ಶುಕ್ರವಾರ, ಸೆಪ್ಟೆಂಬರ್ 20, 2019
27 °C
ನೀರು ಬತ್ತಿದ ಕೊಳವೆ ಬಾವಿಗಳ ವಿದ್ಯುತ್‌ ಬಿಲ್‌ ಪಾವತಿ

ಸರ್ಕಾರಿ ಹಣ ಪೋಲಾಗಬಾರದು: ಪಿಡಿಒಗಳಿಗೆ ಸೂಚನೆ

Published:
Updated:
Prajavani

ಕೋಲಾರ: ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಬತ್ತಿ ಹೋಗಿರುವ ಕೊಳವೆ ಬಾವಿಗಳ ವಿದ್ಯುತ್ ಬಿಲ್ ಪಾವತಿಸುತ್ತಿರುವುದರಿಂದ ಪಂಚಾಯಿತಿಗಳಿಗೆ ಆರ್ಥಿಕ ಹೊರೆಯಾಗುತ್ತಿದೆ. ಸರ್ಕಾರಿ ಹಣ ಈ ರೀತಿ ಪೋಲಾಗುವುದನ್ನು ತಡೆಯಿರಿ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಪಿಡಿಒಗಳಿಗೆ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಭೆಯಲ್ಲಿ ಮಾತನಾಡಿ, ‘ನೀರು ಬತ್ತಿರುವ ಕೊಳವೆ ಬಾವಿಗಳ ಪಟ್ಟಿಯನ್ನು 15 ದಿನದೊಳಗೆ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಮಳೆ ಅಭಾವದಿಂದ ಬರ ಪರಿಸ್ಥಿತಿ ಎದುರಾಗಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ನೀರು ಬತ್ತುತ್ತಿರುವ ಕೊಳವೆ ಬಾವಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಗ್ರಾಮಗಳಲ್ಲಿ ನೀರಿನ ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕು. ಸಮಸ್ಯೆ ವರದಿಯಾದ 24 ತಾಸಿನಲ್ಲಿ ನೀರಿನ ಸೌಲಭ್ಯ ಒದಗಿಸಬೇಕು. ನಂತರ ಖಾಸಗಿ ಕೊಳವೆ ಬಾವಿಗಳಿಂದ ನೀರು ಖರೀದಿಸಬಹುದು ಅಥವಾ ಹೊಸ ಕೊಳವೆ ಬಾವಿ ಕೊರೆಸಿ ನೀರು ಕೊಡಬೇಕು’ ಎಂದರು.

‘ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆಯಿಲ್ಲ. ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ, ಅಗತ್ಯ ಇರುವ ಕಡೆ ಮಾತ್ರ ಕೊಳವೆ ಬಾವಿ ಕೊರೆಸಬೇಕು. ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿರುವ ಬಗ್ಗೆ ದೂರು ಬಂದಿವೆ. ಈ ಘಟಕಗಳನ್ನು ಶೀಘ್ರವೇ ದುರಸ್ತಿ ಮಾಡಿ ಜನರಿಗೆ ಶುದ್ಧ ನೀಡಬೇಕು’ ಎಂದು ಹೇಳಿದರು.

ತ್ಯಾಜ್ಯದ ಸಮಸ್ಯೆ: ‘ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ವಿಲೇವಾರಿಯು ದೊಡ್ಡ ಸಮಸ್ಯೆಯಾಗಿದೆ. ತ್ಯಾಜ್ಯ ಘಟಕ ಸ್ಥಾಪನೆಗೆ ಜಾಗ ಗುರುತಿಸಿ. ಕಸ ಮತ್ತು ಚರಂಡಿ ಸಮಸ್ಯೆಯಿಂದ ನೈರ್ಮಲ್ಯ ಸಮಸ್ಯೆ ಎದುರಾಗಿ ಡೆಂಗಿ, ಚಿಕೂನ್‌ ಗುನ್ಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಮತ್ತು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು’ ಎಂದು ಆದೇಶಿಸಿದರು.

‘ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಾಗ ಗುರುತಿಸಿ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲೇ ಕಸ ವಿಲೇವಾರಿ ಮಾಡಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಚರ್ಚಿಸಿದ್ದು, ಸರ್ಕಾರಿ ಜಾಗದ ಮಾಹಿತಿ ನೀಡಿದರೆ ಜಿಲ್ಲಾಧಿಕಾರಿ ಮಂಜೂರಾತಿ ನೀಡುತ್ತಾರೆ’ ಎಂದು ವಿವರಿಸಿದರು.

‘ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗಳ ಬಗ್ಗೆ ತಾ.ಪಂ ಸದಸ್ಯರಿಗೂ ಮಾಹಿತಿ ನೀಡಿ ಕಡ್ಡಾಯವಾಗಿ ಅವರನ್ನೂ ಸಭೆಗೆ ಆಹ್ವಾನಿಸಬೇಕು’ ಎಂದು ತಿಳಿಸಿದರು.

ತಾ.ಪಂ.ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಮುದುವಾಡಿ ಬಾಬು, ಕಾರ್ಯ ನಿರ್ವಹಣಾಧಿಕಾರಿ ಬಾಬು, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಮಂಜುನಾಥ್ ಹಾಜರಿದ್ದರು.

Post Comments (+)