ಮಕ್ಕಳು ಆರೋಗ್ಯವಂತರಾಗಿದ್ದರೆ ಶೈಕ್ಷಣಿಕ ಪ್ರಗತಿ

7

ಮಕ್ಕಳು ಆರೋಗ್ಯವಂತರಾಗಿದ್ದರೆ ಶೈಕ್ಷಣಿಕ ಪ್ರಗತಿ

Published:
Updated:
Deccan Herald

ಕೋಲಾರ: ‘ಮಕ್ಕಳು ಆರೋಗ್ಯವಂತರಾಗಿದ್ದರೆ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆ ಸಂಬಂಧ ಇಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಮಕ್ಕಳಲ್ಲಿನ ರಕ್ತಹೀನತೆ ಸಮಸ್ಯೆ ನಿವಾರಣೆಗಾಗಿ ಸರ್ಕಾರವು 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೆ ಎರಡು ಬಾರಿ ಜಂತು ಹುಳು ನಿರ್ಮೂಲನಾ ಮಾತ್ರೆಯನ್ನು ಉಚಿತವಾಗಿ ನೀಡುತ್ತಿದೆ’ ಎಂದರು.

‘ಪೋಷಕರು ವದಂತಿಗೆ ಕಿವಿಗೂಟ್ಟು ಮಕ್ಕಳಿಗೆ ಮಾತ್ರೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಮಾತ್ರೆ ಸೇವನೆಯಿಂದ ಮಗುವಿನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂದು ಪೋಷಕರಿಗೆ ಅರಿವು ಮೂಡಿಸಬೇಕು. ಮಕ್ಕಳು ತಪ್ಪದೇ ಈ ಮಾತ್ರೆ ಸೇವಿಸಿದರೆ ಆರೋಗ್ಯವಂತರಾಗಿ ಬೆಳೆಯುತ್ತಾರೆ’ ಎಂದು ತಿಳಿಸಿದರು.

‘ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಅಂಗನವಾಡಿ ಕೇಂದ್ರಗಳು ಸೇರಿದಂತೆ 3,75,522 ಮಕ್ಕಳಿಗೆ ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದ ಮೂಲಕ ಮಾತ್ರೆ ನೀಡಬೇಕು. ಆ.10ರಂದು ಮಾತ್ರೆ ಪಡೆಯದ ಮಕ್ಕಳಿಗೆ ಆ.17ಕ್ಕೆ ನೀಡಬೇಕು’ ಎಂದು ಸೂಚಿಸಿದರು.

2015ರಲ್ಲಿ ಆರಂಭ: ‘ಕೇಂದ್ರ ಸರ್ಕಾರವು 2015ರ ಫೆಬ್ರುವರಿಯಲ್ಲಿ ದೇಶದ 11 ರಾಜ್ಯಗಳಲ್ಲಿ ರಾಷ್ಟೀಯ ಜಂತು ಹುಳು ನಿರ್ಮೂಲನಾ ದಿನಾಚರಣೆ ಆರಂಭಿಸಿತು. ಉಳಿದ ರಾಜ್ಯಗಳಲ್ಲಿ 2016ರ ಫೆಬ್ರುವರಿಯಲ್ಲಿ ಆರಂಭವಾಯಿತು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ವಿವರಿಸಿದರು.

‘ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ ಪ್ರಕಾರ ಭಾರತದಲ್ಲಿ 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳ ಪೈಕಿ ಶೇ 68ರಷ್ಟು ಮಂದಿ ಜಂತು ಹುಳು ಸೋಂಕಿನಿಂದ ನರಳುತ್ತಿದ್ದಾರೆ. ಬಯಲು ಬಹಿರ್ದೆಸೆಯಿಂದ ಜಂತು ಹುಳುಗಳು ದೇಹ ಸೇರುತ್ತವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ರಕ್ತಹೀನತೆ ಸಮಸ್ಯೆ ಎದುರಾಗುತ್ತದೆ. ವಿವಿಧ ಕಾಯಿಲೆಗಳಿಂದ ಕಲಿಕೆಗೂ ಅಡ್ಡಿಯಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಗೆ ಒತ್ತು ಕೊಡಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾತ್ರೆ ಕೊರತೆ ಎದುರಾಗದಂತೆ ತಾಲ್ಲೂಕು ಆಸ್ಪತ್ರೆಗಳಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಜತೆಗೆ ಪ್ರತಿ ಆರು ತಿಂಗಳಿಗೊಮ್ಮೆ ಮಾತ್ರೆ ವಿತರಿಸುವ ಮೂಲಕ ಸೋಂಕು ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !