ಮಂಗಳವಾರ, ಅಕ್ಟೋಬರ್ 15, 2019
26 °C
ಅಡುಗೆ ಕೆಲಸಗಾರರಿಗೆ ಅಸಂಘಟಿತ ಕಾರ್ಮಿಕರ ಸ್ಥಾನಮಾನ

ಅ.8ಕ್ಕೆ ಗುರುತಿನ ಚೀಟಿ ವಿತರಣೆಗೆ ಚಾಲನೆ

Published:
Updated:

ಕೋಲಾರ: ‘ಅಡುಗೆ ಕೆಲಸಗಾರರಿಗೆ ಅಸಂಘಟಿತ ಕಾರ್ಮಿಕರ ಸ್ಥಾನಮಾನ ಸಿಕ್ಕಿದ್ದು, ಅ.8ರಂದು ಸಂಘದ ಕಚೇರಿಯಲ್ಲಿ ಕೆಲಸಗಾರರಿಗೆ ಗುರುತಿನ ಚೀಟಿ ವಿತರಿಸಲಾಗುವುದು’ ಎಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಪರಿಷತ್ ಅಧ್ಯಕ್ಷ ಕೆ.ವಿ. ಸುರೇಶ್‌ಕುಮಾರ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಇದುವರೆಗು 360 ಮಂದಿ ನೋಂದಣಿ ಮಾಡಿಸಿಕೊಂಡಿದ್ದು, ಉಳಿದವರನ್ನು ಗುರುತಿಸಿ ನೋಂದಣಿ ಮಾಡಿಸಿಕೊಳ್ಳಲಾಗುವುದು’ ಎಂದರು.

‘ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಡುಗೆ ಕೆಲಸಗಾರರ ಅಸಂಘಟಿತರಿಗೆ ಗುರುತಿನ ಚೀಟಿ ವಿತರಿಸಲು ಕ್ರಮಕೈಗೊಂಡಿದ್ದು, ವೃತ್ತಿ ಕೌಶಲ ತರಬೇತಿ ನೀಡಲಾಗುವುದು, ಇದರ ಪ್ರಯೋಜನೆ ಪಡೆದುಕೊಳ್ಳಲು ಅಡುಗೆ ಕೆಲಸಗಾರರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ ಹೋಟೆಲ್, ಕಲ್ಯಾಣ ಮಂಟಪ ಇನ್ನಿತರೆಡೆ 10 ಲಕ್ಷಕ್ಕೂ ಹೆಚ್ಚು ಅಡುಗೆ ಕೆಲಸಗಾರರು, ಸಹಾಯಕರು ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರದ ಸೌಕರ್ಯಗಳಿಂದ ವಂಚಿತರಾಗಿದ್ದರು. ಕಳೆದ 13 ವರ್ಷಗಳಿಂದ ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕರ ಕ್ಷೇಮಾಭಿವೃದ್ಧಿ ಯೂನಿಯನ್ ನಡೆಸಿದ ಹೋರಾಟದ ಫಲವಾಗಿ ಅಸಂಘಟಿತ ಕಾರ್ಮಿಕರ ಸ್ಥಾನಮಾನ ನೀಡಿ ಸರ್ಕಾರ ಜೂನ್ 6ರಂದು ಆದೇಶ ಹೊರಡಿಸಿದೆ’ ಎಂದು ವಿವರಿಸಿದರು.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಯೋಜನೆಯಡಿ 18 ರಿಂದ 40 ವರ್ಷ ವಯೋಮಾನದವರು ಹೆಸರು ನೊಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ₨ 3 ಸಾವಿರ ನಿಶ್ಚಿತ ಪಿಂಚಣಿ ಸೌಕರ್ಯ ಪಡೆದುಕೊಳ್ಳಬಹುದು ಫಲಾನುಭವಿಯ ನಿಧನಾನಂತರ ಅವಲಂಬಿತರು ಹಾಗೂ ನಂತರದಲ್ಲಿ ಮಕ್ಕಳಿಗೆ ಒಂದೇ ಕಂತಿನಲ್ಲಿ ಹಣ ಸಂದಾಯವಾಗಲಿದೆ’ ಎಂದು ಹೇಳಿದರು.

‘ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಅಡುಗೆ ಕಾರ್ಮಿಕರು ಗುರುತಿನ ಚೀಟಿ ಪಡೆಯಲು ಅರ್ಹರಾಗಿದ್ದು, ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆಯಡಿ ಅಡುಗೆ ಕೆಲಸಗಾರರು. ಹೋಟೆಲ್ ಕಾರ್ಮಿಕರು ಮತ್ತು ಗೃಹ ಕಾರ್ಮಿಕರಿಗೆ ಮಂಡಳಿಯಿಂದ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ’ ಎಂದರು.

ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್ ಸಂಸ್ಥಾಪಕ ಬಿ.ಎಸ್.ರಮೇಶ್‌ಬಾಬು, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮುನಿರಾಜು, ಸಂಘಟನಾ ಕಾರ್ಯದರ್ಶಿ ಟಿ.ಎಸ್.ಶಾಮ್‌ಕುಮಾರ್, ಸಂಘದ ಉಸ್ತುವಾರಿ ಎಲ್.ಮಂಜುನಾಥ್ ಹಾಜರಿದ್ದರು.

Post Comments (+)