ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಸಿ

ಶುಕ್ರವಾರ, ಏಪ್ರಿಲ್ 19, 2019
31 °C
ಮತಗಟ್ಟೆ ಸಿಬ್ಬಂದಿಗೆ ಸಹಾಯಕ ಚುನಾವಣಾಧಿಕಾರಿ ವಿಠಲ್ ಸೂಚನೆ

ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಸಿ

Published:
Updated:
Prajavani

ಕೋಲಾರ: ‘ಮತಗಟ್ಟೆ ಸಿಬ್ಬಂದಿಯು ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ಚುನಾವಣಾ ಪ್ರಕ್ರಿಯೆ ನಡೆಸಬೇಕು’ ಎಂದು ಸಹಾಯಕ ಚುನಾವಣಾಧಿಕಾರಿ ವಿಠಲ್ ಸೂಚಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಗುರುವಾರ ಮತಗಟ್ಟೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಏ.18ರಂದು ಮತದಾನ ನಡೆಯುತ್ತದೆ. ಮತದಾನ ಯಾವುದೇ ಗೊಂದಲವಿಲ್ಲದೆ ಶಾಂತಿಯುತವಾಗಿ ನಡೆಯುವಲ್ಲಿ ಮತಗಟ್ಟೆ ಸಿಬ್ಬಂದಿ ಪಾತ್ರ ನಿರ್ಣಾಯಕ’ ಎಂದರು.

‘ಸಿಬ್ಬಂದಿಯು ತರಬೇತಿಯ ಪ್ರಯೋಜನ ಪಡೆದುಕೊಳ್ಳಿ. ಮತಗಟ್ಟೆಯಲ್ಲಿ ಸಮಸ್ಯೆ ಎದುರಾಗದಂತೆ ಕಾರ್ಯ ನಿರ್ವಹಿಸಬೇಕು. ಸಿಬ್ಬಂದಿ ಈ ಹಿಂದೆ ಹಲವು ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವುದರಿಂದ ಎಲ್ಲಾ ವಿಚಾರ ತಿಳಿದಿರುತ್ತದೆ. ಆದರೆ, ಚುನಾವಣೆ ಹೊಸದು ಎಂಬುದನ್ನು ಮರೆಯುವಂತಿಲ್ಲ. ತರಬೇತುದಾರರಿಂದ ಮಾಹಿತಿ ಪಡೆದು ಸಮಸ್ಯೆ, ಗೊಂದಲ ಬಗೆಹರಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

‘ಈಗಾಗಲೇ ರೂಪಿಸಲಾಗಿರುವ ಯೋಜನೆಯಂತೆ ಪ್ರತಿ ಕೆಲಸವನ್ನು ಸಮರ್ಪಕವಾಗಿ ಮಾಡಬೇಕು. ಮತದಾನಕ್ಕೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾಲಾವಕಾಶ ನೀಡಲಾಗಿದ್ದು, ಸಿಬ್ಬಂದಿಯು ಮತದಾನ ಆರಂಭಕ್ಕೂ ಮುನ್ನ ಅಭ್ಯರ್ಥಿಗಳ ಪರ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ಕಡ್ಡಾಯವಾಗಿ ನಡೆಸಬೇಕು’ ಎಂದು ಸಲಹೆ ನೀಡಿದರು.

ಏಜೆಂಟರಿಗೆ ತೋರಿಸಿ: ‘ಪ್ರತಿ ಅಭ್ಯರ್ಥಿಗೂ ಮತ ಹಾಕಿ, ಖಾತ್ರಿ ಚೀಟಿ ಏಜೆಂಟರಿಗೆ ತೋರಿಸಿ. ಎಲ್ಲಾ ಪ್ರಕ್ರಿಯೆ ಮುಗಿಸಿ ಅದನ್ನು ಅಳಿಸಿದ ಬಳಿಕ ನೈಜ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಚುನಾವಣಾ ಸಿಬ್ಬಂದಿಗೆ ಈ ಬಾರಿ ಪೋಸ್ಟಲ್ ಬ್ಯಾಲೆಟ್ ಬದಲು ಕಾರ್ಯ ನಿರ್ವಹಿಸುವ ಸ್ಥಳದಲ್ಲೇ ಮತದಾನಕ್ಕೆ ಅವಕಾಶ ನೀಡಲಾಗುವುದು. ಅದಕ್ಕಾಗಿ ಎಪಿಕ್ ಕಾರ್ಡ್‌ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ನೀಡಬೇಕು’ ಎಂದು ವಿವರಿಸಿದರು.

‘ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಚುನಾವಣಾಧಿಕಾರಿ (ಪಿಆರ್‌ಒ), ಸಹಾಯಕ ಚುನಾವಣಾಧಿಕಾರಿ (ಎಪಿಆರ್‌ಒ) ಹಾಗೂ ಇಬ್ಬರು ಪೋಲಿಂಗ್ ಅಧಿಕಾರಿಗಳನ್ನು ನಿಯೋಜಿಸಿ ಆದೇಶಪತ್ರ ನೀಡಲಾಗಿದೆ. ಕೋಲಾರ ತಾಲ್ಲೂಕಿನಲ್ಲಿ 583 ಪಿಆರ್‍ಒ ಮತ್ತು 780 ಮಂದಿ ಎಪಿಆರ್‌ಒಗಳಿದ್ದು, ಅವರಿಗೆ ಈಗಾಗಲೇ ಒಂದು ಸುತ್ತಿನ ತರಬೇತಿ ಮುಗಿದಿದೆ. ಇದು 2ನೇ ಸುತ್ತಿನ ತರಬೇತಿಯಾಗಿದ್ದು, ಇಲ್ಲಿ ಪೋಲಿಂಗ್ ಅಧಿಕಾರಿಗಳು ಅರಿವು ಪಡೆದುಕೊಳ್ಳಿ’ ಎಂದರು.

‘ಮಾಲೂರು, ಬಂಗಾರಪೇಟೆ, ಮುಳಬಾಗಿಲು, ಕೆಜಿಎಫ್, ಶ್ರೀನಿವಾಸಪುರದಲ್ಲೂ ಇದೇ ರೀತಿ ತರಬೇತಿ ನೀಡಲಾಗುತ್ತಿದೆ. ಮೊದಲನೇ ಹಂತದಲ್ಲಿ ಮಾಹಿತಿ ನೀಡಲಾಗುವುದು. 2ನೇ ಹಂತದಲ್ಲಿ ವಿದ್ಯುನ್ಮಾನ ಮತಯಂತ್ರ ಜೋಡಣೆ ಮತ್ತು ಬಳಕೆ ಬಗ್ಗೆ ತಿಳಿಸಿಕೊಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಎಚ್ಚರ ವಹಿಸಿ: ‘ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪುರುಷ ಸಿಬ್ಬಂದಿಯನ್ನು ಅವರು ಕಾರ್ಯ ನಿರ್ವಹಿಸುವ ತಾಲ್ಲೂಕು ಹೊರತುಪಡಿಸಿ ಬೇರೆ ಕಡೆಗೆ ನಿಯೋಜಿಸಲಾಗುತ್ತದೆ. ಮಹಿಳಾ ಸಿಬ್ಬಂದಿಯನ್ನು ಆಯಾ ತಾಲ್ಲೂಕಿನಲ್ಲೇ ನಿಯೋಜಿಸಲಾಗಿದ್ದು, ಚುನಾವಣಾ ಕರ್ತವ್ಯದಲ್ಲಿ ಲೋಪವಾಗದಂತೆ ಎಚ್ಚರ ವಹಿಸಿ’ ಎಂದು ಸೂಚಿಸಿದರು.

ತಹಶೀಲ್ದಾರ್ ಶ್ರೀನಿವಾಸ್‌ಪ್ರಸಾದ್, ಸಂಪನ್ಮೂಲ ವ್ಯಕ್ತಿಗಳಾದ ಸಿ.ಎನ್.ಪ್ರದೀಪ್‌ಕುಮಾರ್, ರುದ್ರಪ್ಪ, ಸುರೇಶ್, ರಾಮಚಂದ್ರಪ್ಪ, ಸೀನಪ್ಪ, ನಾಗರಾಜ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !