ಶುಕ್ರವಾರ, ಅಕ್ಟೋಬರ್ 30, 2020
27 °C

ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ ಸೇವಿಸಿ: ಎಂ.ಜಿ.ಪಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಅಪೌಷ್ಟಿಕತೆ ತಡೆಗೆ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಸಮುದಾಯ ಮಟ್ಟದಲ್ಲಿ ಪೌಷ್ಟಿಕ ಆಹಾರದ ಮಹತ್ವ ಕುರಿತು ಅರಿವು ಮೂಡಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಹೇಳಿದರು.

ಕೃಷಿ ವಿಜ್ಞಾನ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ಉದ್ಘಾಟಿಸಿ ಮಾತಾನಾಡಿ, ‘ಪ್ರತಿ ಮನುಷ್ಯನ ಊಟದಲ್ಲಿ ತರಕಾರಿ, ಸೊಪ್ಪು, ಹಣ್ಣು- ಬಳಕೆ ತುಂಬಾ ಅವಶ್ಯಕ. ಸಮತೋಲಿತ ಆಹಾರ ಸೇವನೆಯಿಂದ ಆರೋಗ್ಯವಾಗಿರಬಹುದು’ ಎಂದರು.

‘ಪ್ರತಿ ವರ್ಷ ಸೆ.1ರಿಂದ ಪೌಷ್ಟಿಕ ಮಾಹೆ ಆಚರಿಸಲಾಗುತ್ತದೆ. ಅಪೌಷ್ಟಿಕತೆ ಹೋಗಲಾಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಸಮತೋಲಿತ ಆಹಾರದಲ್ಲಿ ಕಾರ್ಬೊಹೈಡ್ರೇಟ್ಸ್, ಪ್ರೋಟಿನ್, ನಾರಿನಾಂಶ, ಕೊಬ್ಬು ಮತ್ತು ಖನಿಜಾಂಶ ಇರಬೇಕು’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜಿ.ಎಸ್‌.ಚಿಕ್ಕಣ್ಣ ತಿಳಿಸಿದರು.

‘ವಿಶ್ವ ಸಂಸ್ಥೆಯ 2019ರ ವರದಿ ಪ್ರಕಾರ ಭಾರತ ದೇಶದಲ್ಲಿ 24.94 ಕೋಟಿ ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬೊಜ್ಜು ಹೊಂದಿರುವ ಜನಸಂಖ್ಯೆ ಪ್ರಮಾಣವು 2012ರಲ್ಲಿ 25.20 ಕೋಟಿಯಿತ್ತು. ಈಗ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಜನಸಂಖ್ಯೆ ಪ್ರಮಾಣ 34.30 ಕೋಟಿಗೆ ಏರಿಕೆಯಾಗಿದೆ. ಅಂದರೆ ಶೇ 3.90ಯಷ್ಟು ಹೆಚ್ಚಾಗಿದೆ’ ಎಂದು ವಿವರಿಸಿದರು.

‘ತರಕಾರಿಗಳಲ್ಲಿ ರಾಸಾಯನಿಕ ಅಂಶ ಹೆಚ್ಚಾಗಿದೆ. ಆದ ಕಾರಣ ಬಿಸಿ ನೀರಿನಲ್ಲಿ ಉಪ್ಪು ಹಾಕಿ ತರಕಾರಿ ತೊಳೆದು ಬಳಸಬೇಕು. ನೇರಳೆ ಹಣ್ಣು ತಿನ್ನುವುದರಿಂದ ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರ ಕೈತೋಟ ಮಾಡಲು ₹ 2,400 ಸಹಾಯಧನ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು. ಮನೆಯ ಹತ್ತಿರ ಸ್ಥಳಾವಕಾಶವಿದ್ದರೆ ತಾರಸಿ ತೋಟ ಮಾಡಬೇಕು. ಮನೆಗೆ ದಿನನಿತ್ಯದ ಬಳಕೆಗೆ ಬೇಕಾದ ತರಕಾರಿಗಳನ್ನು ಕೈತೋಟದಲ್ಲೇ ಬೆಳೆದುಕೊಳ್ಳಬಹುದು. ಇದರಿಂದ ಆರ್ಥಿಕವಾಗಿ ಉಪಯೋಗವಾಗುತ್ತದೆ. ಜತೆಗೆ ಆರೋಗ್ಯ ಕಾಪಾಡಬಹುದು’ ಎಂದು ಹೇಳಿದರು.

ಪೋಷಣ್ ಅಭಿಯಾನದ ಸಂಯೋಜಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು