ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುವೆಂಪು ಸಾಹಿತ್ಯ ಬದುಕಿನ ಹಾದಿಗೆ ದೀವಿಗೆ‘

Last Updated 29 ಡಿಸೆಂಬರ್ 2020, 16:36 IST
ಅಕ್ಷರ ಗಾತ್ರ

ಕೋಲಾರ: ‘ಕುವೆಂಪುರ ವಿಶ್ವಮಾನವ ಸಂದೇಶ ಸಾಕಾರಗೊಳಿಸುವ ಮೂಲಕ ಸೌಹಾರ್ದತೆಯ ಸಮ ಸಮಾಜ ನಿರ್ಮಾಣದ ಗುರಿ ಸಾಧಿಸಬಹುದು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಂಗಸಂದ್ರದಲ್ಲಿರುವ ಬೆಂಗಳೂರು ಉತ್ತರ ವಿ.ವಿ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ನಡೆದ ಕುವೆಂಪು ಜಯಂತಿಯಲ್ಲಿ ಮಾತನಾಡಿ, ‘ಕುವೆಂಪು ಅವರ ಸಾಹಿತ್ಯ ಬದುಕಿನ ಹಾದಿಗೆ ದೀವಿಗೆಯಾಗಿದೆ’ ಎಂದು ಹೇಳಿದರು.

‘ಕುವೆಂಪು ಕನ್ನಡ ಸಾಹಿತ್ಯ ಕ್ಷೇತ್ರದ ಆಧಾರ ಸ್ತಂಭವಾಗಿ ನಿಂತವರು. ಕನ್ನಡ ನಾಡು ನುಡಿಗೆ ಅವರ ಕೊಡುಗೆ ಅಪಾರ. ಅವರ ಪ್ರತಿ ಕೃತಿಯಲ್ಲೂ ಸಮಾಜದ ಅಭಿವೃದ್ಧಿಗೆ ಪೂರಕವಾದ ವಿಚಾರ ಮತ್ತು ಸಂದೇಶವಿದೆ. ಕುವೆಂಪು ತತ್ವಾದರ್ಶ ಎಲ್ಲಾ ಕಾಲಕ್ಕೂ ಪ್ರಸ್ತುತ. ಅವರ ವಿಶ್ವಮಾನವ ಸಂದೇಶವು ಜಗತ್ತಿನ ಮನುಕುಲದ ಅಭಿವೃದ್ಧಿಗೆ ಪೂರಕ’ ಎಂದು ತಿಳಿಸಿದರು.

‘ಕುವೆಂಪು ಜಾತಿ, ಮತ, ಧರ್ಮದ ಎಲ್ಲೆ ಮೀರಿ ವಿಶ್ವವೇ ತನ್ನ ಮನೆ ಎಂದು ತಿಳಿದಿದ್ದರು. ಅದರಂತೆಯೇ ಜೀವಿಸಿದರು. ವಿಶ್ವ ಮಾನವ ದಿನಾಚರಣೆಯ ಅರ್ಥ ಬಹಳ ವಿಶಾಲವಾಗಿದೆ. ನಾವು ವಿಶ್ವ ಮಾನವರಾಗುವ ಸಂಕಲ್ಪ ಮಾಡೋಣ. ಜಾತಿ, ಧರ್ಮದ ಎಲ್ಲೆ ಕಿತ್ತೆಸೆದು ನಾವೆಲ್ಲಾ ಒಂದೇ ಎಂಬ ಸಂದೇಶ ಸಾರೋಣ’ ಎಂದು ಸಲಹೆ ನೀಡಿದರು.

ಸಮಾನತೆಯ ಸಾಕಾರ: ‘ಕುವೆಂಪು ಸಾಹಿತ್ಯದಲ್ಲಿ ಸಮಾನತೆಯ ಸಾಕಾರವಿದೆ. ಅವರು ಸಾಹಿತ್ಯದ ಮೂಲಕ ಕನ್ನಡದ ಕಿಚ್ಚು ಹೆಚ್ಚಿಸಿದರು. ಜಾತ್ಯಾತೀತತೆ ಪ್ರತಿಪಾದಿಸಿದ ರಸಋಷಿ ಕುವೆಂಪು ಸೃಜನಶೀಲ ಸಾಹಿತಿ’ ಎಂದು ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಕುಮುದಾ ಬಣ್ಣಿಸಿದರು.

ವಿ.ವಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಉಪನ್ಯಾಸಕಿ ಗಾಯತ್ರಿದೇವಿ, ಸಂಯೋಜಕಿ ನಾಗಮಣಿ, ಉಪನ್ಯಾಸಕರಾದ ದೇವರಾಜ್‌, ನೇತ್ರಾವತಿ, ರವಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT