ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಾಹಾರ ಸೇವನೆಯೇ ದುರಂತಕ್ಕೆ ಕಾರಣ: ಪ್ರಾಥಮಿಕ ತನಿಖೆಯಿಂದ ಬಹಿರಂಗ

ಮುನ್ನೆಚ್ಚರಿಕೆ ಕುರಿತು ಮಾರ್ಗಸೂಚಿ ಅಗತ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ
Last Updated 26 ಜನವರಿ 2019, 13:42 IST
ಅಕ್ಷರ ಗಾತ್ರ

ಕೋಲಾರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಭಕ್ತರೊಬ್ಬರು ಮೃತಪಟ್ಟು 12 ಮಂದಿ ಅಸ್ವಸ್ಥರಾಗಿರುವುದಕ್ಕೆ ವಿಷಾಹಾರ ಸೇವನೆಯೇ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಗಂಗಮ್ಮ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಚಿಂತಾಮಣಿ ಹಾಗೂ ಸುತ್ತಮುತ್ತಲಿನ ಭಕ್ತರು ದೇವಸ್ಥಾನಕ್ಕೆ ಬಂದು ಹರಕೆ ತೀರಿಸುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರು ಹೊರ ಭಾಗದಲ್ಲಿ ಅಥವಾ ಮನೆಯಲ್ಲಿ ಪ್ರಸಾದ ಸಿದ್ಧಪಡಿಸಿಕೊಂಡು ಬಂದು ಭಕ್ತರಿಗೆ ವಿತರಿಸುತ್ತಾರೆ.

ಅದೇ ರೀತಿ ಶುಕ್ರವಾರ ಸಂಜೆ ಅಪರಿಚಿತ ಮಹಿಳೆಯೊಬ್ಬರು ಹೊರಗಿನಿಂದ ದೇವಸ್ಥಾನಕ್ಕೆ ಪ್ರಸಾದ (ಕೇಸರಿ ಬಾತ್‌) ತಂದು ಭಕ್ತರಿಗೆ ಹಂಚಿದ್ದರು. ಅಸ್ವಸ್ಥರ ಪೈಕಿ ಸರಸ್ವತಮ್ಮ, ಸುಧಾ, ಚೇತು ಮತ್ತು ಕೀರ್ತನಾ ದೇವಸ್ಥಾನದಲ್ಲೇ ಆ ಮಹಿಳೆಯಿಂದ ಪ್ರಸಾದ ಸ್ವೀಕರಿಸಿ ಸೇವಿಸಿದ್ದರು.

ದೇವಸ್ಥಾನಕ್ಕೆ ಹೋಗಿದ್ದ ರಾಜು ಸಹ ಆ ಮಹಿಳೆಯಿಂದ ಪ್ರಸಾದ ಪಡೆದು ಮನೆಗೆ ತಂದು ಪತ್ನಿ ರಾಧಾ, ಅಣ್ಣ ಗಂಗಾಧರ್‌, ಅತ್ತಿಗೆ ಕವಿತಾ, ಅಣ್ಣನ ಮಕ್ಕಳಾದ ಗಾನವಿ ಮತ್ತು ಶರಣ್ಯಗೆ ಕೊಟ್ಟಿದ್ದರು. ಅದೇ ರೀತಿ ನಾರಾಯಣಮ್ಮ ಸಹ ದೇವಸ್ಥಾನದಲ್ಲಿ ಮಹಿಳೆಯಿಂದ ಪ್ರಸಾದ ತೆಗೆದುಕೊಂಡು ಬಂದು ಕುಟುಂಬ ಸದಸ್ಯರಾದ ಶಿವಕುಮಾರ್‌, ವೆಂಕಟರಮಣಪ್ಪ ಜತೆ ಸೇವಿಸಿದ್ದರು. ನಂತರ 13 ಮಂದಿಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ, ಭೇದಿಯಾಗಿದೆ.

ವಿಷ ಬೆರೆತಿಲ್ಲ: ‘ಗಂಗಮ್ಮ ದೇವಸ್ಥಾನದಲ್ಲಿ ಭಕ್ತರು ಸೇವಿಸಿದ ಪ್ರಸಾದದಲ್ಲಿ ವಿಷ ಬೆರೆತಿರುವ ಸಾಧ್ಯತೆಯಿಲ್ಲ. ಬೆಳಿಗ್ಗೆ ಸಿದ್ಧಪಡಿಸಿದ್ದ ಪ್ರಸಾದವನ್ನು ಸಂಜೆ ವಿತರಿಸಲಾಗಿದೆ. ಪ್ರಸಾದ ಸಿದ್ಧವಾಗಿ ಹೆಚ್ಚು ಸಮಯವಾಗಿದ್ದರಿಂದ ಅದು ವಿಷಾಹಾರವಾಗಿ ಪರಿವರ್ತನೆಗೊಂಡಿರಬಹುದು. ಇಲ್ಲವೇ ಪ್ರಸಾದ ಸಿದ್ಧಪಡಿಸಿದ ಅಥವಾ ಅದನ್ನು ವಿತರಿಸಿದ ವ್ಯಕ್ತಿಗೆ ಸ್ಟೈಫಲೋ ಕೊಕುಸ್ ಸೋಂಕು ಇರುವ ಶಂಕೆಯಿದೆ. ಸ್ಟೈಫಲೋ ಕೊಕುಸ್ ಸೋಂಕು ಬ್ಯಾಕ್ಟೀರಿಯಾದಿಂದ ಬರುವ ಚರ್ಮ ರೋಗ’ ಎಂದು ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಎಂ.ಎಸ್.ಲಕ್ಷ್ಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಟೈಫಲೋ ಕೊಕುಸ್ ಸೋಂಕಿನ ಬ್ಯಾಕ್ಟೀರಿಯಾ ಪ್ರಸಾದದ ಜತೆ ಭಕ್ತರ ಉದರ ಸೇರಿ ಪ್ರಸಾದವು ವಿಷಾಹಾರವಾಗಿ ಪರಿವರ್ತಿತವಾಗಿರುವ ಶಂಕೆ ಇದೆ. ಅಸ್ವಸ್ಥರ ಪೈಕಿ ಸರಸ್ವತಮ್ಮ ಸ್ಥಿತಿ ಗಂಭೀರವಾಗಿದೆ’ ಎಂದು ಹೇಳಿದರು.

ಪರಿಹಾರದ ಭರವಸೆ: ಜಾಲಪ್ಪ ಆಸ್ಪತ್ರೆಯಲ್ಲಿ ಅಸ್ವಸ್ಥ ಭಕ್ತರ ಆರೋಗ್ಯ ವಿಚಾರಿಸಿದ ವಿಧಾನಸಭೆ ಉಪ ಸಭಾಪತಿ ಜೆ.ಕೆ.ಕೃಷ್ಣಾರೆಡ್ಡಿ, ‘ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ₹ 25 ಸಾವಿರ ಮತ್ತು ಅಸ್ವಸ್ಥರ ಚಿಕಿತ್ಸೆಗೆ ತಲಾ ₹ 5 ಸಾವಿರ ನೀಡುತ್ತೇನೆ. ಸರ್ಕಾರದಿಂದ ಪರಿಹಾರ ಕೊಡಿಸಲು ಮುಖ್ಯಮಂತ್ರಿಯವರ ಜತೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ಕಲ್ಪಿಸುತ್ತೇವೆ’ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದರು.

ಮುನ್ನೆಚ್ಚರಿಕೆ ಕ್ರಮಕ್ಕೆ ಮಾರ್ಗಸೂಚಿ ಅಗತ್ಯ: ಸಿಎಂ

ಚಿಕ್ಕಬಳ್ಳಾಪುರ:ಜಿಲ್ಲೆಯ ಚಿಂತಾಮಣಿಯಲ್ಲಿರುವ ದೇವಾಲಯದಲ್ಲಿ ಪ್ರಸಾದ ಸ್ವೀಕರಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಮರಣೋತ್ತರ ಪರೀಕ್ಷೆಯ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ಪದೇ ಪದೇ ಇಂತಹ ದುರಂತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸರ್ಕಾರ ಕೆಲವು ಮಾರ್ಗಸೂಚಿ ಹೊರಡಿಸುವ ಅಗತ್ಯವಿದೆ ಎಂಬುದು ನನ್ನ ಅಭಿಪ್ರಾಯ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT