ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಸಾಲ ವಸೂಲಿ: ಮೇ 15ರ ಗಡುವು

ಹಿಂಬಡ್ತಿ ಖಚಿತ: ಸಿಬ್ಬಂದಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಎಚ್ಚರಿಕೆ
Last Updated 17 ಏಪ್ರಿಲ್ 2021, 13:22 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕ್ ಉಳಿಸದಿದ್ದರೆ ನಿಮ್ಮ ಮನೆಗೆ ನೀವೇ ಬೆಂಕಿ ಇಟ್ಟಂತೆ. ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಮೃದು ಧೋರಣೆಯಿಲ್ಲ. ಮೇ 15ರೊಳಗೆ ಬಾಕಿ ಸಾಲ ವಸೂಲಿ ಮಾಡದಿದ್ದರೆ ಹಿಂಬಡ್ತಿ ಖಚಿತ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಬ್ಯಾಂಕ್‌ನ ಸಿಬ್ಬಂದಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಶನಿವಾರ ನಡೆದ ನಿಷ್ಕ್ರೀಯ ಆಸ್ತಿ ಮೌಲ್ಯ (ಎನ್‌ಪಿಎ) ಕುರಿತ ಪರಾಮರ್ಶೆ ಸಭೆಯಲ್ಲಿ ಮಾತನಾಡಿ, ‘ಸಿಬ್ಬಂದಿಗೆ ಶಿಸ್ತು, ಸಮಯಪ್ರಜ್ಞೆ, ಬದ್ಧತೆ ಇಲ್ಲವಾಗಿದೆ. ಕೋವಿಡ್ ಸಂದರ್ಭದಲ್ಲೂ ಬ್ಯಾಂಕ್ ಸಿಬ್ಬಂದಿಗೆ ಎಲ್ಲಾ ಸೌಲಭ್ಯ ನೀಡಿದೆ. ಬ್ಯಾಂಕ್‌ನ ಗೌರವ ಉಳಿಸುವ ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

‘7 ವರ್ಷಗಳ ಹಿಂದೆ ಬ್ಯಾಂಕ್ ದಿವಾಳಿಯಾಗಿ ಸಿಬ್ಬಂದಿ ಬೀದಿಗೆ ಬಂದಿದ್ದನ್ನು ನೆನಪಿಸಿಕೊಳ್ಳಿ. ಅಂತಹ ಪರಿಸ್ಥಿತಿ ಬರಬಾರದು ಎಂಬ ಕಾಳಜಿ ನಮ್ಮದು. ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಯ ಸಂಬಳ ತಡೆ ಹಿಡಿಯುತ್ತೇವೆ’ ಎಂದು ಹೇಳಿದರು.

‘ಹಿಂದಿನ ವರ್ಷ ಶೇ 2.5ರಷ್ಟಿದ್ದ ಎನ್‌ಪಿಎ ಕೋವಿಡ್ ಸಂಕಷ್ಟದಿಂದಾಗಿ ಈ ಬಾರಿ ಶೇ 2.6ಕ್ಕೇರಿದೆ. ಇದನ್ನು ಸಹಿಸುವುದಿಲ್ಲ. ಸಿಬ್ಬಂದಿ ನಿರ್ಲಕ್ಷ್ಯತೆಗೆ ಇದು ಸಾಕ್ಷಿ. ನನ್ನನ್ನು ಮೆಚ್ಚಿಸಲು ಕೆಲಸ ಮಾಡಬೇಡಿ. ಅನ್ನ ನೀಡುತ್ತಿರುವ ಬ್ಯಾಂಕ್‌ನ ಋಣ ತೀರಿಸುವ ಪ್ರಾಮಾಣಿಕ ಪ್ರಜ್ಞೆ ಇರಲಿ’ ಎಂದು ಕೆಂಡಾಮಂಡಲರಾದರು.

‘ಸಾಲ ನೀಡಿಕೆ ಪ್ರಮಾಣ ₹ 270 ಕೋಟಿಗೆ ಹೆಚ್ಚಿದ್ದರೂ ಎನ್‌ಪಿಎ ಕಡಿಮೆಯಾಗಿಲ್ಲ ಎಂಬ ನಬಾರ್ಡ್ ಪ್ರಶ್ನೆಗೆ ಏನು ಉತ್ತರ ನೀಡಬೇಕು. ಹಿಂದಿನ ವರ್ಷದ ಬಾಕಿ ಸಾಲ ಮೇ 15ರೊಳಗೆ ಸಂಪೂರ್ಣ ವಸೂಲಿಯಾಗಬೇಕು, ಜತೆಗೆ ಎನ್‌ಪಿಎ ಕಡಿಮೆ ಮಾಡಬೇಕು’ ಎಂದು ಸೂಚಿಸಿದರು.

ಲಾಭ ಹಂಚಿಕೆ: ‘ಪ್ಯಾಕ್ಸ್‌ಗಳ ಗಣಕೀಕರಣ ಪ್ರಕ್ರಿಯೆ ಮೇ ಅಂತ್ಯದೊಳಗೆ ಮುಗಿಯಲೇಬೇಕು. ಗಣಕೀಕರಣ ವ್ಯವಸ್ಥೆಯಲ್ಲೇ ವಹಿವಾಟು ನಡೆಯಬೇಕು. ಕೆಸಿಸಿ ಸಾಲದ ಬಡ್ಡಿ ಹಣದ ಲಾಭವಾದ ₹ 5.70 ಕೋಟಿಯನ್ನು ಈಗಾಗಲೇ ಸೊಸೈಟಿಗಳಿಗೆ ಹಂಚಿಕೆ ಮಾಡಲಾಗಿದೆ. ರೈತರು, ಮಹಿಳೆಯರಿಗೆ ಎಟಿಎಂ ಕಾರ್ಡ್ ನೀಡಿ ಎಟಿಎಂ ಮೂಲಕವೇ ಹಣ ಡ್ರಾ ಮಾಡಿಕೊಳ್ಳುವಂತೆ ಮಾಡಿ’ ಎಂದು ತಿಳಿಸಿದರು.

‘ಅನ್ನ ನೀಡಿರುವ ಬ್ಯಾಂಕ್‌ ವಿರುದ್ಧವೇ ಬೇನಾಮಿ ಹೆಸರಿನಲ್ಲಿ ದೂರು ನೀಡುವಷ್ಟು ಕೀಳು ಮಟ್ಟಕ್ಕೆ ಕೆಲ ನೌಕರರು ಇಳಿದಿದ್ದೀರಿ. ಇದು ಶೋಭೆಯಲ್ಲ. ಅನ್ನ ನೀಡಿದ ತಾಯಿಯ ಸ್ಥಾನದಲ್ಲಿರುವ ಬ್ಯಾಂಕ್‌ನ ಗೌರವಕ್ಕೆ ಚ್ಯುತಿ ತರುವ ಕೆಲಸ ಮಾಡಿದರೆ ತಕ್ಕ ಶಾಸ್ತಿ ಮಾಡುತ್ತೇವೆ’ ಎಂದು ಗುಡುಗಿದರು.

ಲೋಪ ಸರಿಪಡಿಸಿಕೊಳ್ಳಿ: ‘ಕೋವಿಡ್ ನಡುವೆಯೂ ಸಿಬ್ಬಂದಿಗೆ ಕೊಟ್ಟಿದ್ದೇವೆ. ಸೋಮಾರಿತನ ಬಿಟ್ಟು ಜವಾಬ್ದಾರಿಯಿಂದ ಕೆಲಸ ಮಾಡಿ. ಆಗಿರುವ ಲೋಪ ಸರಿಪಡಿಸಿಕೊಳ್ಳಿ’ ಎಂದು ಬ್ಯಾಂಕ್‌ನ ನಿರ್ದೇಶಕ ಸೋಮಣ್ಣ ಕಿವಿಮಾತು ಹೇಳಿದರು.

ಬ್ಯಾಂಕ್‌ನ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ನಾರಾಯಣರೆಡ್ಡಿ, ನಾಗಿರೆಡ್ಡಿ, ವೆಂಕಟರೆಡ್ಡಿ, ಗೋವಿಂದರಾಜು, ಸಹಕಾರ ಸಂಘಗಳ ಉಪನಿಬಂಧಕ ವೆಂಕಟೇಶ್, ಬ್ಯಾಂಕ್‌ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT