ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟ ಮಾದರಿಯಲ್ಲಿ ಮರ ಬೆಳೆಸಿ

ದೊಡ್ಡಹಸಾಳ ಗ್ರಾ.ಪಂ ಕೆರೆಗಳಲ್ಲಿ ಅರಣ್ಯೀಕರಣಕ್ಕೆ ಸಿಇಒ ಚಾಲನೆ
Last Updated 3 ಜೂನ್ 2020, 17:21 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್‌ ತಾಲ್ಲೂಕಿನ ದೊಡ್ಡಹಸಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಅರಣ್ಯೀಕರಣಕ್ಕೆ ಬುಧವಾರ ಚಾಲನೆ ನೀಡಿದರು.

‘ಕೆರೆಗಳ ಜತೆಗೆ ಎಲ್ಲಾ ಸರ್ಕಾರಿ ಜಮೀನುಗಳಲ್ಲಿ ಸಸಿ ನೆಡುವ ಮೂಲಕ ಅರಣ್ಯೀಕರಣ ಹೆಚ್ಚಿಸಬೇಕು. ಅಂತರ್ಜಲ ಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತಿರುವ ನೀಲಗಿರಿಯನ್ನು ಸರ್ಕಾರ ನಿಷೇಧಿಸಿದ್ದು, ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ನೀಲಗಿರಿ ತೆರವುಗೊಳಿಸಬೇಕು’ ಎಂದು ದರ್ಶನ್‌ ಸಲಹೆ ನೀಡಿದರು.

‘ಅರಣ್ಯ ನಾಶ ಹಾಗೂ ಪರಿಸರ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳಿಂದ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿದೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದ ಮಾದರಿಯಲ್ಲಿ ಮರಗಳನ್ನು ಬೆಳೆಸಿದರೆ ಉತ್ತಮ ಮಳೆಯಾಗುವ ಅವಕಾಶವಿದೆ. ಮರಗಳು ಮೋಡಗಳನ್ನು ಆಕರ್ಷಿಸುತ್ತವೆ ಮತ್ತು ಮರದ ಕಣಗಳಿಂದ ಮಳೆಯಾಗುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಜನರು ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಾಗಿ ಮರ ಬೆಳೆಸುವುದು ಅನಿವಾರ್ಯ. ಗ್ರಾಮೀಣ ಪ್ರದೇಶದಲ್ಲಿ ರೈತರು ಖಾಲಿ ಜಾಗದಲ್ಲಿ ಮರ ಬೆಳೆಸಬೇಕು. ಕೃಷಿ ಜಮೀನಿನ ಬದುಗಳಲ್ಲಿ ಮರ ನೆಟ್ಟು ಬೆಳೆಸಬೇಕು. ಇದರಿಂದ ಪರಿಸರ ಸಂರಕ್ಷಣೆ ಮಾಡಬಹುದು’ ಎಂದು ಹೇಳಿದರು.

‘ರೈತರು ಹೊಲಗಳ ಬದುವಿನಲ್ಲಿ ಮರ ಬೆಳೆಸಿದರೆ ಗಾಳಿ ಬೀಸುವುದು ಕಡಿಮೆಯಾಗಿ ಭೂಮಿಯಲ್ಲಿ ತೇವಾಂಶವಿರುತ್ತದೆ. ಇದು ಇಳುವರಿ ಹೆಚ್ಚಳಕ್ಕೂ ಸಹಕಾರಿ. ಉತ್ತಮ ಮಳೆಯಾದರೆ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಮತ್ತು ರೈತರ ಆದಾಯ ಹೆಚ್ಚುತ್ತದೆ’ ಎಂದು ಅಭಿಪ್ರಾಯಪಟ್ಟರು.

ಅರಣ್ಯೀಕರಣ: ‘ಗ್ರಾ.ಪಂ ವ್ಯಾಪ್ತಿಯ ಚಿಕ್ಕಹಸಾಳ, ಈಕಂಬಳ್ಳಿ ಮತ್ತು ಕುರುಬರಹಳ್ಳಿಯ ಕೆರೆಗಳಲ್ಲಿ 3 ಸಾವಿರ ಗಿಡಗಳನ್ನು ನೆಟ್ಟು ಅರಣ್ಯೀಕರಣ ಮಾಡಲಾಗುತ್ತಿದೆ. ಪರಸರ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ರೈತರಿಗೆ ನೀರಿನ ಸಮಸ್ಯೆಯ ಅರಿವಿದೆ. ಪರಿಸರಕ್ಕೆ ಮಾರಕವಾದ ನೀಲಗಿರಿ ಮರಗಳನ್ನು ತೆರವುಗೊಳಿಸಿ ಬೇರೆ ಜಾತಿಯ ಮರ ಬೆಳೆಸಬೇಕು’ ಎಂದು ದೊಡ್ಡಹಸಾಳ ಪಿಡಿಒ ಸಿ.ಆರ್.ಗೌಡ ತಿಳಿಸಿದರು.

ದೊಡ್ಡಹಸಾಳ ಗ್ರಾ.ಪಂ ಅಧ್ಯಕ್ಷ ನಾರಾಯಣಸ್ವಾಮಿ, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್‌, ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಿಂದು, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT