ಮಂಗಳವಾರ, ಜೂನ್ 22, 2021
23 °C
ವಿಚಾರ ಸಂಕಿರಣದಲ್ಲಿ ಮಾಜಿ ಶಾಸಕ ಶ್ರೀರಾಮರೆಡ್ಡಿ ಅಭಿಪ್ರಾಯ

ಭೂಮಿಯು ನಾಗರಿಕತೆ ಬೆಳವಣಿಗೆಯ ಮೂಲ: ಶ್ರೀರಾಮರೆಡ್ಡಿ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಭೂಮಿಯು ಕೃಷಿ ಮತ್ತು ಫಸಲಿಗೆ ಸೀಮಿತವಲ್ಲ. ಬದಲಿಗೆ ದೇಶದ ನಾಗರಿಕತೆ ಮತ್ತು ಪರಂಪರೆ ಬೆಳವಣಿಗೆಯ ಮೂಲ’ ಎಂದು ಮಾಜಿ ಶಾಸಕ ಹಾಗೂ ಅವಿಭಜಿತ ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಜಿ.ವಿ.ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟರು.

ಕರ್ನಾಟಕ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಸಂಬಂಧ ತಾಲ್ಲೂಕಿನ ಹೊಸಮಟ್ನಹಳ್ಳಿಯಲ್ಲಿ ಭಾನುವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಶೇ 68ರಷ್ಟು ಜನರ ಜೀವನೋಪಾಯ ಕೃಷಿಯಾಗಿದೆ’ ಎಂದರು.

‘ಉಳುವವನೆ ಭೂ ಒಡೆಯನಾಗಬೇಕು ಮತ್ತು ಜೋಡಿ ಇನಾಂತಿ ರದ್ದಾಗಬೇಕೆಂದು ಪ್ರಪ್ರಥಮವಾಗಿ ರಾಜ್ಯದಲ್ಲಿ 1954ರಲ್ಲಿ ಹೋರಾಟ ಆರಂಭವಾಯಿತು. ನಂತರ ರಾಜ್ಯದೆಲ್ಲೆಡೆ ಹೋರಾಟ ನಡೆದು 1974ರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದರು. ಈ ಕಾಯ್ದೆಯಿಂದ ಉಳುವವರಿಗೆ ಭೂಮಿ ಹಕ್ಕು ಸಿಕ್ಕಿತು. ಇದು ದೇಶದಲ್ಲಿಯೇ ಪ್ರಗತಿಪರ ಹೆಜ್ಜೆಯ ಗುರುತು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಎಡ ಪಂಥೀಯ ರೈತ ಚಳವಳಿ ಪರಂಪರೆ ಮುಂದುವರಿದು ಬಂಜರು ಭೂಮಿಯನ್ನು ಸಾಗುವಳಿದಾರರಿಗೆ ನೀಡಬೇಕೆಂದು ರೈತರು ಹೋರಾಟ ಮಾಡಿದರು. ಬಳಿಕ ಸುಮಾರು 10 ಲಕ್ಷ ಎಕರೆ ಭೂಮಿಯನ್ನು ರೈತರಿಗೆ ಮತ್ತು ಕೃಷಿ ಕೂಲಿಕಾರರಿಗೆ ಹಂಚಿಕೆ ಮಾಡಲಾಯಿತು. ಈ ರೀತಿ ಪಡೆದ ಭೂಮಿಯು ಅವಿಭಜಿತ ಕೋಲಾರ ಜಿಲ್ಲೆಯ ಶೇ 70ರಷ್ಟು ಜನರ ಜೀವನಾಡಿಯಾಗಿದೆ’ ಎಂದು ತಿಳಿಸಿದರು.

ದಿವಾಳಿ ಆಗುತ್ತಾರೆ: ‘ದೊಡ್ಡ ರಾಜಮನೆತನಗಳು, ಮಾರ್ವಡಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲಾಬಿಗೆ ಮಣಿದು ರಾಜ್ಯದಲ್ಲಿನ ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿಸಿದೆ.  ಇದರಿಂದ ರೈತರು, ಕೃಷಿ ಕೂಲಿಕಾರರು ದಿವಾಳಿ ಆಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈವರೆಗೆ ಕೃಷಿಕರಿಗೆ ಮಾತ್ರ ಕೃಷಿ ಭೂಮಿ ಖರೀದಿಸಲು ಅವಕಾಶವಿತ್ತು. ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅವಕಾಶ ಸಿಕ್ಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್‌ ಸಂದರ್ಭ ಬಳಸಿಕೊಂಡು ಬ್ರಿಟೀಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ’ ಎಂದು ಕಿಡಿಕಾರಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಭೀಮಸೇನೆ ರಾಜ್ಯ ಘಟಕದ ಅಧ್ಯಕ್ಷ  ಪಂಡಿತ್ ಮುನಿವೆಂಕಟಪ್ಪ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ಎಂ.ವಿ.ನಾರಾಯಣಸ್ವಾಮಿ, ವಕೀಲ ಎಸ್.ಸತೀಶ್, ರೈತ ಸಂಘ ಹಾಗೂ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.