ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆ

ಶಿಕ್ಷಣ ಇಲಾಖೆಯ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಪೋಷಕರ ಆತಂಕ
Last Updated 14 ಮೇ 2020, 15:52 IST
ಅಕ್ಷರ ಗಾತ್ರ

ಕೋಲಾರ: ಸಾರ್ವಜನಿಕ ಶಿಕ್ಷಣ ಇಲಾಖೆಯು ಇಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಫೋನ್‌–ಇನ್‌ ಕಾರ್ಯಕ್ರಮಕ್ಕೆ ಕರೆ ಮಾಡಿದ ಪೋಷಕರು, ‘ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನಾಂಕ ಪ್ರಕಟಗೊಳ್ಳದ ಕಾರಣ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರೆ ಮಾಡಿದರು. ಈ ಪೈಕಿ ಬಹುಪಾಲು ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕದ ಬಗ್ಗೆ ಪ್ರಶ್ನೆ ಮಾಡಿದರು. ಮತ್ತೊಂದೆಡೆ ಫೋನ್‌ ಕರೆ ಮಾಡಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ ಪೋಷಕರು ಸಹ ಪರೀಕ್ಷೆಯ ನಿಗದಿತ ದಿನಾಂಕ ತಿಳಿಸಿ ಎಂದು ಮನವಿ ಮಾಡಿದರು.

‘ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲಾಗಿದ್ದು, ವಿದ್ಯಾರ್ಥಿಗಳು ಆತಂಕಪಡಬಾರದು. ಇಲಾಖೆಯು ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಸುವ ಸುಳಿವು ನೀಡಿದೆ’ ಎಂದು ಹೇಳಿದ ಡಿಡಿಪಿಐ ಕೆ.ರತ್ನಯ್ಯ ಅವರು ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕ ನಿವಾರಿಸುವ ಪ್ರಯತ್ನ ಮಾಡಿದರು.

ಕೆಲ ಮಕ್ಕಳು ಪಠ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಜತೆಗೆ ಪರೀಕ್ಷೆ ವೇಳಾಪಟ್ಟಿ ಯಾವಾಗ ಪ್ರಕಟವಾಗುತ್ತದೆ ಮತ್ತು ಪ್ರವೇಶಪತ್ರ ಯಾವಾಗ ಕೊಡುತ್ತೀರಾ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ, ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶಕ್ಕೆ ಫೋನ್‌–ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಸದ್ಯದಲ್ಲೇ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು. ನಂತರ ಮಕ್ಕಳಿಗೆ ಆಯಾ ಶಾಲೆಯಲ್ಲಿ ಹೊಸ ಪ್ರವೇಶಪತ್ರ ವಿತರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಪರೀಕ್ಷಾ ಕೊಠಡಿಯಲ್ಲಿ ಒಂದು ಮೀಟರ್ ಅಂತರ ಕೊಟ್ಟು ಮಕ್ಕಳನ್ನು ಕೂರಿಸಲಾಗುತ್ತದೆ. ಇಲಾಖೆಯು ಕೊರೊನಾ ಸೋಂಕು ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.

ಮಕ್ಕಳೊಂದಿಗೆ ಸಂಪರ್ಕ: ‘ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಫೋನ್‌–ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ನಿರಂತರವಾಗಿ ಮಕ್ಕಳೊಂದಿಗೆ ಸಂಪರ್ಕದಲ್ಲಿರುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವರಿಸಿದರು.

‘ಮಕ್ಕಳಿಗೆ ಇನ್ನೂ ಸಮಸ್ಯೆಗಳಿದ್ದರೆ ಮೇ 20ರಂದು ಮತ್ತೆ ನಡೆಯುವ ಫೋನ್‌–ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆಯಬಹುದು. ಲಾಕ್‌ಡೌನ್‌ ಅಂತ್ಯಗೊಂಡ ನಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ಪರೀಕ್ಷೆ ನಡುವೆ ಓದಲು ಅವಕಾಶ ಸಿಗಲಿದೆ’ ಎಂದು ಮಾಹಿತಿ ನೀಡಿದರು.

‘ಸಮಸ್ಯೆಗಳಿದ್ದರೆ ಶಿಕ್ಷಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಉತ್ತರ ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬೇಡಿ. ಇಲಾಖೆ ನೀಡಿರುವ 6 ಸೆಟ್ ಪ್ರಶ್ನೆಪತ್ರಿಕೆ, ‘ನನ್ನನ್ನೊಮ್ಮೆ ಗಮನಿಸಿ’ ಅಭ್ಯಾಸ ಮಾಡಿ. ಅದರ ಪ್ರತಿ ಇಲ್ಲದಿದ್ದರೆ ದೂರವಾಣಿ ಕರೆ ಮಾಡಿ ತಿಳಿಸಿದರೆ ಸಾಫ್ಟ್ ಪ್ರತಿ ಕಳುಹಿಸುತ್ತೇವೆ’ ಎಂದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿವೈಪಿಸಿ ಮೋಹನ್ ಬಾಬು, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಬಿ.ವೆಂಕಟೇಶಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT