ಶುಕ್ರವಾರ, ಫೆಬ್ರವರಿ 21, 2020
18 °C
ಉದ್ಯೋಗ ಮೇಳ

ರೈತರ ಮಕ್ಕಳಿಗೆ ಶಿಕ್ಷಣವೇ ಆಸ್ತಿ: ಸಚಿವ ನಾಗೇಶ್ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬರದಿಂದ ರೋಸಿ ಹೋಗಿರುವ ಜಿಲ್ಲೆಯ ರೈತರ ಮಕ್ಕಳಿಗೆ ಶಿಕ್ಷಣವೊಂದೇ ಆಸ್ತಿ. ವಿದ್ಯಾವಂತ ಯುವಕ ಯುವತಿಯರು ಉದ್ಯೋಗಕ್ಕೆ ಸೇರಿ ಕುಟುಂಬಕ್ಕೆ ಆಧಾರ ಸ್ತಂಭವಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಮೇಳಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರದಿಂದ ರಾಜ್ಯದೆಲ್ಲೆಡೆ ಉದ್ಯೋಗ ಮೇಳ ನಡೆಸಲಾಗುತ್ತಿದ್ದು, ನಿರುದ್ಯೋಗಿಗಳು ಮೇಳದ ಸದುಪಯೋಗ ಪಡೆಯಬೇಕು’ ಎಂದರು.

‘ಮೇಳದಲ್ಲಿ ಪಾಲ್ಗೊಂಡಿರುವ ಕಂಪನಿ ಪ್ರತಿನಿಧಿಗಳು ಉದ್ಯೋಗ ಅಕಾಂಕ್ಷಿಗಳ ಬಳಿ ದಾಖಲೆಪತ್ರದ ಕೊರತೆಯಿದ್ದರೂ ಕಾಲಾವಕಾಶ ನೀಡಿ ಆದ್ಯತೆ ಮೇರೆಗೆ ಕೆಲಸ ಕೊಡಬೇಕು. ಜಿಲ್ಲೆಯಲ್ಲಿ ಅನೇಕ ಕೈಗಾರಿಕೆ ಸ್ಥಾಪನೆಯಾಗಿವೆ. ಆದರೆ, ಕೌಶಲ ತರಬೇತಿ ಕೊರತೆಯಿಂದಾಗಿ ಸ್ಥಳೀಯರಿಗೆ ಕೆಲಸ ಸಿಕ್ಕಿಲ್ಲ ಎಂಬ ಆರೋಪವಿದೆ. ಮುಂದೆ ಈ ಕೊರತೆ ನೀಗಿಸಲು ಕೌಶಲ ತರಬೇತಿ ಕೇಂದ್ರ ಆರಂಭಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಮುಳಬಾಗಿಲು ತಾಲ್ಲೂಕಿನಲ್ಲಿ ಕೈಗಾರಿಕೆ ಪ್ರದೇಶ ಸ್ಥಾಪನೆಗೆ 1,650 ಎಕರೆ ಜಮೀನು ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಜಾಗ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು. ಸ್ಥಳೀಯವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು ನೀಡುತ್ತೇವೆ’ ಎಂದು ಹೇಳಿದರು.

ವಲಸೆ ಪರಿಸ್ಥಿತಿ: ‘ನೀರಿನ ಕೊರತೆಯಿಂದ ಈ ಭಾಗದ ರೈತರು, ಅವರ ಮಕ್ಕಳು ಕೆಲಸಕ್ಕಾಗಿ ಬೇರೆಡೆಗೆ  ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆತಂಕ ವ್ಯಕ್ತಪಡಿಸಿದರು.

‘ನಿರಂತರವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳ ಜತೆ ಚರ್ಚಿಸಿ ನರಸಾಪುರ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಲಾಯಿತು. ಈಗ ಸ್ವಲ್ಪ ಮಟ್ಟಿಗೆ ನಿರುದ್ಯೋಗ ಸಮಸ್ಯೆ ಬಗೆಹರಿದಿದೆ’ ಎಂದು ಎಂದು ಅಭಿಪ್ರಾಯಪಟ್ಟರು.

‘ಕೈಗಾರಿಕೆಗಳು ವಾರ್ಷಿಕವಾಗಿ ಗಳಿಸುತ್ತಿರುವ ಆದಾಯದಲ್ಲಿ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆಯಡಿ ಸ್ಥಳೀಯ ಅಭಿವೃದ್ಧಿಗೆ ಸಹಕಾರ ನೀಡುತ್ತಿವೆ. ಅದೇ ರೀತಿ ನಿರುದ್ಯೋಗಿ ಯುವಕ, ಯುವತಿಯರಿಗೆ ಕೆಲಸ ನೀಡಬೇಕು’ ಎಂದು ಮನವಿ ಮಾಡಿದರು.

ಉದ್ಯೋಗದಾತರಾಗಿ: ‘ಉದ್ಯೋಗ ಆಕಾಂಕ್ಷಿಗಳು ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರುವ ಬದಲು ಸ್ವಉದ್ಯೋಗ ಮಾಡುವ ಮೂಲಕ ಮತ್ತೊಬ್ಬರಿಗೆ ಕೆಲಸ ನೀಡುವ ಉದ್ಯೋಗದಾತರಾಗಬೇಕು’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಸಿ.ಆರ್.ಜನಾರ್ದನ್ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸದಸ್ಯ ನಂಜುಂಡಪ್ಪ, ಲಘು ಕೈಗಾರಿಕೆಗಳ ಸಂಘದ ಅಧ್ಯಕ್ಷ ಶ್ರೀಕಂಠದತ್ತ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮುರಳಿಕೃಷ್ಣ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಸಿಬಿಐಟಿ ಕಾಲೇಜು ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪೂಜಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು