ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಕಾಮಗಾರಿ ಪರಿಶೀಲನೆ; ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಲಭ್ಯ-ಡಿಸಿ

Last Updated 5 ಏಪ್ರಿಲ್ 2019, 13:37 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹಾಗೂ ಜಿ.ಪಂ ಸಿಇಒ ಜಿ.ಜಗದೀಶ್‌ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡವು ಜಿಲ್ಲೆಯ ಹಲವೆಡೆ ಶುಕ್ರವಾರ ಬರ ನಿರ್ವಹಣೆ ಕಾಮಗಾರಿಗಳ ಪರಿಶೀಲನೆ ನಡೆಸಿತು.

ಅಧಿಕಾರಿಗಳು ಜಿಲ್ಲಾ ಕೇಂದ್ರದ ವಿವಿಧ ಬಡಾವಣೆಗಳಲ್ಲಿ ಟ್ಯಾಂಕರ್‌ ನೀರು ಸರಬರಾಜು ಪ್ರಕ್ರಿಯೆಯನ್ನು ಪರಿಶೀಲಿಸಿದರು. ಬಳಿಕ ಬಂಗಾರಪೇಟೆ ತಾಲ್ಲೂಕಿನ ಅನಿಗಾನಹಳ್ಳಿಯ ರೈತ ಮುನಿಸ್ವಾಮಿಗೌಡರ ಹಿಪ್ಪು ನೇರಳೆ ತೋಟ, ನಾಗಶೆಟ್ಟಹಳ್ಳಿಯ ವೆಂಕಟರಮಣಪ್ಪ ಅವರು ಬೆಳೆದಿರುವ ಹಸಿರು ಮೇವು, ಚಿಕ್ಕಂಡಹಳ್ಳಿಯಲ್ಲಿ ನರೇಗಾದಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂಗಳನ್ನು ವೀಕ್ಷಿಸಿದರು.

ಬಳಿಕ ಮುಳಬಾಗಿಲು ತಾಲ್ಲೂಕಿನ ಅಂಗೊಂಡಹಳ್ಳಿಯ ರೈತ ಶ್ರೀನಿವಾಸ್ ಅವರು ನರೇಗಾ ಯೋಜನೆಯಡಿ ಬೆಳೆದಿರುವ ಸೀಬೆ ತೋಟಕ್ಕೆ ಅಧಿಕಾರಿಗಳು ಭೇಟಿ ನೀಡಿದರು. ಅಲ್ಲದೇ, ಬಾವಿಗಳಿಂದ ಬಾಡಿಗೆ ಆಧಾರದಲ್ಲಿ ಕೊಳವೆ ಬಾವಿಗಳಿಂದ ಗ್ರಾಮಕ್ಕೆ ನೀರು ಪೂರೈಸುತ್ತಿರುವ ರೈತರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಬಳಿ ಆರಂಭಿಸಿರುವ ಮೇವು ಬ್ಯಾಂಕ್ ವೀಕ್ಷಿಸಿದರು.

ಬಂಗಾರಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಹಾಗೂ ಮುಳಬಾಗಿಲು ತಾಲ್ಲೂಕಿನ ಮಸ್ತೇನಳ್ಳಿ ಅಂಗನವಾಡಿ ಮತ್ತು ಮತಗಟ್ಟೆಗೆ ಭೇಟಿ ನೀಡಿ ಮೂಲಸೌಕರ್ಯ ಪರಿಶೀಲಿಸಿದರು.

₹ 3 ಲಕ್ಷ ವೆಚ್ಚ: ‘ಹಿಪ್ಪು ನೇರಳೆ ಬೆಳೆಗೆ ₹ 3 ಲಕ್ಷ ವೆಚ್ಚವಾಗಿದ್ದು, ನರೇಗಾ ಯೋಜನೆಯಡಿ ಅನುದಾನ ಪಡೆದಿದ್ದೇನೆ. 1 ಎಕರೆಗೆ ಎರಡು ಕ್ವಿಂಟಾಲ್‌ ಗೂಡು ಬೆಳೆಯಬಹುದು’ ಎಂದು ರೈತ ಮುನಿಸ್ವಾಮಿಗೌಡ ವಿವರಿಸಿದರು.

‘ಗ್ರಾಮದ ಸುತ್ತಮುತ್ತ ಮೇವಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ, ಸದ್ಯ ಬೆಳೆದಿರುವ ಮನೆಯ ಜಾನುವಾರುಗಳಿಗೆ ಸಾಕಾಗುತ್ತದೆ. ಇನ್ನು ಹೆಚ್ಚಿಗೆ ಕಿಟ್ ನೀಡಿದರೆ ಮೇವು ಬೆಳೆಸಿ ಬೇರೆ ರೈತರಿಗೂ ವಿತರಣೆ ಮಾಡುತ್ತೇನೆ’ ಎಂದು ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿಯ ರೈತ ಮಹಿಳೆ ವಿಜಯಮ್ಮ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ನೀರು ಲಭ್ಯವಿರುವ ರೈತರು ಮೇವು ಕಿಟ್ ಕೇಳಿದರೆ ವಿತರಿಸಬೇಕು’ ಎಂದು ಪಶು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತೀವ್ರ ಬರಗಾಲ: ‘ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಮಳೆಯಾಗದ ಕಾರಣ ತೀವ್ರ ಬರಗಾಲ ಎದುರಾಗಿದೆ. ಜಿಲ್ಲೆಯ 6 ತಾಲ್ಲೂಕುಗಳನ್ನು ಸರ್ಕಾರ ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಬರ ನಿರ್ವಹಣಾ ಕಾಮಗಾರಿಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

‘ಜಿಲ್ಲೆಯಲ್ಲಿ ಈವರೆಗೆ 92 ಸಾವಿರ ಮೇವಿನ ಕಿಟ್‌ ವಿತರಿಸಲಾಗಿದೆ. ಸದ್ಯ 2.08 ಲಕ್ಷ ಟನ್‌ ಮೇವು ದಾಸ್ತಾನಿದ್ದು, 12 ವಾರಕ್ಕೆ ಸಾಕಾಗಲಿದೆ. ನೀರು ಲಭ್ಯವಿರುವ ರೈತರು ಮೇವು ಬೆಳೆದು ಇತರ ರೈತರಿಗೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

ಟ್ಯಾಂಕರ್‌ ನೀರು: ‘ಕೋಲಾರ ನಗರಸಭೆ ಮತ್ತು ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ಸಮಸ್ಯೆ ಎದುರಾಗಿದ್ದು, 20 ಖಾಸಗಿ ಟ್ಯಾಂಕರ್ ಮೂಲಕ ಪ್ರತಿನಿತ್ಯ 90 ಲೋಡ್‌ ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಿಸಲು ಸಾಕಷ್ಟು ಅನುದಾನ ಲಭ್ಯವಿದ್ದು, ನಗರೋತ್ಥಾನ 3ನೇ ಹಂತ ಹಾಗೂ ಸಿಎಸ್‌ಆರ್‌ ಯೋಜನೆಯಡಿ ಬಳಕೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‘ಈವರೆಗೆ ಜಿಲ್ಲೆಯ 192 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 134 ಗ್ರಾಮದಲ್ಲಿ ಸಮಸ್ಯೆ ಬಗೆಹರಿಸಲಾಗಿದೆ. ಉಳಿದ 58 ಗ್ರಾಮಗಳ ಪೈಕಿ 29 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಯಿಂದ ಹಾಗೂ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ’ ಎಂದು ಮಾಹಿತಿ ನೀಡಿದರು.

40 ಲಕ್ಷ ಮಾನವ ದಿನ: ‘ಪ್ರಸಕ್ತ ವರ್ಷದಲ್ಲಿ 40 ಲಕ್ಷ ಮಾನವ ದಿನ ಸೃಷ್ಟಿಸಿದ್ದು, ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಮುಂದೆ ಆಯ್ಧ ಗ್ರಾಮದ ರೈತರು ನರೇಗಾ ಅಡಿ ಕೆರೆಯಲ್ಲಿ ಹೂಳು ತೆಗೆಯಲು ಬಂದರೆ ದಿನಕ್ಕೆ ₹ 249 ಕೂಲಿ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

‘ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಒಂದು ಸಾವಿರ ಚೆಕ್‌ಡ್ಯಾಂ ನಿರ್ಮಿಸುವ ಗುರಿಯಿದೆ. ಈ ಪೈಕಿ ಈಗಾಗಲೇ 600 ಚೆಕ್‌ಡ್ಯಾಂ ನಿರ್ಮಾಣ ಪೂರ್ಣಗೊಂಡಿದೆ. ನರೇಗಾ ಯೋಜನೆಯಡಿ 1,200 ಕಾಮಗಾರಿ ಕೈಗೆತ್ತಿಕೊಂಡಿದ್ದು, ಕೆಲಸ ಮಾಡಿದವರಿಗೆ ತಡ ಮಾಡದೆ ಕೂಲಿ ಪಾವತಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕೊಳಚೆ ನೀರಿನಿಂದ ಸಾವು: ‘ಅಂತರಗಂಗೆ ಬೆಟ್ಟದಲ್ಲಿನ ಕೋತಿಗಳು ಕೊಳಚೆ ನೀರು ಸೇವಿಸಿ ಮೃತಪಟ್ಟಿರುವುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ ಸ್ಥಳೀಯರು ಆತಂಕಪಡುವ ಅಗತ್ಯವಿಲ್ಲ’ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಚಕ್ರಪಾಣಿ ತಿಳಿಸಿದರು.

‘ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರು ಒದಗಿಸಲು 106 ಜಲ ತೊಟ್ಟಿ ನಿರ್ಮಿಸಿದ್ದು, ಈ ತೊಟ್ಟಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ತಿಳಿಸಿದರು.

ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಮಧುಸೂದನ್‌ ರೆಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸೌಮ್ಯ ಹಾಜರಿದ್ದರು.

ಅಂಕಿ ಅಂಶ.....
* 92 ಸಾವಿರ ಮೇವಿನ ಕಿಟ್‌ ವಿತರಣೆ

* 2.08 ಲಕ್ಷ ಟನ್‌ ಮೇವು ದಾಸ್ತಾನು

* 192 ಗ್ರಾಮಗಳಲ್ಲಿ ನೀರಿನ ಸಮಸ್ಯೆ

* 600 ಚೆಕ್‌ಡ್ಯಾಂ ನಿರ್ಮಾಣ ಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT