ಮಂಗಳವಾರ, ಸೆಪ್ಟೆಂಬರ್ 17, 2019
27 °C

ಶಿಕ್ಷಣ ಅಂಕ ಗಳಿಕೆಗೆ ಸೀಮಿತವಲ್ಲ

Published:
Updated:
Prajavani

ಕೋಲಾರ: ‘ಶಿಕ್ಷಕ ವೃತ್ತಿಯಿಂದ ರಾಷ್ಟ್ರಪತಿ ಹುದ್ದೆವರೆಗೂ ಬೆಳೆದ ಸರ್ವಪಲ್ಲಿ ರಾಧಾಕೃಷ್ಣನ್ ಇಡೀ ಗುರು ಸಮುದಾಯಕ್ಕೆ ಆದರ್ಶಪ್ರಾಯರು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಬಣ್ಣಿಸಿದರು.

ಇಲ್ಲಿ ಗುರುವಾರ ವಿ.ವಿ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ‘ಶಿಕ್ಷಣವು ಕೇವಲ ಅಂಕ ಗಳಿಕೆಗೆ ಸೀಮಿತವಲ್ಲ. ಸಂಸ್ಕಾರ, ಬದುಕು ಕಲಿಸುವುದೇ ಶಿಕ್ಷಣ. ಗುರು ಮತ್ತು ಗುರಿಯಿಲ್ಲದ ಸಮಾಜ ಎಂದಿಗೂ ಉನ್ನತಿಗೇರಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳು ಎಂಜಿನಿಯರ್‌ ಅಥವಾ ವೈದ್ಯರಾಗಬೇಕೆಂದು ಬಯಸುವ ಪೋಷಕರು ಶಿಕ್ಷಕರ ವೃತ್ತಿಯನ್ನು ಕೀಳಾಗಿ ಕಾಣುತ್ತಾರೆ. ಆದರೆ, ಮಕ್ಕಳು ವಿದ್ಯಾವಂತರಾಗಲು ಉತ್ತಮ ಶಿಕ್ಷಕರು ಬೇಕೆಂದು ಹುಡುಕುತ್ತಾರೆ. ಗುರುವಿನ ಸ್ಥಾನ ಎತ್ತರದಲ್ಲಿದೆ. ಅದರ ಘನತೆಗೆ ಕುತ್ತು ಬಾರದಂತೆ ಶಿಕ್ಷಕರು ನಡೆದುಕೊಳ್ಳಬೇಕು. ಸಮಾಜಕ್ಕೆ ಅಗತ್ಯವಿರುವ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಕಿವಿಮಾತು ಹೇಳಿದರು.

‘ಯಾವುದೇ ಹುದ್ದೆಯಲ್ಲಿದ್ದರೂ ನಿವೃತ್ತಿ ನಂತರ ಯಾರೂ ಗುರುತಿಸುವುದಿಲ್ಲ. ಆದರೆ, ಶಿಕ್ಷಕರನ್ನು ಎಂದಿಗೂ ಮರೆಯುವುದಿಲ್ಲ. ವಿಶ್ವದ ಯಾವುದೇ ನಾಯಕ ಉನ್ನತ ಸ್ಥಾನಕ್ಕೆ ಏರಿರುವುದರ ಹಿಂದೆ ಶಿಕ್ಷಕರು ಇದ್ದೇ ಇರುತ್ತಾರೆ’ ಎಂದು ವಿ.ವಿ ಕುಲಸಚಿವ ಶ್ರೀನಿವಾಸ್ ತಿಳಿಸಿದರು.

‘ಶಿಕ್ಷಕ ವೃತ್ತಿಯು ಪವಿತ್ರವಾದದ್ದು. ಶಿಕ್ಷಕರ ಪರಿಶ್ರಮದಿಂದ ಭಾರತದ ಭವಿಷ್ಯ ನಿರ್ಮಾಣವಾಗುತ್ತದೆ. ಉತ್ತಮ ಸಮಾಜಕ್ಕೆ ಶಿಕ್ಷಕರೇ ರೂವಾರಿಗಳು’ ಎಂದು ವಿ.ವಿ ಕುಲಸಚಿವ (ಮೌಲ್ಯಮಾಪನ) ಪ್ರೊ.ಜನಾರ್ದನಂ ಹೇಳಿದರು.

Post Comments (+)