ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ನ್ಯಾಯಾಲಯದಲ್ಲಿ ಇ-ಫೈಲಿಂಗ್ ಪದ್ಧತಿ

ಸೋಂಕು ತಡೆಗೆ ಸಹಕಾರಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಹೇಳಿಕೆ
Last Updated 23 ಜೂನ್ 2020, 13:42 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಿಕ ಪ್ರಕ್ರಿಯೆಯಲ್ಲಿ ಇ-ಫೈಲಿಂಗ್ ಪದ್ಧತಿ ಅಳವಡಿಸಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇ-ಫೈಲಿಂಗ್ ಪ್ರಕ್ರಿಯೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಇ–ಫೈಲಿಂಗ್ ಪದ್ಧತಿ ಅಳವಡಿಸಿಕೊಳ್ಳಲಾಗಿದೆ’ ಎಂದರು.

‘ಇ–ಫೈಲಿಂಗ್ ಪದ್ಧತಿ ಬಗ್ಗೆ ವಕೀಲರಲ್ಲಿ ಅನೇಕ ಸಂದೇಹ ಇವೆ. ಹೀಗಾಗಿ ವಕೀಲರಿಗೆ ತಿಳಿವಳಿಕೆ ಮೂಡಿಸಲು ಕಾರ್ಯಾಗಾರ ನಡೆಸಲಾಗುತ್ತಿದೆ. ಇ–ಫೈಲಿಂಗ್‌ ಪದ್ಧತಿಯಲ್ಲಿ ಅಂತರ್ಜಾಲದ ಮೂಲಕ ಅರ್ಜಿ ಮಂಡಿಸುವುದರಿಂದ ಕಾಗದಪತ್ರಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುವ ಅವಕಾಶ ಕಡಿಮೆ. ಅಗತ್ಯವೆನಿಸಿದಾಗ ಭೌತಿಕ ಸಲ್ಲಿಕೆಗೆ ಇ–ಮೇಲ್ ಮೂಲಕ ತಿಳಿಸಲಾಗುವುದು’ ಎಂದರು.

‘ಅರ್ಜಿ ಹಾಗೂ ಕಾಗದಪತ್ರಗಳನ್ನು 24 ತಾಸು ಕ್ವಾರಂಟೈನ್ ಮಾಡಿ ನಂತರ ಪರಿಶೀಲಿಸಲಾಗುವುದು. ಇಲ್ಲಿ ಮುಖಾಮುಖಿ ಸಂಪರ್ಕದ ಅವಕಾಶ ಕಡಿಮೆ ಇರುವುದರಿಂದ, ಜನದಟ್ಟಣೆ ಆಗುವುದಿಲ್ಲ. ಆದರೂ ನ್ಯಾಯಿಕ ಪ್ರಕ್ರಿಯೆ ನಡೆಯುತ್ತದೆ. ಯಾವುದೇ ಅರ್ಜಿ ಸಲ್ಲಿಸುವ ಮುನ್ನ ಅನುಮತಿ ಪಡೆಯಬೇಕು. ಅರ್ಜಿಗೆ ಸಕಾರಣ, ಮಹತ್ವ ವಿವರಿಸಬೇಕು. ಇದರ ಆಧಾರದಲ್ಲಿ ಪ್ರಕರಣ ಕೈಗೆತ್ತಿಕೊಳ್ಳಲಾಗುವುದು’ ಎಂದು ವಿವರಿಸಿದರು.

ವಿಳಂಬವಿಲ್ಲ: ‘ಇ–ಫೈಲಿಂಗ್ ಪದ್ಧತಿಯಲ್ಲಿ ಅರ್ಜಿ ವಿಚಾರಣೆ ವಿಳಂಬ ಸಾಧ್ಯತೆಯಿಲ್ಲ. ಈ ಮೊದಲು ನ್ಯಾಯಾಲಯ ಕಲಾಪ ಹೇಗೆ ನಡೆಯುತ್ತಿದ್ದವೋ, ಈಗಲೂ ಅದೇ ಕ್ರಮ ಅನುಸರಿಸಲಾಗುವುದು. ಆದರೆ, ಕಾಗದಪತ್ರಗಳನ್ನು ನೇರವಾಗಿ ಕೈಗೆತ್ತಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಹಾಗೂ ಜನದಟ್ಟಣೆ ನಿಯಂತ್ರಿಸಲು ಈ ಪದ್ಧತಿ ಅನುಸರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ಸೋಂಕು ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅನಿವಾರ್ಯ. ಈಗಾಗಲೇ ನ್ಯಾಯಾಲಯಗಳಿಗೆ ಕಕ್ಷಿದಾರರ ಅನವಶ್ಯಕ ಪ್ರವೇಶ ನಿರ್ಬಂಧಿಸಲಾಗಿದೆ. ನ್ಯಾಯಾಲಯದ ಕಟ್ಟಡಕ್ಕೆ ಬರುವ ಪ್ರತಿ ವ್ಯಕ್ತಿಯನ್ನು ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಜತೆಗೆ ಕೈಗಳನ್ನು ಸ್ವಚ್ಛಗೊಳಿಸಲು ಸ್ಯಾನಿಟೈಸರ್‌ ನೀಡಲಾಗುತ್ತುದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ತಿಳಿಸಿದರು.

ಮೊಬೈಲ್, ಲ್ಯಾಪ್‌ಟಾಪ್ ಮೂಲಕ ಹೇಗೆ ಅರ್ಜಿ ಸಲ್ಲಿಕೆ, ಆ್ಯಪ್‌ ಬಳಕೆ, ವಿಡಿಯೋ ಸಂವಾದದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರ ನೀಡಲಾಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT