ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಆರೋಗ್ಯವಾಗಿದ್ದರೆ ಶೈಕ್ಷಣಿಕ ಪ್ರಗತಿ

ಜಂತು ಹುಳು ನಿವಾರಣಾ ದಿನಾಚರಣೆಯಲ್ಲಿ ಜಿ.ಪಂ ಸಿಇಒ ದರ್ಶನ್‌ ಹೇಳಿಕೆ
Last Updated 25 ಸೆಪ್ಟೆಂಬರ್ 2019, 15:02 IST
ಅಕ್ಷರ ಗಾತ್ರ

ಕೋಲಾರ: ‘ಜಂತು ಹುಳು ಕಾಯಿಲೆ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಸಲಹೆ ನೀಡಿದರು.

ಜಿಲ್ಲಾಡಳಿತವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಮಕ್ಕಳಿಗೆ ಇಂದಿಗೂ ಜಂತು ಹುಳು ಸಮಸ್ಯೆ ಕಾಡುತ್ತಿರುವುದು ವಿಷಾದಕರ. ಸಾರ್ವಜನಿಕರು ಇದಕ್ಕೆ ಕಾರಣ ತಿಳಿದು ಸಮಸ್ಯೆ ನಿವಾರಣೆಗೆ ಮುಂದಾಗಬೇಕು’ ಎಂದು ಹೇಳಿದರು.

‘ಸಾಮಾನ್ಯವಾಗಿ ಗರ್ಭಿಣಿಯರಿಗೆ ಜಂತು ಹುಳು ಸಮಸ್ಯೆ ಕಾಡುತ್ತದೆ. ಇದರಿಂದ ಅಪೌಷ್ಟಿಕತೆ ಹೆಚ್ಚುತ್ತದೆ. ಜಂತು ಹುಳು ಸಮಸ್ಯೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

‘ಶಾಲಾ ಕಾಲೇಜು ಮಕ್ಕಳಲ್ಲಿ ಕಾಯಿಲೆ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳು ಆರೋಗ್ಯವಂತರಾಗಿದ್ದರೆ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ. ಮಕ್ಕಳಲ್ಲಿನ ರಕ್ತಹೀನತೆ ಸಮಸ್ಯೆ ನಿವಾರಣೆಗಾಗಿ ಸರ್ಕಾರ 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೆ ಎರಡು ಬಾರಿ ಜಂತು ಹುಳು ನಿರ್ಮೂಲನಾ ಮಾತ್ರೆಯನ್ನು ಉಚಿತವಾಗಿ ನೀಡುತ್ತಿದೆ’ ಎಂದು ವಿವರಿಸಿದರು.

‘ಪೋಷಕರು ವದಂತಿಗೆ ಕಿವಿಗೂಟ್ಟು ಮಕ್ಕಳಿಗೆ ಮಾತ್ರೆ ಕೊಡಲು ಹಿಂದೇಟು ಹಾಕುತ್ತಾರೆ. ಆದರೆ, ಮಾತ್ರೆ ಸೇವನೆಯಿಂದ ಮಗುವಿನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂದು ಪೋಷಕರಿಗೆ ಅರಿವು ಮೂಡಿಸಬೇಕು. ಮಕ್ಕಳು ತಪ್ಪದೇ ಈ ಮಾತ್ರೆ ಸೇವಿಸಿದರೆ ಆರೋಗ್ಯವಂತರಾಗಿ ಬೆಳೆಯುತ್ತಾರೆ’ ಎಂದು ತಿಳಿಸಿದರು.

ಬೆಳವಣಿಗೆಗೆ ಮಾರಕ: ‘ರಕ್ತಹೀನತೆ ಸಮಸ್ಯೆಯು ಮಕ್ಕಳ ದೈಹಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ. ರಕ್ತಹೀನತೆ ನಿವಾರಣೆಗಾಗಿ 6 ತಿಂಗಳಿಗೊಮ್ಮೆ ದಿನಾಚರಣೆ ನಡೆಸಲಾಗುತ್ತಿದೆ. ಮಕ್ಕಳಿಗೆ ಉಚಿತವಾಗಿ ಆಸ್ಪತ್ರೆಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಮಾತ್ರೆ ವಿತರಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್ ಮಾಹಿತಿ ನೀಡಿದರು.

‘ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ ಪ್ರಕಾರ ಭಾರತದಲ್ಲಿ 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳ ಪೈಕಿ ಶೇ 40ರಷ್ಟು ಮಂದಿ ಜಂತು ಹುಳು ಸೋಂಕಿನಿಂದ ನರಳುತ್ತಿದ್ದಾರೆ. ಬಯಲು ಬಹಿರ್ದೆಸೆಯಿಂದ ಜಂತು ಹುಳುಗಳು ದೇಹ ಸೇರುತ್ತವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ರಕ್ತಹೀನತೆ ಸಮಸ್ಯೆ ಎದುರಾಗುತ್ತದೆ. ವಿವಿಧ ಕಾಯಿಲೆಗಳಿಂದ ಕಲಿಕೆಗೂ ಅಡ್ಡಿಯಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಗೆ ಒತ್ತು ಕೊಡಬೇಕು’ ಎಂದು ಮನವಿ ಮಾಡಿದರು.

ನಿತ್ರಾಣ ಸಾಧ್ಯತೆ: ‘ಜಂತು ಹುಳು ಸೋಂಕಿನಿಂದ ರಕ್ತಹೀನತೆ, ಅಪೌಷ್ಟಿಕತೆ, ನಿಶಕ್ತಿ, ವಾಂತಿ, ಭೇದಿ ಮೂಲಕ ದೇಹ ನಿತ್ರಾಣಗೊಳ್ಳುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಫೆಬ್ರುವರಿಯಲ್ಲಿ 4,62,342 ಮಕ್ಕಳಿಗೆ, ಸೆಪ್ಟಂಬರ್ ತಿಂಗಳಲ್ಲಿ 4,88,979 ಮಕ್ಕಳಿಗೆ ಜಂತು ಹುಳು ಮಾತ್ರೆ ನೀಡಲಾಗಿದೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರತ್ನಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಶೈಲಜಾ, ಸರ್ಕಾರಿ ಜೂನಿಯರ್ ಕಾಲೇಜು ಉಪ ಪ್ರಾಂಶುಪಾಲ ಶ್ರೀರಾಮರೆಡ್ಡಿ, ವೈದ್ಯರಾದ ಡಾ.ಜಗದೀಶ್‌, ಡಾ.ವಸಂತಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT