ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅರ್ಥಶಾಸ್ತ್ರ ನಿರ್ಣಾಯಕ

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಶ್ರೀಶೈಲಾ ಅಭಿಪ್ರಾಯ
Last Updated 27 ಸೆಪ್ಟೆಂಬರ್ 2019, 14:57 IST
ಅಕ್ಷರ ಗಾತ್ರ

ಕೋಲಾರ: ‘ಅರ್ಥಶಾಸ್ತ್ರ ವಿಷಯ ಅಧ್ಯಯನ ಮಾಡಿದವರಿಗೆ ವಿಪುಲ ಉದ್ಯೋಗಾವಕಾಶಗಳಿವೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅರ್ಥಶಾಸ್ತ್ರದ ಪಾತ್ರ ನಿರ್ಣಾಯಕ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಟಿ.ಎಸ್.ಶ್ರೀಶೈಲಾ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯು ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಅರ್ಥಶಾಸ್ತ್ರ ಪಠ್ಯಾಧಾರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು ದಿನನಿತ್ಯ ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆ ಅರ್ಥ ಮಾಡಿಕೊಂಡು ಹೊಸ ಆರ್ಥಿಕ ಚಿಂತನೆಯತ್ತ ಗಮನಹರಿಸಬೇಕು. ಇತಿಹಾಸವೇ ಬೇರೆ ಅರ್ಥಶಾಸ್ತ್ರವೇ ಬೇರೆ. ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಅರ್ಥಶಾಸ್ತ್ರದ ಜ್ಞಾನ ಹೆಚ್ಚಿಸಬೇಕು ಮತ್ತು ವಿಷಯದಲ್ಲಿ ಹಿಡಿತ ಸಾಧಿಸುವಂತೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಉಪನ್ಯಾಸಕರು ಅಧ್ಯಯನಶೀಲರಾಗಬೇಕು. ಆಗ ಮಾತ್ರ ವೃತ್ತಿಯಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯ. ಬದಲಾದ ಶಿಕ್ಷಣ ನೀತಿಗೆ ಅನುಗುಣವಾಗಿ ಉಪನ್ಯಾಸಕರ ಜ್ಞಾನ ವಿಸ್ತಾರವಾಗಬೇಕು. ಉಪನ್ಯಾಸಕರು ಅಧ್ಯಯನಶೀಲರಾಗದಿದ್ದರೆ ಬೋಧನೆ ಗುಣಮಟ್ಟ ಕುಸಿಯುತ್ತದೆ. ವೃತ್ತಿ ಬದುಕಿಗೆ ಸಂಬಂಧಿಸಿದ ತರಬೇತಿ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಬೋಧನಾ ಕ್ರಮ ಉತ್ತಮಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕಲಾ ಹಾಗೂ ವಾಣಿಜ್ಯ ವಿಭಾಗಕ್ಕೆ ದಾಖಲಾಗಲು ವಿದ್ಯಾರ್ಥಿಗಳು ಹಿಂದೇಟು ಹಾಕುವ ಕಾಲವಿತ್ತು. ಆದರೆ, ಈಗ ಅರ್ಥಶಾಸ್ತ್ರಕ್ಕೆ ಹೆಚ್ಚು ಮಹತ್ವ ಬಂದಿದೆ. ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನ ವಿಭಾಗಕ್ಕಿಂತಲೂ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ದಾಖಲಾಗುತ್ತಿದ್ದಾರೆ’ ಎಂದು ಹೇಳಿದರು.

ಅಭಿವೃದ್ಧಿಗೆ ಅಡಿಪಾಯ: ‘ದೇಶದ ಅಭಿವೃದ್ಧಿಗೆ ಅರ್ಥವ್ಯವಸ್ಥೆ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳ ಜ್ಞಾನ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಜಗತ್ತಿನ ಆರ್ಥಿಕ ಚಟುವಟಿಕೆಗಳು ಮತ್ತು ಅವುಗಳ ಮೇಲೆ ಪರಿಣಾಮ ಬೀರುವ ಅಂಶಗಳು, ಪ್ರಸಕ್ತ ವಿಚಾರಗಳನ್ನು ವಿದ್ಯಾರ್ಥಿಗಳು ಅರಿಯಬೇಕು’ ಎಂದು ಜಿಲ್ಲಾ ಪಿಯುಸಿ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ಕಿವಿಮಾತು ಹೇಳಿದರು.

‘ಮಕ್ಕಳ ಸಮಸ್ಯೆ ಪರಿಹರಿಸುವ ಶಕ್ತಿ ಪಡೆದುಕೊಂಡಾಗ ಗುರುವೆಂಬ ಭಾವನೆ ಬಲಗೊಳ್ಳುತ್ತದೆ. ವಿಜ್ಞಾನ ವಿಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಮಾನ್ಯತೆ ಈಗ ವಾಣಿಜ್ಯ ಮತ್ತು ಕಲಾ ವಿಭಾಗಕ್ಕೂ ವಿಸ್ತರಣೆಯಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯ ಅಧ್ಯಯನಕ್ಕೆ ಪೂರಕವಾಗಿರುವ ಅರ್ಥಶಾಸ್ತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ’ ಎಂದರು.

ಮಹತ್ವ ನೀಡಬೇಕು: ‘ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತವೂ ಒಂದು. ದೇಶದಲ್ಲಿ ಅರ್ಥಶಾಸ್ತ್ರ ವಿಷಯದ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ದೇಶದ ಅರ್ಥವ್ಯವಸ್ಥೆ ಬಲಗೊಳ್ಳಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದು ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಅಧ್ಯಕ್ಷ ಟಿ.ಚಂದ್ರಪ್ಪ ಹೇಳಿದರು.

‘ಸಂಘವು 9 ವರ್ಷಗಳಿಂದ ಅನೇಕ ಚಟುವಟಿಕೆ ನಡೆಸುತ್ತಿದೆ. ಅರ್ಥಶಾಸ್ತ್ರವನ್ನು ಬೆಳೆಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ. ಈ ನಿಟ್ಟಿನಲ್ಲಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಲೇಖನ, ವಿಚಾರ ಮತ್ತು ಆರ್ಥಿಕ ವಿದ್ಯಮಾನಗಳ ಕುರಿತು ಪತ್ರಿಕೆಯಲ್ಲಿ ಬರೆಯಬೇಕು’ ಎಂದು ಸಲಹೆ ನೀಡಿದರು.

ಅರ್ಥಶಾಸ್ತ್ರ ವಿಷಯದಲ್ಲಿ 100 ಅಂಕ ಗಳಿಸಿದ 18 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಗೌರವಾಧ್ಯಕ್ಷ ಪಿ.ಕೃಷ್ಣಪ್ಪ, ಕಾರ್ಯದರ್ಶಿ ನಾರಾಯಣಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT