ವಿದ್ಯುನ್ಮಾನ ಮಾಧ್ಯಮ ದಾರಿ ತಪ್ಪಿಸುತ್ತಿದೆ

7
ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಲೋಕೇಶ್ ಕಳವಳ

ವಿದ್ಯುನ್ಮಾನ ಮಾಧ್ಯಮ ದಾರಿ ತಪ್ಪಿಸುತ್ತಿದೆ

Published:
Updated:
Deccan Herald

ಕೋಲಾರ: ‘ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹೊತ್ತಿರುವ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರವು ಯುವಕ ಯುವತಿಯರನ್ನು ದಾರಿ ತಪ್ಪಿಸುತ್ತಿದೆ’ ಎಂದು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಬುಧವಾರ ಜಿಲ್ಲಾ ನಾಟಕಾರರ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ವಿದ್ಯುನ್ಮಾನ ಮಾಧ್ಯಮಗಳು ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ವಾಹಿನಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದರೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ವಿಷಾದಿಸಿದರು.

‘ಜೀವನಕ್ಕೆ ಅಗತ್ಯವಲ್ಲದ ವಿಚಾರಗಳನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ಹೆಚ್ಚಾಗಿ ಬಿತ್ತರಿಸಲಾಗುತ್ತಿದೆ. ಅಂತಹ ಅನಗತ್ಯ ಸರಕನ್ನೇ ಪೋಷಕರು ತಮ್ಮ ಮಕ್ಕಳಿಗೂ ತೋರಿಸುತ್ತಿದ್ದಾರೆ. ವಾಹಿನಿಗಳ ಹೊಣೆಗೇಡಿತನದಿಂದ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಮತ್ತೊಂದೆಡೆ ನೈತಿಕ ಮೌಲ್ಯಗಳು ಕುಸಿಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದ ಕನ್ನಡಿ: ‘ರಂಗಭೂಮಿಯು ಸಮಾಜದ ಕನ್ನಡಿ ಇದ್ದಂತೆ. ಯುವಕ ಯುವತಿಯರನ್ನು ಸಂಪ್ರದಾಯ, ಕಟ್ಟುಪಾಡುಗಳ ಪರಿಧಿಯಿಂದ ಹೊರ ತರುವುದು ಸಮೂಹ ಮಾಧ್ಯಮದ ಜವಾಬ್ದಾರಿ. ಸ್ಥಳೀಯ ರಂಗ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶಕ್ಕಾಗಿ ಅಕಾಡೆಮಿ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ನಾಟಕೋತ್ಸವ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ನಗರದಲ್ಲಿ ನಡೆಯುತ್ತಿರುವ ನಾಟಕೋತ್ಸವಕ್ಕೆ ಉಚಿತ ಪ್ರವೇಶವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಜನ ಸೇರಿಲ್ಲ. ಜನರ ಮನಸ್ಥಿತಿಯೇ ಅರ್ಥವಾಗುವುದಿಲ್ಲ. ಹಣ ಕೊಟ್ಟು ಸಿನಿಮಾ ನೋಡಿದರೆ ಮಾತ್ರ ತೃಪ್ತಿ ಸಿಗೋದಾ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಗರದ ರಂಗಮಂದಿರದಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಸರಿಯಿಲ್ಲದ ಕಾರಣ ಬೆಂಗಳೂರಿನಿಂದ ತಂದು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲದಕ್ಕೂ ಬೆಂಗಳೂರಿಗೆ ಬರುವ ಅವಶ್ಯಕತೆ ಇಲ್ಲ. ಸ್ಥಳೀಯ ಶಾಸಕರ, ಸಂಸದರ ಸಹಕಾರ ಪಡೆದು ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವನ್ನು ಸತತ ಹೋರಾಟದ ಮೂಲಕವೇ ಉಳಿಸಿಕೊಳ್ಳಬೇಕಾಯಿತು. ಆ ಪರಿಸ್ಥಿತಿ ಇಲ್ಲಿ ಎದುರಾಗುವ ಮೊದಲು ಕಲಾವಿದರು ಎಚ್ಚೆತ್ತುಕೊಳ್ಳಬೇಕು’ ಎಂದರು.

ಅನ್ವೇಷಣೆ ಇದೆ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯರ ನಾಟಕಗಳ ಕುರಿತು ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಿ.ಡೋಮಿನಿಕ್, ‘ರಾಮಯ್ಯರ 33 ನಾಟಕಗಳಲ್ಲಿ ಅನ್ವೇಷಣೆ ಇದೆ. ಈ ನಾಟಕಗಳು ಕೋಲಾರ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ಜಗತ್ತಿನ ಎಲ್ಲ ನೆಲಕ್ಕೂ ಅನ್ವಯಿಸುವಂತಿವೆ. ನಾಟಕಕಾರ, ಸಾಹಿತಿ ಒಂದಾದರೆ ಹೊಸ ಜಗತ್ತು ಸೃಷ್ಟಿಯಾಗುತ್ತದೆ. ಮಕ್ಕಳಿಗೆ ರಂಗಸಜ್ಜಿಕೆ ಭವಿಷ್ಯ ರೂಪಿಸಿ ಕೊಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕೊಚ್ಚಿ ಹೋಗಿವೆ: ‘ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ನಾಟಕಗಳು ಪತ್ತೆ ಇಲ್ಲದಂತೆ ಕೊಚ್ಚಿ ಹೋಗಿವೆ. ಪ್ರೇಕ್ಷಕರಿಲ್ಲದೆ ನಾಟಕಗಳಿಲ್ಲ. ತಿಂಗಳಿಗೊಂದು ನಾಟಕೋತ್ಸವ ನಡೆಸಿದರೆ ನಾಟಕ ಪರಂಪರೆ ಉಳಿಸಿ ಬೆಳೆಸಲು ಸಾಧ್ಯ’ ಎಂದು ಶಿಕ್ಷಣ ತಜ್ಞ ಎಂ.ಶ್ರೀರಾಮರೆಡ್ಡಿ ಕಿವಿಮಾತು ಹೇಳಿದರು.

ಕಾಪಾಲಿಕಾ ಹಾಗೂ ಇಂಚರ ತಂಡದ ಕಲಾವಿದರು ಕೋಟಿಗಾನಹಳ್ಳಿ ರಾಮಯ್ಯ ರಚನೆಯ ‘ಮರ್ಜೀನಾ ಮತ್ತು 40 ಜನ ಕಳ್ಳರು’ ನಾಟಕ ಪ್ರದರ್ಶಿಸಿದರು. ಜಿಲ್ಲೆಯ ಮಾಲೂರು ತಾಲ್ಲೂಕಿನ ರಂಗ ಕಲಾವಿದ ಕೋದಂಡಪ್ಪ ಅವರನ್ನು ಸನ್ಮಾನಿಸಲಾಯಿತು. ಕೋಟಿಗಾನಹಳ್ಳಿ ರಾಮಯ್ಯ, ಸಮುದಾಯ ಸಂಘಟನೆ ಅಧ್ಯಕ್ಷ ಅಚ್ಯುತ, ಜನಪದ ರಂಗ ತಂಡದ ಅಧ್ಯಕ್ಷೆ ಮಮತಾರೆಡ್ಡಿ, ಅಕಾಡೆಮಿ ಸದಸ್ಯ ರಾಮಕೃಷ್ಣ ಬೆಳ್ತೂರು ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !