ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಸಾಗಾಟಕ್ಕೆ ತೊಂದರೆ, ಕುಸಿದ ಟೊಮೆಟೊ ಬೇಡಿಕೆ

Published : 3 ಆಗಸ್ಟ್ 2024, 7:25 IST
Last Updated : 3 ಆಗಸ್ಟ್ 2024, 7:25 IST
ಫಾಲೋ ಮಾಡಿ
Comments

ಕೋಲಾರ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ಅಬ್ಬರ, ಭೂಕುಸಿತ ಕಾರಣ ಟೊಮೆಟೊ ಸಾಗಾಟಕ್ಕೆ ಅಡಚಣೆ ಉಂಟಾಗಿದ್ದು, ಧಾರಣೆಯಲ್ಲಿ ಭಾರಿ ಕುಸಿತ ಕಂಡಿದೆ.

ಕೋಲಾರದ ಚಿಲ್ಲರೆ ಮಾರುಕಟ್ಟೆಯಲ್ಲಿ 15 ದಿನಗಳ ಹಿಂದೆ ಕೆ.ಜಿಗೆ ₹ 60 ವರೆಗೆ ಇದ್ದ ದರ ದಿಢೀರ್‌ ತಗ್ಗಿದೆ. ಈಗ ₹ 50ಕ್ಕೆ ಎರಡು ಕೆ.ಜಿ ಟೊಮೆಟೊ ಬಿಕರಿಯಾಗುತ್ತಿದೆ.

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದ ಕೆಲವೆಡೆ ಭಾರಿ ಮಳೆಯಾಗುತ್ತಿದೆ. ಇದಲ್ಲದೇ, ನವದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲೂ ಮಳೆ ಅಬ್ಬರಿಸುತ್ತಿದೆ. ಹೀಗಾಗಿ, ಆ ಭಾಗದ ವರ್ತಕರಿಂದ ಟೊಮೆಟೊಗೆ ಬೇಡಿಕೆ ಕಡಿಮೆಯಾಗಿದೆ.

ಮೈಸೂರು ಎಪಿಎಂಸಿಯಿಂದ ಕೇರಳಕ್ಕೆ ಟೊಮೆಟೊ ಸಾಗಾಟ ವಯನಾಡ್‌ ಭೂಕುಸಿತ ಕಾರಣ ಈಗ ಬಂದ್‌ ಆಗಿದೆ. ಹೀಗಾಗಿ, ಮೈಸೂರಿನಿಂದ ಬೆಂಗಳೂರು ಮಾರುಕಟ್ಟೆಗೆ ಸಾಗಿಸಲಾಗುತ್ತಿದ್ದು, ಕೋಲಾರದಿಂದ ಪೂರೈಕೆ ಆಗುತ್ತಿದ್ದ ಟೊಮೆಟೊ ಇಲ್ಲೇ ಉಳಿಯುತ್ತಿದೆ.

ಟೊಮೆಟೊ ಮಾರಾಟದಲ್ಲಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿಯಿಂದ ಬೆಂಗಳೂರು ಅಲ್ಲದೇ, ಸುಮಾರು 15ರಿಂದ 20 ರಾಜ್ಯಗಳಿಗೆ ಸಾಗಣೆ ಮಾಡಲಾಗುತ್ತದೆ. ಈಗ ಮಳೆ ಕಾರಣ ಖರೀದಿಗೆ ಆ ಭಾಗದ ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಲಾರಿಯಲ್ಲಿ ಕೊಂಡೊಯ್ದರೂ ಮಾರಾಟವಾಗದೆ ಟೊಮೆಟೊ ಹಾಳಾಗುತ್ತಿದೆ. ಜೊತೆಗೆ ವಿವಿಧೆಡೆ ಗುಡ್ಡ ಕುಸಿತ, ರಸ್ತೆ ಬಂದ್‌ ಕಾರಣ ವಾಹನಗಳ ಸಂಚಾರಕ್ಕೆ ನಿರ್ಬಂಧವೇರಿರುವುದೂ ಸಮಸ್ಯೆ ತಂದೊಡ್ಡಿದೆ.

ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ನಾಟಿ ಮಾಡಿದ್ದ ಟೊಮೆಟೊ ಈಗ ಫಸಲು ಕೊಡುತ್ತಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಗೆ 15 ದಿನಗಳಿಂದ ನಿತ್ಯ 2 ಲಕ್ಷಕ್ಕೂ ಅಧಿಕ ಬಾಕ್ಸ್‌ ಆವಕವಾಗುತ್ತಿದೆ. ಚಿತ್ರದುರ್ಗದ ಚಳ್ಳಕೆರೆ ಸೇರಿದಂತೆ ವಿವಿಧೆಡೆಯ ಟೊಮೆಟೊ ಇಲ್ಲಿನ ಮಾರುಕಟ್ಟೆಗೆ ಬರುತ್ತಿದೆ. ಹರಾಜಿನಲ್ಲಿ 15 ಕೆ.ಜಿ ತೂಕದ ಟೊಮೆಟೊ ಬಾಕ್ಸ್‌ವೊಂದಕ್ಕೆ 15 ದಿನಗಳ ಹಿಂದೆ ₹ 1,100ರವರೆಗೆ ಬೆಲೆ ಇತ್ತು. ಈಗ ಅದು ₹ 350ಕ್ಕೆ ಇಳಿದಿದೆ. ಇದರಿಂದ ಟೊಮೆಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ವಯನಾಡ್‌ ಭೂಕುಸಿತ ಕಾರಣ ಕೇರಳಕ್ಕೆ ಟೊಮೆಟೊ ಸಾಗಾಟ ಮಾಡುತ್ತಿಲ್ಲ. ಜೊತೆಗೆ ಮಹಾರಾಷ್ಟ್ರದಲ್ಲೂ ಈಗ ಟೊಮೆಟೊವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಉತ್ತರ ಭಾರತಕ್ಕೆ ಸಾಗಿಸುತ್ತಿದ್ದಾರೆ. ಹೀಗಾಗಿ, ಇಲ್ಲಿನ ಟೊಮೆಟೊಗೆ ಬೇಡಿಕೆ ತಗ್ಗಿದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋಲಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕಳೆದ ಬಾರಿ ಆರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದರು. ಈ ಬಾರಿಯೂ ಅಷ್ಟೇ ಪ್ರಮಾಣದಲ್ಲಿ ಬೆಳೆದಿದ್ದಾರೆ. ಆದರೆ, ಎಲೆ ಮುಟುರು ರೋಗ (ಬಿಳಿ ನೊಣ ಬಾಧೆ) ಹಾಗೂ ವಿವಿಧ ರೋಗ ಬಾಧೆ ಕಾರಣ ಟೊಮೆಟೊ ಗುಣಮಟ್ಟವೂ ತಗ್ಗಿದೆ. ಬಾಳಿಕೆಯ ಅವಧಿಯೂ ಕಡಿಮೆಯಾಗಿದೆ’ ಎಂದು ಹೇಳುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಮಾರಾಟ
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಮಾರಾಟ
ಕೇರಳ ರಾಜ್ಯಕ್ಕೆ ಟೊಮೆಟೊ ಸಾಗಾಟಕ್ಕೆ ತೊಂದರೆ  ಕೋಲಾರ ಎಪಿಎಂಸಿಗೆ ಬೇಡಿಕೆಗಿಂತ ಅಧಿಕ ಟೊಮೆಟೊ ಆವಕ ಹರಾಜಿನಲ್ಲಿ 15 ಕೆ.ಜಿ ಬಾಕ್ಸ್‌ ಟೊಮೆಟೊ ದರ ಕೇವಲ ₹ 350
ಕೋಲಾರ ಎಪಿಎಂಸಿಗೆ ಟೊಮೆಟೊ ಆವಕ ದಿಢೀರ್‌ ಹೆಚ್ಚಳವಾಗಿದೆ. ವಿವಿಧೆಡೆ ಮಳೆ ಕಾರಣ ಲಾರಿಗಳ ಸಂಚಾರಕ್ಕೆ ತೊಂದರೆ ಆಗಿದೆ. ಕೆಲವೆಡೆ ಅನ್‌ಲೋಡ್‌ ಆಗುತ್ತಿಲ್ಲ. ಹೀಗಾಗಿ ದರ ಕುಸಿದಿದೆ
ಕಿರಣ್‌ ಕಾರ್ಯದರ್ಶಿ ಕೋಲಾರ ಎಪಿಎಂಸಿ
ಟೊಮೆಟೊ ದರ ವ್ಯತ್ಯಾಸವು ಪೂರೈಕೆ ಹಾಗೂ ಸಾಗಾಟದ ಮೇಲೆ ಅವಲಂಬಿಸಿದೆ. ಏರಿದ್ದ ದರ ಈಗ ತಗ್ಗಿದೆ. ಈಚೆಗೆ ರೈತರು ಬೇಡಿಕೆ ಪರಿಸ್ಥಿತಿಗೆ ತಕ್ಕಂತೆ ಟೊಮೆಟೊ ಬೆಳೆಯುತ್ತಿದ್ದಾರೆ
ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT