ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವಿಜಿ ಹುಟ್ಟೂರು ಪ್ರವಾಸಿ ತಾಣವಾಗಿಸಲಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಒತ್ತಾಯ
Last Updated 21 ಮಾರ್ಚ್ 2019, 14:46 IST
ಅಕ್ಷರ ಗಾತ್ರ

ಕೋಲಾರ: ‘ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಎಂ.ಎಸ್.ಪ್ರಭಾಕರರ (ಕಾಮರೂಪಿ) ಸೇವೆಯನ್ನು ತಡವಾಗಿ ಗುರುತಿಸಲಾಗಿದೆ. ಮುಂದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನೇ ಅಧ್ಯಕ್ಷರಾಗಿ ಆಯ್ಕೆ ಮಾಡುತ್ತೇವೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ದತ್ತಿ ಕಾರ್ಯಕ್ರಮದಡಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಹಿತಿ ಪ್ರಭಾಕರ ಕುರಿತ ಉಪನ್ಯಾಸ ಹಾಗೂ ಡಿವಿಜಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಡಿ.ವಿ ಗುಂಡಪ್ಪರ 133ನೇ ಜನ್ಮ ದಿನಾಚರಣೆ ಮೂಲಕ ವಿದ್ಯಾರ್ಥಿಗಳಿಗೆ ಹಿರಿಯ ಸಾಹಿತಿಗಳನ್ನು ಪರಿಚಯಿಸಲಾಗುತ್ತಿದೆ’ ಎಂದರು.

‘ಸಾಹಿತಿಗಳ ಕುರಿತು ಉಪನ್ಯಾಸ ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿಮಾನ ಮೂಡುತ್ತದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಡಿವಿಜಿಯವರು ಆಧುನಿಕ ಸರ್ವಜ್ಞರಾಗಿದ್ದಾರೆ. ಅವರ ಹುಟ್ಟೂರು ಸೇರಿದಂತೆ ಮುಳಬಾಗಿಲನ್ನು ಪ್ರವಾಸಿ ತಾಣವಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಏ.23ರಿಂದ ಮೇ 14ರವರೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ರಾಷ್ಟ್ರಕವಿ ಕುವೆಂಪು ರಚನೆಯೆ ಶ್ರೀರಾಮಯಣದರ್ಶನಂ ಕುರಿತು ವಿದ್ಯಾರ್ಥಿಗಳಿಗೆ ನಾನಾ ಕಾರ್ಯಕ್ರಮ ನಡೆಸುತ್ತೇವೆ’ ಎಂದು ವಿವರಿಸಿದರು.

‘ಡಿವಿಜಿಯವರ ಮಂಕುತಿಮ್ಮನ ಕಗ್ಗವು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾಲೇಜುಗಳಲ್ಲಿ ಅಭಿಯಾನ ಯಶಸ್ವಿಯಾಗಿ ನಡೆಸಲಾಗಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಹಯೋಗದಲ್ಲಿ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶ್ರೀರಾಮಾಯಣದರ್ಶನಂ ಕುರಿತು ವಿಚಾರ ಸಂಕಿರಣ, ವಿಶೇಷ ಉಪನ್ಯಾಸ, ನೃತ್ಯ ರೂಪಕ, ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಂತಸದ ಸಂಗತಿ: ‘ಸಾಹಿತಿಗಳ ಒತ್ತಾಯದ ಫಲವಾಗಿ ಮಾಸ್ತಿಯವರ ಜನ್ಮ ಸ್ಥಳವನ್ನು ಗ್ರಂಥಾಲಯವಾಗಿ ಮಾಡಿರುವುದು ಸಂತಸದ ಸಂಗತಿ. ಆದರೆ, ಡಿವಿಜಿಯವರ ಹುಟ್ಟೂರು ಸೇರಿದಂತೆ ಮುಳಬಾಗಿಲನ್ನು ಪ್ರವಾಸಿ ತಾಣವಾಗಿಸಲು ಕ್ರಮಕೈಗೊಳ್ಳದಿರುವುದು ವಿಷಾದನೀಯ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಟರಾದ ದಿವಂಗತ ರಾಜ್‌ಕುಮಾರ್ ಸೇರಿದಂತೆ ಅನೇಕರು ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಇಟ್ಟಿರುವುದರಿಂದ ಸಾಹಿತ್ಯದ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲು ಸಹಕಾರಿಯಾಗಿದೆ. ಕನಿಷ್ಠ ₹ 25 ಸಾವಿರದಿಂದ ₹ 1 ಕೋಟಿವರೆಗೆ ದತ್ತಿನಿಧಿ ಇಡಬಹುದು. ನನ್ನ ಗೌರವಧವನ್ನು ದತ್ತಿನಿಧಿಗೆ ಕೊಡುತ್ತೇನೆ’ ಎಂದು ಹೇಳಿದರು.

‘ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಳಿಸಲು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಸಾಹಿತಿಗಳು, ತತ್ವಪದಕಾರರು ಶ್ರಮಿಸಿದ್ದಾರೆ. ಇಂದಿಗೂ ಅನೇಕ ಸಾಹಿತಿಗಳು ಎಲೆಮರೆ ಕಾಯಿಯಂತೆ ಉಳಿದಿದ್ದು, ಅವರನ್ನು ಗುರುತಿಸುವ ಕೆಲಸ ಆಗಬೇಕು’ ಎಂದು ಬೆಂಗಳೂರು ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಡಿ.ಡೊಮಿನಿಕ್ ಸಲಹೆ ನೀಡಿದರು.

ದೈತ್ಯ ಪ್ರತಿಭೆ: ‘ಎಂ.ಎಸ್.ಪ್ರಭಾಕರ ಅವರು ಜಿಲ್ಲೆಯ 84 ವರ್ಷದ ಜ್ಞಾನ ವೃದ್ಧ ಹಾಗೂ ದೈತ್ಯ ಪ್ರತಿಭೆ. ಸುಳ್ಳನ್ನು ನಂಬಿ ಬದುಕುವ ಮನಸ್ಥಿತಿ ತೊಲಗಬೇಕು ಎಂಬುದು ಅವರ ಸಾಹಿತ್ಯದ ಒಳ ಅರ್ಥ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಮುನಿರತ್ನಪ್ಪ ಅಭಿಪ್ರಾಯಪಟ್ಟರು.

‘ಸೃಜನಶೀಲ ವ್ಯಕ್ತಿತ್ವ ಹೊಂದಿರುವ ಪ್ರಭಾಕರ ಅವರು ದೇಹದಲ್ಲಿ ಕೊನೆ ಉಸಿರಿರುವವರೆಗೂ ಜ್ಞಾನದ ಜತೆ ಸಂವಾದ ಮಾಡಬೇಕು ಎಂದು ಹೇಳಿದ್ದಾರೆ’ ಎಂದರು.

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರವಿಕುಮಾರ್ ಡಿವಿಜಿ ಕುರಿತು ಉಪನ್ಯಾಸ ನೀಡಿದರು. ಡಿವಿಜಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಪ್ರಹ್ಲಾದರಾವ್‌, ಬೆಂಗಳೂರು ವಿ.ವಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ವಿ.ನಾಗರಾಜ, ಮಾಸ್ತಿ ಕನ್ನಡ ಸಂಘದ ಅಧ್ಯಕ್ಷ ಜಿ.ವರುಣ್‌ರಾಜ್‌, ಕನ್ನಡ ಸಾಹಿತ್ಯ ಪರಿಷತ್‌ ನಗರ ಘಟಕದ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಘಟಕದ ಕೋಶಾಧ್ಯಕ್ಷ ರತ್ನಪ್ಪ, ಗೌರವಾಧ್ಯಕ್ಷ ಪರಮೇಶ್ವರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT