ನೀರು ತುಂಬಿಸಿ ಅಲ್ಲಿಂದ ಪೈಪ್‌ ಮೂಲಕ ಮನೆಗಳ ನಲ್ಲಿಗೆ ಹರಿಸಲಾಯಿತು. ಪೈಪ್‌ಲೈನ್‌, ನಲ್ಲಿ ಹಾಗೂ ಮೀಟರ್‌ಗಳನ್ನು ಅಧಿಕಾರಿಗಳು ಪರೀಕ್ಷಿಸಿದರು.

‘ಪ್ರಾಯೋಗಿಕವಾಗಿ ನೀರು ಹರಿಸಿ ಪರಿಶೀಲನಾ ಕಾರ್ಯ ನಡೆಸುತ್ತಿದ್ದೇವೆ. ಕೆಲವೆಡೆ ಸೋರಿಕೆ ಇದ್ದು, ಅದನ್ನು ದುರಸ್ತಿ ಮಾಡುತ್ತಿದ್ದೇವೆ. ಪೈಪ್‌ಲೈನ್‌ ಹಾಗೂ ನಲ್ಲಿ ಅಳವಡಿಸಿ 3–4 ವರ್ಷಗಳೇ ಕಳೆದಿದೆ. ಹೀಗಾಗಿ, ಕಾಮಗಾರಿ ವೇಳೆ ಕೆಲವೆಡೆ ಪೈಪ್‌ಲೈನ್‌ಗೆ ಧಕ್ಕೆ ಆಗಿದೆ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೋಲಾರದ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಟ್ಟು 11 ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ನೀರು ಭರ್ತಿ ಮಾಡಿ ಮನೆಗಳಿಗೆ ಹರಿಸುವ ಉದ್ದೇಶ ಹೊಂದಲಾಗಿದೆ. ಹೊಸದಾಗಿ ಎರಡು ಟ್ಯಾಂಕ್‌ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಎರಡು ಟ್ಯಾಂಕ್‌ ನಿರ್ಮಾಣ ಸಂಬಂಧ ಜಾಗದ ಸಮಸ್ಯೆ ಇದೆ. ಸದ್ಯ ಆರು ಟ್ಯಾಂಕ್‌ಗಳಿಗೆ ಭರ್ತಿ ಮಾಡಿ ಹರಿಸಲಾಗಿದೆ’ ಎಂದರು.

ಮುಂದಿನ ತಿಂಗಳು 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದು, ಬಳಿಕವಷ್ಟೇ ನೀರು ಬಳಕೆಗೆ ಯೋಗ್ಯವಾಗಲಿದೆ. ಅಲ್ಲಿವರೆಗೆ ಪ್ರಾಯೋಗಿಕ ಪರೀಕ್ಷೆ ಮುಂದುವರಿಯಲಿದೆ.

ಈಗಾಗಲೇ ‌ಬಂಗಾರಪೇಟೆಯ ಪಂಪ್‌ಹೌಸ್‌ನಿಂದ ಸುಮಾರು 17.2 ಕಿ.ಮೀ ದೂರದಲ್ಲಿರುವ ಕೋಲಾರದ ಗಾಜಲದಿನ್ನೆಯಲ್ಲಿನ ಶುದ್ಧೀಕರಣ ಘಟಕಕ್ಕೆ ಹರಿಸಲಾಗಿದೆ.

ಯರಗೋಳ್ ಜಲಾಶಯದಿಂದ ಸುಮಾರು 24.5 ಕಿ.ಮೀ ದೂರದಲ್ಲಿರುವ ಬಂಗಾರಪೇಟೆ ಸಮೀಪದ ಆನಂದಗಿರಿಗೆ ಈಗಾಗಲೇ ನೀರನ್ನು ಪಂಪ್ ಮಾಡಲಾಗುತ್ತಿದೆ. ಆನಂದಗಿರಿಯಲ್ಲಿ ಎರಡು ಪಂಪ್‌ಹೌಸ್‌ ಇದ್ದು, ಒಂದು ಪಂಪ್‌ನಿಂದ ಜಲಾಶಯದಿಂದ ಬಂದ ನೀರನ್ನು ನೇರವಾಗಿ ಕೋಲಾರದ ಘಟಕಕ್ಕೆ ಹರಿಸಲಾಗುತ್ತದೆ.

ಗಾಜಲದಿನ್ನೆಯಲ್ಲಿನ ಸಂಸ್ಕರಣ ಘಟಕವು ನಿತ್ಯ 30.42 ದಶ ಲಕ್ಷ ಲೀಟರ್‌ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ.

ಈಗಾಗಲೇ ಜಲಾಶಯದಿಂದ ನೀರನ್ನು ಬಂಗಾರಪೇಟೆಯ ಆನಂದಗಿರಿಯಲ್ಲಿ ನಿರ್ಮಿಸಿರುವ ಸಂಸ್ಕರಣ ಘಟಕಕ್ಕೆ ಹರಿಸಲಾಗುತ್ತಿದೆ. 4.25 ಎಕರೆ ಜಾಗದಲ್ಲಿ ₹ 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಂಸ್ಕರಣ ಘಟಕ ಇದಾಗಿದೆ. ನಿತ್ಯ 13 ದಶಲಕ್ಷ ಲೀಟರ್‌ ನೀರು ಶುದ್ಧೀಕರಣ ಮಾಡಬಹುದು. ಈ ಘಟಕದಿಂದ ನೀರನ್ನು ಬಂಗಾರಪೇಟೆ ಹಾಗೂ ಮಾಲೂರಿಗೆ ಪೂರೈಸುವ ಯೋಜನೆ ಹೊಂದಲಾಗಿದೆ. ಬಂಗಾರಪೇಟೆ ಪಟ್ಟಣದಲ್ಲೂ ಮನೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಿ ಪರೀಕ್ಷಿಸಲಾಗುತ್ತಿದೆ.

ಕೋಲಾರ ನಗರದಲ್ಲಿನ ಮನೆಗಳಿಗೆ ಪ್ರಾಯೋಗಿಕವಾಗಿ ಯರಗೋಳ್‌ ಜಲಾಶಯದ ನೀರು ಹರಿಸಲಾಯಿತು
ಕೋಲಾರ ನಗರದಲ್ಲಿನ ಮನೆಗಳಿಗೆ ಪ್ರಾಯೋಗಿಕವಾಗಿ ಯರಗೋಳ್‌ ಜಲಾಶಯದ ನೀರು ಹರಿಸಲಾಯಿತು
ಮುಖ್ಯಮಂತ್ರಿ ಉದ್ಘಾಟನೆ ನೆರವೇರಿಸಿದ ಮಾರನೇ ದಿನದಿಂದಲೇ ಕುಡಿಯುವ ನೀರನ್ನು ಮನೆಗಳಿಗೆ ಪೂರೈಸಲಾಗುವುದು. ಅದಕ್ಕೆ ಎಲ್ಲಾ ರೀತಿಯಲ್ಲಿ ಸಜ್ಜಾಗುತ್ತಿದ್ದೇವೆ
ಚಂದ್ರಶೇಖರ್‌ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್‌

45 ಹಳ್ಳಿಗಳಿಗೆ ನೀರು ಪೂರೈಕೆ

ಕುಡಿಯುವ ನೀರಿಗೆ ಮೀಸಲಾದ ಜಿಲ್ಲೆಯ ಏಕೈಕ ಯೋಜನೆ ಯರಗೋಳ್‌ ಜಲಾಶಯ. ಕೋಲಾರ ಬಂಗಾರಪೇಟೆ ಮಾಲೂರು ತಾಲ್ಲೂಕು ಒಳಗೊಂಡಂತೆ ಮಾರ್ಗ ಮಧ್ಯದ 45 ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. 2020ರಲ್ಲೇ ಅಣೆಕಟ್ಟೆ ಕಾಮಗಾರಿ ಪೂರ್ಣಗೊಂಡು 2021ರ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆ ಕಾರಣ ಭರ್ತಿಯಾಗಿತ್ತು. ಆದರೆ ಉದ್ಘಾಟನೆ ಭಾಗ್ಯ ಕಂಡಿಲ್ಲ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT