ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ ರೈತರ ಪಾಲಿನ ಕಲ್ಪವೃಕ್ಷ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಅಭಿಪ್ರಾಯ
Last Updated 19 ಮೇ 2020, 13:36 IST
ಅಕ್ಷರ ಗಾತ್ರ

ಕೋಲಾರ: ‘ಡಿಸಿಸಿ ಬ್ಯಾಂಕ್‌ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹಾಗೂ ಬಡ ಮಹಿಳೆಯರ ಪಾಲಿಗೆ ಕಲ್ಪವೃಕ್ಷವಾಗಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್ ಹಾಗೂ ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದ ವತಿಯಿಂದ ಕಡಗಟ್ಟೂರಿನಲ್ಲಿ ಮಂಗಳವಾರ ರೈತರಿಗೆ ಬೆಳೆ ಸಾಲದ ಚೆಕ್ ವಿತರಿಸಿ ಮಾತನಾಡಿ, ‘ಡಿಸಿಸಿ ಬ್ಯಾಂಕ್‌ ಲಾಕ್‌ಡೌನ್‌ ಸಂಕಷ್ಟದಲ್ಲೂ ರೈತರಿಗೆ ನೆರವಾಗುತ್ತಿದೆ. ಸಾಲ ಮರುಪಾವತಿಸಿ ಬ್ಯಾಂಕ್‌ಗೆ ಶಕ್ತಿ ತುಂಬಿ’ ಎಂದು ಕಿವಿಮಾತು ಹೇಳಿದರು.

‘ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲ ನೀಡಿ ರೈತರು ಮತ್ತು ಮಹಿಳೆಯರ ಕೈಹಿಡಿದಿದೆ. ವದಂತಿಗೆ ಕಿವಿಗೊಡದೆ ಸಾಲ ಮರುಪಾವತಿಸಿ ಮತ್ತಷ್ಟು ರೈತರಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಿ. ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಿ’ ಎಂದು ಸಲಹೆ ನೀಡಿದರು.

‘ಕೊರೊನಾ ಹಾವಳಿಯಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ನೆಲಕಚ್ಚಿದೆ. ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವ ಉದ್ದೇಶಕ್ಕೆ ಡಿಸಿಸಿ ಬ್ಯಾಂಕ್ ನೆರವು ನೀಡುತ್ತಿದೆ. ಡಿಸಿಸಿ ಬ್ಯಾಂಕ್ ಯಾವುದೇ ವಾಣಿಜ್ಯ ಬ್ಯಾಂಕ್‌ಗಿಂತ ಕಡಿಮೆಯಿಲ್ಲ. ಎಲ್ಲಾ ರೀತಿಯಲ್ಲೂ ಬ್ಯಾಂಕ್‌ ಸಶಕ್ತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆತ್ಮಸ್ಥೈರ್ಯ ತುಂಬುತ್ತಿದೆ: ‘ಬ್ಯಾಂಕ್‌ ಲಾಕ್‌ಡೌನ್‌ ಸಮಯದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಸಾಲದ ಫಲಾನುಭವಿಗಳು ಬ್ಯಾಂಕ್‌ನ ನಂಬಿಕೆ ಉಳಿಸಿಕೊಂಡು ಹೋಗಬೇಕು. ರೈತರು ಮತ್ತು ಮಹಿಳೆಯರೇ ಬ್ಯಾಂಕ್‌ನ ರಕ್ಷಕರು. ಬ್ಯಾಂಕ್‌ ಬಡ ಜನರನ್ನು ಮೀಟರ್ ಬಡ್ಡಿ ದಂಧೆಯಿಂದ ಪಾರು ಮಾಡುತ್ತಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

‘ಲಾಕ್‌ಡೌನ್‌ ಸಮಯದಲ್ಲೂ ರೈತರು ಸಾಲ ಮರು ಪಾವತಿ ಮಾಡಿರುವುದು ಶ್ಲಾಘನೀಯ. ಈ ರೈತರಿಗೆ 24 ತಾಸಿನಲ್ಲಿ ಪುನಃ ಸಾಲ ವಿತರಣೆ ಮಾಡಲಾಗಿದೆ. ರೈತರು ಪ್ರಾಮಾಣಿಕತೆ ಉಳಿಸಿಕೊಳ್ಳಬೇಕು. ಸೊಸೈಟಿಯು ಮಹಿಳಾ ಸಂಘಗಳಿಗೆ ಮತ್ತು ರೈತರಿಗೆ ನೀಡಿರುವ ಬೆಳೆ ಸಾಲ, ಅಡಮಾನ ಸಾಲ ಶೇ 100ರಷ್ಟು ಮರುಪಾವತಿಯಾಗಿದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ವಿವರಿಸಿದರು.

ಬದುಕು ಹಸನು: ‘ಸಹಕಾರಿ ವ್ಯವಸ್ಥೆ ಶಕ್ತಿಯುತವಾಗಿದ್ದರೆ ಮಾತ್ರ ರೈತರು, ಮಹಿಳೆಯರ ಬದುಕು ಹಸನಾಗುತ್ತದೆ. ಈ ಸತ್ಯ ಅರಿತು ಸಹಕಾರಿ ವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಿ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಸಲಹೆ ನೀಡಿದರು.

ಕಡಗಟ್ಟೂರು ಎಸ್‍ಎಫ್‌ಸಿಎಸ್‌ ಉಪಾಧ್ಯಕ್ಷ ಡೇವಿಡ್, ನಿರ್ದೇಶಕರಾದ ಎಸ್.ಕೃಷ್ಣಪ್ಪ, ವಿ.ಮುನಿರಾಜು, ರಾಜಣ್ಣ, ರಾಮಾಂಜಿನೇಯ, ಮಂಜುನಾಥ್, ವಿಜಯಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT