ಬುಧವಾರ, ಸೆಪ್ಟೆಂಬರ್ 18, 2019
25 °C

ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಚಾಲನೆ

Published:
Updated:
Prajavani

ಕೋಲಾರ: ‘ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕೈಗೊಂಡಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಉಪವಿಭಾಗಾಧಿಕಾರಿ ಸೋಮಶೇಖರ್ ತಿಳಿಸಿದರು.

ಜಿಲ್ಲಾಡಳಿತ, ಸ್ವೀಪ್ ಸಮಿತಿಯ ಸಹಯೋಗದಲ್ಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಕೆಲ ವರ್ಷಗಳ ಹಿಂದೆ ಮತದಾನ ಮಾಡಲು ಬರುತ್ತಿದ್ದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲವೆಂದರೆ ಮತದಾನ ಮಾಡದೆ ಹೊರಟು ಬಿಡುತ್ತಿದ್ದರು. ಆದರೆ ಈಗ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಸಾಕಷ್ಟು ಗೊಂದಲಗಳಿಗೆ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳು ಎದುರಾಗಬಾರದೆಂಬ ಉದ್ದೇಶದಿಂದ ಪರಿಷ್ಕರಣೆಯನ್ನು ಜಿಲ್ಲೆಯಲ್ಲಿ ಸೆ.1 ರಿಂದ ಅ.15ರವರೆಗೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಚುನಾವಣೆಗಳು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ವಿಧಾನ ಸಭೆ, ವಿಧಾನ ಪರಿಷತ್ ಚುನಾವಣೆಗಳು, ಲೋಕಸಭೆ ಸೇರಿದಂತೆ ಸಾಕಷ್ಟು ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಈ ಚುನಾವಣೆಗಳು ಸುಸೂತ್ರವಾಗಿ ನಡೆಯಲು ಮತದಾರರ ಪಟ್ಟಿಯನ್ನು ಗೊಂದಲಗಳಿಲ್ಲದಂತೆ ಸಿದ್ದಪಡಿಸಿಕೊಳ್ಳಬೇಕು’ ಎಂದರು.

‘ಮತದಾರರ ಪಟ್ಟಿ ಪರಿಷ್ಕರಣೆಯು 45 ದಿನಗಳ ಕಾಲ ನಡೆಯಲಿದ್ದು ಪ್ರಾರಂಭದ 30 ದಿನ ಬೂತ್‌ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಲಿದ್ದಾರೆ. ಜತೆಗೆ ಮತದಾರರ ಪರಿಷ್ಕರಣೆ ಸುಲಭವಾಗಿ ನಡೆಯಬೇಕೆಂಬ ದೃಷ್ಠಿಯಿಂದ ಜಿಲ್ಲೆಯಲ್ಲಿ ಸುಮಾರು 116 ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲೂ ಅರ್ಜಿ ಸಲ್ಲಿಸಬಹುದು’ ಎಂದು ಹೇಳಿದರು.

‘ಮತದಾರರ ಹೆಸರು ಪರಿಶೀಲನೆ ಮತ್ತು ದೃಢೀಕರಣ, ಸೇರ್ಪಡೆ, ತಿದ್ದುಪಡಿ, ತೆಗೆದು ಹಾಕುವುದನ್ನು ಪರಿಷ್ಕರಣೆಯಲ್ಲಿ ಮಾಡಲಾಗುತ್ತದೆ. ಇದಕ್ಕೆ ಅಗತ್ಯ ದಾಖಲೆಯನ್ನು ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಮತದಾರರ ಸಹಾಯವಾಣಿ ಮೊಬೈಲ್ ಆಪ್, ಹೊಸ ಎನ್‌ವಿಎಸ್‌ಪಿ ಪೋರ್ಟಲ್ ಹಾಗೂ 1950 ಮತದಾರರ ಸಹಾಯವಾಣಿಯ ಮೂಲಕ ಪರಿಶೀಲನೆ ಮತ್ತು ದೃಢೀಕರಣ ಮಾಡಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕಿ ಸೌಮ್ಯ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 12 ಲಕ್ಷ ಹೆಚ್ಚು ಮತದಾರರಿದ್ದಾರೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 77 ರಷ್ಟು ಮಾತ್ರ ಮತದಾನವಾಗಿತ್ತು. ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರುಗಳು ಕೈಬಿಟ್ಟು ಹೋಗಿದ್ದೂ ಸಹ ಇದಕ್ಕೆ ಒಂದು ಕಾರಣವಾಗಿದೆ’ ಎಂದರು.

‘ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲನೆ ಮತ್ತು ದೃಢೀಕರಣ ಮಾಡಿಕೊಳ್ಳುವುದು ಮೊದಲು ನಮ್ಮಿಂದಲೇ ಪ್ರಾರಂಭವಾಗಬೇಕು. ಶಿಕ್ಷಣ ಇಲಾಖೆ ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರ ಜತೆಗೆ ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸಬೇಕು’ ಎಂದು ಕೋರಿದರು.

ಡಿವೈಎಸ್ಪಿ ಆರ್.ವಿ.ಚೌಡಪ್ಪ, ತಹಶೀಲ್ದಾರ್ ನಾಗವೇಣಿ, ಚುನಾವಣಾ ತಹಶೀಲ್ದಾರ್ ಮಂಜುಳಾ, ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಗೋವಿಂದಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಮೈಲಾರಪ್ಪ, ಜಿಲ್ಲಾ ಚುನಾವಣಾ ರಾಯಭಾರಿಗಳಾದ ಅನಿತಾ, ರುಮನಾ ಕೌಸರ್ ಹಜರಿದ್ದರು.

Post Comments (+)