ಬುಧವಾರ, ನವೆಂಬರ್ 20, 2019
27 °C

ಚುನಾವಣೆ: ಶಸ್ತ್ರಾಸ್ತ್ರ ಠೇವಣಿಗೆ ಸೂಚನೆ

Published:
Updated:

ಕೋಲಾರ: ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್‌ನಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದು, ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್‌ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಆದೇಶಿಸಿದ್ದಾರೆ.

ನಗರ ಪ್ರದೇಶದಲ್ಲಿ ಕಾನೂನು, ಭದ್ರತೆ ಕಾಪಾಡುವ ಉದ್ದೇಶಕ್ಕೆ ಹಾಗೂ ಮೂರು ನಗರಸಭೆಗಳ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಈ ಆದೇಶ ಹೊರಡಿಸಲಾಗಿದೆ. ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರು ಚುನಾವಣಾ ನೀತಿಸಂಹಿತೆ ಅಂತ್ಯಗೊಳ್ಳುವವರೆಗೂ ಶಸ್ತ್ರಾಸ್ತ್ರ ಕೊಂಡೊಯ್ಯುವುದು ಮತ್ತು ಅವುಗಳ ಬಳಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪರವಾನಗಿದಾರರು ಸಮೀಪದ ಪೊಲೀಸ್ ಠಾಣೆ ಅಥವಾ ಪರವಾನಗಿ ಹೊಂದಿದ ಆರ್ಮರಿಗಳಲ್ಲಿ ಶೀಘ್ರವೇ ಶಸ್ತ್ರಾಸ್ತ್ರ ಠೇವಣಿ ಇಡಬೇಕು. ಈ ಆದೇಶ ನ.14ರವರೆಗೆ ಜಾರಿಯಲ್ಲಿರುತ್ತದೆ.

ಸರ್ಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಅಧಿಕಾರಿಗಳು ಕರ್ತವ್ಯ ನಿರ್ವಹಣೆಗೆ, ಸಾರ್ವಜನಿಕರು ಆತ್ಮರಕ್ಷಣೆಗೆ ಅಗತ್ಯವಿದ್ದಲ್ಲಿ, ಬ್ಯಾಂಕ್ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಆಯುಧ ಪರವಾನಗಿ ಹೊಂದಿರುವ ಸಂಸ್ಥೆ ಅಥವಾ ಅಂಗೀಕೃತ ಭದ್ರತಾ ಸಿಬ್ಬಂದಿಯು ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಶಸ್ತ್ರಾಸ್ತ್ರ ಬಳಕೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ.

ಸಂತೆ ನಿಷೇಧ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾರಣಕ್ಕೆ ಸಂತೆ ಮತ್ತು ಜಾತ್ರೆ ನಿಷೇಧಿಸಲಾಗಿದೆ. ನ.12ರಂದು ಮತದಾನ ಹಾಗೂ ನ.14ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಈ ಎರಡೂ ದಿನ ಕೋಲಾರ, ಮುಳಬಾಗಿಲು ಮತ್ತು ಕೆಜಿಎಫ್ ಪಟ್ಟಣ ಪ್ರದೇಶದಲ್ಲಿ ಸಂತೆ, ಜಾತ್ರೆ ನಡೆಸಬಾರದು ಎಂದು ಸೂಚಿಸಿದ್ದಾರೆ.

ಮದ್ಯ ನಿಷೇಧ: ಮತದಾನದ ದಿನದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ನ.11ರ ಬೆಳಿಗ್ಗೆ 7 ಗಂಟೆಯಿಂದ ನ.12ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮುಳಬಾಗಿಲು, ಕೋಲಾರ ಮತ್ತು ಕೆಜಿಎಫ್ (ರಾಬರ್ಟ್‌ಸನ್‌ಪೇಟೆ) ನಗರಸಭೆ ಗಡಿಯಿಂದ 3 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಬಂದ್‌ ಮಾಡಬೇಕು ಎಂದು ಆದೇಶಿಸಿದ್ದಾರೆ.

ಪ್ರತಿಕ್ರಿಯಿಸಿ (+)