ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಮರ್ಥ್ಯಕ್ಕೆ ತಕ್ಕ ಶಿಕ್ಷಣ ನೀಡಿ

ಶಿಕ್ಷಕರಿಗೆ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಕಿವಿಮಾತು
Last Updated 5 ಸೆಪ್ಟೆಂಬರ್ 2019, 14:33 IST
ಅಕ್ಷರ ಗಾತ್ರ

ಕೋಲಾರ: ‘ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ನೀಡುವ ಶಕ್ತಿ ಪಡೆದುಕೊಳ್ಳಿ. ಮಕ್ಕಳ ದಾಖಲಾತಿ ಕುಸಿತದಿಂದ ಸರ್ಕಾರಿ ಶಾಲೆಗಳು ಮುಚ್ಚಿದರೆ ಸಮಾಜ ನಿಮ್ಮನ್ನು ಕ್ಷಮಿಸಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಇಲ್ಲಿ ಗುರುವಾರ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ‘ಬಡವರು, ಆರ್ಥಿಕವಾಗಿ ಸ್ಥಿತಿವಂತರಲ್ಲದವರು ಮಾತ್ರ ಸರ್ಕಾರಿ ಶಾಲೆಗೆ ಬರುತ್ತಾರೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಸುಶಿಕ್ಷಿತರಾಗಿ ಮಾಡಿ. ಶಿಕ್ಷಕರು ಶಾಲಾ ಮಕ್ಕಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಿದರೆ ಸರ್ಕಾರಿ ಶಾಲೆ ಉಳಿಯುತ್ತವೆ’ ಎಂದರು.

‘ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ನೇರವಾಗಿ ಶಿಕ್ಷಕರೊಂದಿಗೆ ಸಂವಾದ ನಡೆಸಿದ್ದಾರೆ. ತಂತ್ರಜ್ಞಾನವು ಕೇವಲ ಒಂದು ಸಾಧನವಷ್ಟೇ. ಅದು ಬಳಕೆಯಾಗಲು ಶಿಕ್ಷಕರು ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಿ ನೌಕರರಲ್ಲಿ ಹೆಚ್ಚಿನವರು ಶಿಕ್ಷಕರಿದ್ದಾರೆ. ಆದರೂ ಜಿಲ್ಲಾ ಕೇಂದ್ರದಲ್ಲಿ ಗುರುಭವನ ನಿರ್ಮಾಣ ಸಾಧ್ಯವಾಗಿಲ್ಲ. ಸಂಸದರು, ಶಾಸಕರು ಹಾಗೂ ನಾನು ಸೇರಿ ₹ 5 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಾಣಕ್ಕೆ ಸಂಕಲ್ಪ ಮಾಡುತ್ತೇವೆ. ಶಿಕ್ಷಕರ ಸಂಘಗಳು ಸ್ವಪ್ರತಿಷ್ಠೆ ಬಿಟ್ಟು ಈ ಕಾರ್ಯಕ್ಕೆ ಕೈಜೋಡಿಸಬೇಕು’ ಎಂದು ಕೋರಿದರು.

‘ಶಿಕ್ಷಕರನ್ನು ಜಾತಿಗಣತಿ, ಪಶು ಗಣತಿ, ಚುನಾವಣಾ ಕಾರ್ಯ, ಬಿಸಿಯೂಟ ಹೀಗೆ ವಿವಿಧ ಕಾರ್ಯಗಳಿಗೆ ಬಳಸಿಕೊಂಡು ನೆಮ್ಮದಿಯಿಂದ ಪಾಠ ಮಾಡಲು ಬಿಡುತ್ತಿಲ್ಲ. ಈ ಸಂಬಂಧ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರೊಂದಿಗೆ ಮಾತನಾಡಿ ಶಿಕ್ಷಕರ ಕಾರ್ಯ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ನೋವಿನ ಸಂಗತಿ: ‘ಶಿಕ್ಷಕರು ಸಂಬಳಕ್ಕಾಗಿ ಹೋರಾಟ ನಡೆಸುವುದು ನೋವಿನ ಸಂಗತಿ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಬರದಂತೆ ಮಾಡಬೇಕು. ಗುರುವಿಲ್ಲದ ಮತ್ತು ಗುರಿಯಿಲ್ಲದ ಸಮಾಜಕ್ಕೆ ಉಳಿಗಾಲವಿಲ್ಲ. ಸಮಾಜಕ್ಕೆ ಬೆಳಕು ನೀಡಲು ಶಿಕ್ಷಕರು ಟೊಂಕ ಕಟ್ಟಿ ಕೆಲಸ ಮಾಡಿ’ ಎಂದು ಮನವಿ ಮಾಡಿದರು.

‘ದೇಶದ ಭವಿಷ್ಯ ಶಾಲಾ ಕೊಠಡಿಯ 4 ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ ಎಂಬ ಮಾತಿದೆ. ಆದರೆ, ಮಕ್ಕಳನ್ನು ಅಂಕ ಗಳಿಕೆಗೆ ಸೀಮಿತ ಮಾಡುವುದು ಬೇಡ. ಮಕ್ಕಳಲ್ಲಿ ಜ್ಞಾನ ತುಂಬಿ. ಜಾತಿ ಮತಕ್ಕಿಂತ ಶಿಕ್ಷಣ ಧರ್ಮ ಮುಖ್ಯ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT