ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆ ಮಾಡಿ

ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ನಾಗರಾಜ್ ಸಲಹೆ
Last Updated 28 ಜೂನ್ 2020, 13:52 IST
ಅಕ್ಷರ ಗಾತ್ರ

ಕೋಲಾರ: ‘ಭಾರತ ದೇಶದ 135 ಕೋಟಿ ಜನಸಂಖ್ಯೆಯಲ್ಲಿ 50 ಕೋಟಿ ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರ ಸಮಸ್ಯೆಗೆ ಸ್ಪಂದಿಸುವುದು ಪ್ರತಿ ನಾಗರಿಕನ ಕರ್ತವ್ಯ’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.

ವಿಶ್ವಮಾನವ ಕುವೆಂಪು ಪ್ರತಿಷ್ಠಾನವು ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ‘ಮಾನಸಿಕವಾಗಿ ಭಯದ ವಾತಾವರಣದಲ್ಲಿ ಇದ್ದವರಿಗೆ ಧೈರ್ಯ ತುಂಬಬೇಕು. ಮಕ್ಕಳಲ್ಲಿನ ಅಪೌಷ್ಟಿಕತೆ ನಿರ್ಮೂಲನೆ ಮಾಡಬೇಕು’ ಎಂದು ತಿಳಿಸಿದರು.

‘ಕೊರೊನಾ ಸೋಂಕಿನ ಭೀತಿಯಿಂದಾಗಿ ಎಲ್ಲೆಡೆ ರಕ್ತ ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಕ್ತ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ರಕ್ತವು ಜೀವ ಉಳಿಸಲು ನೀಡುವ ಉಡುಗೊರೆ. ರಕ್ತದ ಕೊರತೆಯಿಂದಾಗಿ ಗರ್ಭಿಣಿಯರು, ಅಪಘಾತದ ಗಾಯಾಳುಗಳ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ. ರಕ್ತದ ಕೊರತೆಯಿಂದ ಆಪತ್ತಿನಲ್ಲಿರುವ ಜೀವಕ್ಕೆ ಮತ್ತೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಲ್ಲ’ ಎಂದರು.

‘ಮನುಷ್ಯ ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆ ಬಿಡಬೇಕು. ಯುವಕ ಯುವತಿಯರು ರಕ್ತದಾನದ ಮಹತ್ವ ಅರಿಯಬೇಕು. ವರ್ಷಕ್ಕೆ 2 ಬಾರಿ ರಕ್ತದಾನ ಮಾಡಿ ಆರೋಗ್ಯವಂತರಾಗಿರಬೇಕು. ರಕ್ತದಾನದ ಸಂಬಂಧ ಜಾಗೃತಿ ಮೂಡಿಸಬೇಕು. ಎಲ್ಲರೂ ರಕ್ತದಾನ ಮಾಡಲು ಪಣ ತೊಡಬೇಕು’ ಎಂದು ಕಿವಿಮಾತು ಹೇಳಿದರು.

‘ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗುವುದಿಲ್ಲ. ರಕ್ತದಾನಿಗಳು ಜೀವ ರಕ್ಷಕರು. ನೇತ್ರದಾನಕ್ಕಿಂತ ರಕ್ತದಾನ ಮುಖ್ಯ. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತ ಸಂಗ್ರಹಣೆ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

ಹೃದಯಾಘಾತ ಕಡಿಮೆ: ‘ರಕ್ತಕ್ಕೆ ಪರ್ಯಾಯ ವಸ್ತು ಮತ್ತೊಂದಿಲ್ಲ. ಅನುಕಂಪದ ದೃಷ್ಟಿಯಲ್ಲಿ ರಕ್ತದಾನ ಮಾಡಬೇಕು. ನಾವು ಬದುಕುವ ಜತೆಗೆ ಇತರರನ್ನು ಬದುಕಿಸಬೇಕು. ಯುವಕ ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು’ ಎಂದು ಜಿಲ್ಲಾ ಗೃಹ ರಕ್ಷಕ ದಳದ ಮಾಜಿ ಕಮಾಂಡೆಂಡ್ ಬಿ.ಮರಿಸ್ವಾಮಿ ಮನವಿ ಮಾಡಿದರು.

‘ಸ್ವಯಂ ಪ್ರೇರಿತ ರಕ್ತದಾನ ದೇಶದಲ್ಲಿ 1975ರಿಂದ ಆರಂಭವಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 1ರಷ್ಟು ಮಂದಿಗೆ ರಕ್ತದ ಅವಶ್ಯಕತೆಯಿದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ 4 ಜನರ ಪ್ರಾಣ ಉಳಿಸಬಹುದು. ರಕ್ತದಾನದಿಂದ ವ್ಯಕ್ತಿ ಚುರುಕುಗೊಳ್ಳುವುದರ ಜತೆಗೆ ಹೃದಯಾಘಾತ ಕಡಿಮೆಯಾಗುತ್ತವೆ’ ಎಂದು ವಿವರಿಸಿದರು.

ರಕ್ತದ ಕೊರತೆ: ‘ಕೋವಿಡ್‌–19ರ ಸಂಕಷ್ಟದ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಸಾಕಷ್ಟು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮುಂದೂಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ತದ ಕೊರತೆ ನೀಗಿಸಲು ಪ್ರತಿಷ್ಠಾನವು ರಕ್ತದಾನ ಶಿಬಿರ ನಡೆಸುತ್ತಿದೆ. ನೇತ್ರದಾನ ಮತ್ತು ರಕ್ತದಾನವು ಸಮಾಜ ಸೇವೆ’ ಎಂದು ವಿಶ್ವಮಾನವ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಎಲ್‌.ನಾಗರಾಜ್ ಹೇಳಿದರು.

ಪ್ರತಿಷ್ಠಾನದ ಜಿಲ್ಲಾ ಘಟಕದ ಅಧ್ಯಕ್ಷ ವೇಣು, ತಾಲ್ಲೂಕು ಘಟಕದ ಅಧ್ಯಕ್ಷ ಸೋಮು, ಸದಸ್ಯರಾದ ಹರೀಶ್, ರಾಮು, ಸುಧಾಕರ್, ರಂಗನಾಥ್‌, ಪುಟ್ಟರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT