ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಕ್ಲಿನಿಕ್‌: ಕಡಿವಾಣ ಹಾಕಲು ಮನವಿ

Last Updated 5 ಆಗಸ್ಟ್ 2021, 15:33 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್‌ಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಮ್ಮ ಕೋಲಾರ ರೈತ ಸಂಘದ ಸದಸ್ಯರು ಇಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ಅವರಿಗೆ ಮನವಿ ಸಲ್ಲಿಸಿದರು.

‘ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಕ್ಲಿನಿಕ್‌ಗಳ ಹಾವಳಿ ಮಿತಿ ಮೀರಿದೆ. ನಕಲಿ ಕ್ಲಿನಿಕ್‌ಗಳು ನಾಯಿ ಕೊಡೆಗಳಂತೆ ಹಾದಿ ಬೀದಿಯಲ್ಲಿ ತಲೆ ಎತ್ತಿವೆ. ನಕಲಿ ವೈದ್ಯರು ಹಣದಾಸೆಗೆ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಸಂಘದ ಸದಸ್ಯರು ದೂರಿದರು.

ನಕಲಿ ವೈದ್ಯರು ಚಿಕಿತ್ಸೆ ಸೋಗಿನಲ್ಲಿ ರೋಗಿಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಜಿಲ್ಲೆಯ ಗಡಿ ಭಾಗದಲ್ಲಿ ಇವರ ಹಾವಳಿ ಹೆಚ್ಚಿದೆ. ಈ ದಂಧೆಗೆ ಕಡಿವಾಣ ಹಾಕುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಆರೋಪಿಸಿದರು.

‘ಜಿಲ್ಲೆಯಲ್ಲಿ ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರು ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಹೀಗಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ವೈದ್ಯರು ಪರಿಸ್ಥಿತಿಯ ಲಾಭ ಪಡೆದು ದುಪ್ಪಟ್ಟು ಹಣ ಪಡೆಯುತ್ತಿವೆ’ ಎಂದು ಕಿಡಿಕಾರಿದರು.

‘ಕೊರೊನಾ ಸೋಂಕಿನಿಂದ ಇಡೀ ದೇಶ ತಲ್ಲಣಗೊಂಡಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕು ಪತ್ತೆ ಪರೀಕ್ಷೆಗೆ ಹೆಚ್ಚು ಹಣ ಪಡೆಯುತ್ತಿವೆ. ಖಾಸಗಿ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಪಾಲಿಸುತ್ತಿಲ್ಲ. ಆರೋಗ್ಯ ಇಲಾಖೆಗೆ ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಇಲ್ಲವಾಗಿದೆ’ ಎಂದು ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ನಕಲಿ ಕ್ಲಿನಿಕ್‌ಗಳನ್ನು ಬಂದ್‌ ಮಾಡಿಸಬೇಕು. ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗಾಗಿ ಗ್ರಾಮ ಪಂಚಾಯಿತಿಗೊಂದು ಫೀವರ್ ಕ್ಲಿನಿಕ್‌ ತೆರೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಹೊರಗಡೆ ಔಷಧ ಮತ್ತು ಮಾತ್ರೆ ಖರೀದಿಸುವಂತೆ ಚೀಟಿ ಬರೆದುಕೊಡುವ ಪದ್ಧತಿ ತಪ್ಪಬೇಕು’ ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಉಪಾಧ್ಯಕ್ಷ ವಿಶ್ವನಾಥಗೌಡ, ಕಾರ್ಯಾಧ್ಯಕ್ಷ ವೆಂಕಟಾಚಲಪತಿ, ಸದಸ್ಯರಾದ ಗಣೇಶ್, ಮನು, ಅಶೋಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT