ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎನ್‌ಎಕ್ಸ್‌ಗೆ ‘ಸರ್ವಿಸ್’ ನೀಡಿದ್ದ ಕಾರ್ತಿ ಕಂಪನಿ

ಗಮನ ತಿರುಗಿಸುವ ತಂತ್ರ: ಕಾಂಗ್ರೆಸ್‌
Last Updated 28 ಫೆಬ್ರುವರಿ 2018, 20:26 IST
ಅಕ್ಷರ ಗಾತ್ರ

ಗಮನ ತಿರುಗಿಸುವ ತಂತ್ರ: ಕಾಂಗ್ರೆಸ್‌

ನವದೆಹಲಿ: ಕಾರ್ತಿ ಬಂಧನದ ಬಗ್ಗೆ ಕಾಂಗ್ರೆಸ್ ಪಕ್ಷವು ಆಕ್ರೋಶ ವ್ಯಕ್ತಪಡಿಸಿದೆ. ಇದು ದ್ವೇಷ ರಾಜಕಾರಣವಷ್ಟೇ ಅಲ್ಲ, ಕೇಂದ್ರದ ದುರಾಡಳಿತ ಮತ್ತು ಹಗರಣಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಮಾಡಿದ ತಂತ್ರ ಎಂದು ಆರೋಪಿಸಿದೆ.

ಕಾರ್ತಿ ಬಂಧನದ ಮೂಲಕ ಕಾಂಗ್ರೆಸ್‌ ಪಕ್ಷವು ಸತ್ಯ ಹೇಳದಂತೆ ಮಾಡಲು ಮತ್ತು ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಕಳೆದ ಹತ್ತೇ ದಿನಗಳಲ್ಲಿ ₹30 ಸಾವಿರ ಕೋಟಿ ಮೊತ್ತದ ಹಗರಣಗಳು ಬಯಲಾಗಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ‘ಮೌನ ಮೋದಿಯಿಂದ ಮಾತಿನ ಮೋದಿ’ಯಾಗಿ ಬದಲಾಗಿಲ್ಲ. ಛೋಟಾ ಮೋದಿ ಮತ್ತು ಮೆಹುಲ್‌ ಚೋಕ್ಸಿ ಬಗ್ಗೆ ಪ್ರಧಾನಿ ಏನನ್ನೂ ಹೇಳುತ್ತಿಲ್ಲ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

ಕಾರ್ತಿ ಅವರು ನೀರವ್‌ ಮೋದಿಯ ರೀತಿಯಲ್ಲಿ ಭಾರತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರಲಿಲ್ಲ. ವಿದೇಶದಿಂದ ಬರುತ್ತಿರುವಾಗಲೇ ಕಾರ್ತಿ ಅವರನ್ನು ಬಂಧಿಸಿರುವುದು ತಮಾಷೆಯಾಗಿದೆ. ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ಹಿಂದೂಸ್ಥಾನ್‌ ಲೀವರ್‌ ಅಲ್ಲ: ಕಾರ್ತಿ

‘ನಾನು ಹಿಂದೂಸ್ಥಾನ ಲೀವರ್‌ ಅಲ್ಲ’ (ಭಾರತದಿಂದ ಪಲಾಯನ ಮಾಡುವವನು ಅಲ್ಲ) ಎಂದು ಕಾರ್ತಿ ಅವರು ತಮ್ಮ ವಕೀಲ ಅಭಿಷೇಕ್‌ ಮನು ಸಿಂಘ್ವಿ ಮೂಲಕ ನ್ಯಾಯಾಲಯಕ್ಕೆ ಹೇಳಿದರು.

ಕಾರ್ತಿಯನ್ನು 15 ದಿನ ಕಸ್ಟಡಿಗೆ ಒಪ್ಪಿಸಬೇಕು ಎಂದು ಸಿಬಿಐ ವಕೀಲ ವಾದಿಸಿದರು. ಆಗ ಅವರು ಮತ್ತು ಸಿಂಘ್ವಿ ನಡುವೆ ತೀವ್ರ ವಾದ–ಪ್ರತಿವಾದ ನಡೆಯಿತು. ತಮ್ಮ ಕಕ್ಷಿದಾರ ಇತರರ ಹಾಗೆ ದೇಶ ಬಿಟ್ಟು ಓಡಿ ಹೋಗುವುದಿಲ್ಲ ಎಂದು ಸಿಂಘ್ವಿ ಹೇಳಿದರು. ಓಡಿಹೋದವರನ್ನು ಲೇವಡಿ ಮಾಡಲು ಬಹುರಾಷ್ಟ್ರೀಯ ಕಂಪನಿ ‘ಹಿಂದೂಸ್ಥಾನ್‌ ಲಿವರ್‌’ ಹೆಸರನ್ನು ಬಳಸಿಕೊಂಡರು.

ಕಾರ್ತಿ ಅವರನ್ನು ಗುರುವಾರ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಸಿಬಿಐ ಕಸ್ಟಡಿಯನ್ನು ಮುಂದುವರಿಸಬೇಕೇ ಎಂಬುದನ್ನು ಅವರು ನಿರ್ಧರಿಸಲಿದ್ದಾರೆ.

**

* ಮೇ 15, 2017: ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು

ಎಫ್‌ಐಆರ್‌ನಲ್ಲಿ ಯಾರ ಹೆಸರಿದೆ

* ಇಂದ್ರಾಣಿ ಮುಖರ್ಜಿ, ಐಎನ್‌ಎಕ್ಸ್ ಮೀಡಿಯಾ ಲಿಮಿಟೆಡ್‌ನ ನಿರ್ದೇಶಕಿ ಮತ್ತು ಇತರರು

* ಪೀಟರ್ ಮುಖರ್ಜಿ, ಐಎನ್‌ಎಕ್ಸ್ ಮೀಡಿಯಾ ಲಿಮಿಟೆಡ್‌ನ ನಿರ್ದೇಶಕ ಮತ್ತು ಇತರರು

* ಕಾರ್ತಿ ಚಿದಂಬರಂ, ಚೆಸ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಮತ್ತು ಇತರರು

* ಪದ್ಮಾ ವಿಶ್ವನಾಥನ್, ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ನ (ಎಎಸ್‌ಸಿಪಿಎಲ್) ನಿರ್ದೇಶಕಿ ಮತ್ತು ಇತರರು

* ಹಣಕಾಸು ಸಚಿವಾಲಯುದ ಕೆಲವು ಅಧಿಕಾರಿಗಳು (ಯಾರನ್ನೂ ಹೆಸರಿಸಿಲ್ಲ)

* ಅನಾಮಧೇಯ ವ್ಯಕ್ತಿಗಳು

(ಇಂದ್ರಾಣಿ ಮುಖರ್ಜಿ)

ಯಾವಾಗ ಏನು?

8 ಆಗಸ್ಟ್, 2006: ಕಂಪನಿ ಕಾಯ್ದೆಯ ನಿಯಮಾವಳಿಗಳ ಪ್ರಕಾರ ಐಎನ್‌ಎಕ್ಸ್ ಮೀಡಿಯಾ ಸ್ಥಾಪನೆ

13 ಮಾರ್ಚ್, 2007: ಕಂಪನಿಯ ಷೇರುಗಳನ್ನು ಮೂರು ಬೇರೆ ಕಂಪನಿಗಳಿಗೆ ನೀಡಲು ಮತ್ತು ಒಟ್ಟು ಬಂಡವಾಳದ ಶೇ 26ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡುವಂತೆ ವಿದೇಶಿ ಬಂಡವಾಳ ಉತ್ತೇಜಕ ಮಂಡಳಿಗೆ (ಎಫ್‌ಐಪಿಬಿ) ಅರ್ಜಿ ಸಲ್ಲಿಸಿದ ಐಎನ್‌ಎಕ್ಸ್ ಮೀಡಿಯಾ‌

16 ಮಾರ್ಚ್, 2007: ಐಎನ್‌ಎಕ್ಸ್‌ನ ಅರ್ಜಿಯನ್ನು ಸಂಬಂಧಿತ ಇಲಾಖೆ ಮತ್ತು ಪ್ರಾಧಿಕಾರಗಳಿಗೆ ರವಾನೆ ಮಾಡಿದ ಎಫ್‌ಐಪಿಬಿ. ವಿದೇಶಿ ಬಂಡವಾಳ ಹೂಡಿಕೆಗೆ ಪ್ರತ್ಯೇಕ ಅನುಮತಿಯ ಅವಶ್ಯಕತೆ ಇದೆ ಎಂದು ಸ್ಪಷ್ಟಪಡಿಸಿದ ಎಫ್‌ಐಪಿಬಿ

18 ಮಾರ್ಚ್, 2007: ಷೇರುಗಳನ್ನು ಮೂರು ಬೇರೆ ಕಂಪನಿಗಳಿಗೆ ಹಂಚಿಕೆ ಮಾಡಲು ಒಪ್ಪಿಗೆ ಸೂಚಿಸಿದ ಎಫ್‌ಐಪಿಬಿ. ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನಿರಾಕರಣೆ. ಆದರೆ ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದ ಹಣಕಾಸು ಸಚಿವ ಪಿ.ಚಿದಂಬರಂ

30 ಮೇ, 2007: ಐಎನ್‌ಎಕ್ಸ್ ಮೀಡಿಯಾ ₹ 4.26 ಕೋಟಿಯಷ್ಟು ಮೊತ್ತದ ವಿದೇಶಿ ಬಂಡವಾಳವನ್ನು ಮಾತ್ರ ಸ್ವೀಕರಿಸಬಹುದು ಎಂದು ಸ್ಪಷ್ಟಪಡಿಸಿದ ಎಫ್‌ಐಪಿಬಿ

(ಪೀಟರ್ ಮುಖರ್ಜಿ)

*

ಕಾರ್ತಿ ಚಿದಂಬರಂ ಪ್ರವೇಶ

* ಒಟ್ಟು ಬಂಡವಾಳದ ಶೇ 26ರಷ್ಟು ವಿದೇಶಿ ಬಂಡವಾಳ ಸ್ವೀಕರಿಸಿದ ಐಎನ್‌ಎಕ್ಸ್. ಅನುಮತಿ ದೊರೆತಿದ್ದದ್ದು ₹ 4.26 ಕೋಟಿಗೆ ಮಾತ್ರ. ಆದರೆ ಐಎನ್‌ಎಕ್ಸ್ ಸ್ವೀಕರಿಸಿದ್ದು ₹ 305 ಕೋಟಿ.

2008ರ ಫೆಬ್ರುವರಿ: ಐಎನ್‌ಎಕ್ಸ್‌ನ ಷೇರುಗಳ ಹಂಚಿಕೆ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ನೀಡಿದ್ದ ಅನುಮತಿಯ ಬಗ್ಗೆ ಎಫ್‌ಐಪಿಬಿಯಿಂದ ಮಾಹಿತಿ ಕೇಳಿದ ಆದಾಯ ತೆರಿಗೆ ಇಲಾಖೆ

26 ಮೇ, 2008: ಈ ಸಂಬಂಧ ಐಎನ್‌ಎಕ್ಸ್ ಮೀಡಿಯಾದಿಂದ ವಿವರಣೆ ಕೇಳಿದ ಎಫ್‌ಐಪಿಬಿ. ಕಾನೂನು ನೆರವಿಗಾಗಿ ಕಾರ್ತಿ ಚಿದಂಬರಂ ಅವರ ಸಂಸ್ಥೆಯ ಮೊರೆ ಹೋದ ಐಎನ್‌ಎಕ್ಸ್

26 ಜೂನ್, 2008: ಕಾನೂನುಬದ್ಧವಾಗಿಯೇ ನಡೆದುಕೊಂಡಿದ್ದೇವೆ ಎಂದು ವಿವರಣೆ ನೀಡಿದ ಐಎನ್ಎಕ್ಸ್

ಸಿಬಿಐ ಪ್ರತಿಪಾದನೆಗಳು

* ಹಣಕಾಸು ಸಚಿವಾಲಯದಲ್ಲಿ ತಮಗೆ ಇದ್ದ ಪ್ರಭಾವ ಬಳಸಿ ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆ ವಿರುದ್ಧ ತನಿಖೆ ನಡೆಯದಂತೆ ಕಾರ್ತಿ ನೋಡಿಕೊಂಡಿದ್ದಾರೆ

* ತಾವು ಈಗಾಗಲೇ ಸ್ವೀಕರಿಸಿದ್ದ ವಿದೇಶಿ ಬಂಡವಾಳದ ಬಗ್ಗೆ ಮಾಹಿತಿ ಮುಚ್ಚಿಟ್ಟು ಮತ್ತೆ ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿ ಎಂದು ಐಎನ್‌ಎಕ್ಸ್ ಮೀಡಿಯಾ ಎರಡನೇ ಬಾರಿ ಎಫ್‌ಐಪಿಬಿಗೆ ಅರ್ಜಿ ಸಲ್ಲಿಸಿದೆ. ಮತ್ತೊಮ್ಮೆ ಅನುಮತಿ ನೀಡಲಾಗಿದೆ

* ಕಾರ್ತಿ ಚಿದಂಬರಂ ಪರೋಕ್ಷ ಒಡೆತನದ ಎಎಸ್‌ಸಿಪಿಎಲ್‌ಗೆ ಐಎನ್‌ಎಕ್ಸ್ ₹ 10 ಲಕ್ಷ ಪಾವತಿಸಿದೆ. ಕಾರ್ತಿಗೆ ಸಂಬಂಧಿಸಿದ ಹಲವು ಕಂಪನಿಗಳಿಗೆ ₹ 3.5 ಕೋಟಿ ನೀಡಲಾಗಿದೆ

* ‘ಎಫ್‌ಐಪಿಬಿಯ ನೋಟಿಸ್ ಮತ್ತು ಅದಕ್ಕೆ ಸಂಬಂಧಿಸಿದ ವಿವರಣೆಗೆ ನೆರವಾಗಲು ಎಎಸ್‌ಸಿಪಿಎಲ್‌ಗೆ ಪಾವತಿ ಮಾಡಿದ ಶುಲ್ಕ’ ಎಂದು ಐಎನ್‌ಎಕ್ಸ್ ಮೀಡಿಯಾದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ

ಆಧಾರ: ಸಿಬಿಐನ ಎಫ್‌ಐಆರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT