ಶನಿವಾರ, ಮೇ 21, 2022
27 °C
ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಿ

ರಾಜ್ಯೋತ್ಸವ ಸರಳವಾಗಿ ಆಚರಿಸಿ: ಜಿಲ್ಲಾಧಿಕಾರಿ ಸೆಲ್ವಮಣಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಸೂಚಿಸಿದರು.

ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಇಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲಾ ಕೇಂದ್ರದ ಗಾಂಧಿವನದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದ್ದರೂ ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಪಾಲಿಸಲೇಬೇಕು’ ಎಂದರು.

‘ಪ್ರತಿ ವರ್ಷ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಆತಂಕ ಇರುವುದರಿಂದ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ರಾಜ್ಯೋತ್ಸವ ಆಚರಿಸಬೇಕು. ರಾಜ್ಯೋತ್ಸವದ ಹೆಸರಿನಲ್ಲಿ ಹೊಸ ಆಲೋಚನೆ ತರಬೇಕಿದೆ. ಶಾಲೆ, ಕಾಲೇಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ರಾಜ್ಯೋತ್ಸವ ಆಚರಿಸಬೇಕು’ ಎಂದು ತಿಳಿಸಿದರು.

‘ಈ ಬಾರಿ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸನ್ಮಾನದ ಜತೆಗೆ ಪ್ರಶಸ್ತಿ ನೀಡಬೇಕು ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಬೇಕು. ಅ.28ರಂದು ಸಾಮೂಹಿಕ ತರಬೇತಿ ಗಾಯನ ಹಮ್ಮಿಕೊಳ್ಳಲಾಗಿದೆ. ನವೆಂಬರ್ ಕೊನೆಯ ವಾರದಲ್ಲಿ ಕನ್ನಡ ಸಪ್ತಾಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ’ ಎಂದು ವಿವರಿಸಿದರು.

ಮೆರವಣಿಗೆಗೆ ಮನವಿ: ‘ಪ್ರತಿ ವರ್ಷ ಜಿಲ್ಲಾಡಳಿತ ಮತ್ತು ಭುವನೇಶ್ವರಿ ಕನ್ನಡ ಸಂಘದ ಸಹಯೋಗದಲ್ಲಿ ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿತ್ತು. ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದೆ. ಹೀಗಾಗಿ ಮೆರವಣಿಗೆ ಸಮೇತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು’ ಎಂದು ಜಿಲ್ಲಾ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್‌.ತ್ಯಾಗರಾಜ್ ಮನವಿ ಮಾಡಿದರು.

‘ಶಾಲಾ ಮಕ್ಕಳಲ್ಲಿ ಬಾಲ್ಯಾವಸ್ಥೆಯಲ್ಲೇ ಸಾಹಿತ್ಯ ಸಂಬಂಧ ಬೆಳಸಬೇಕು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡಬೇಕಿದೆ. ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ಆದೇಶಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್‌ ಕೋರಿದರು.

‘ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಬೇಕು. ಜಿಲ್ಲಾ ಕೇಂದ್ರದ ಒಳಾಂಗಣ ಕ್ರೀಡಾಂಗಣಕ್ಕೆ ರಾಜ್‌ಕುಮಾರ್‌ರ ಹೆಸರು ಇಡಬೇಕು’ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರಭಾಕರ್ ಸಲಹೆ ನೀಡಿದರು.

ಭುವನೇಶ್ವರಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಹೊನ್ನುಡಿ ಪ್ರಭಾಕರ್, ಮಾಜಿ ಪ್ರಧಾನ ಕಾರ್ಯದರ್ಶಿ ಅಂಚೆ ಅಶ್ವತ್ಥ್‌, ಮಾಜಿ ಖಜಾಂಚಿ ಪ್ರಕಾಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುನಿರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು, ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.