ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ– ಜಲದ ಕಾರ್ಯಕ್ರಮ ಪ್ರೋತ್ಸಾಹಿಸಿ

ಅಭಿಯಾನದಲ್ಲಿ ಬೆಂಗಳೂರು ಉತ್ತರ ವಿ.ವಿ ಕುಲಸಚಿವ ಎಂ.ಎಸ್.ರೆಡ್ಡಿ ಕಿವಿಮಾತು
Last Updated 23 ಏಪ್ರಿಲ್ 2019, 14:01 IST
ಅಕ್ಷರ ಗಾತ್ರ

ಕೋಲಾರ: ‘ನೆಲ, ಜಲ, ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಶಿಕ್ಷಣ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಂ.ಎಸ್.ರೆಡ್ಡಿ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ವಿ.ವಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀರಾಮಾಯಣ ದರ್ಶನಂ ದಾರ್ಶನಿಕ ಸಂದೇಶ ಅಭಿಯಾನ ಉದ್ಘಾಟಿಸಿ ಮಾತನಾಡಿ, ‘ಪುಸ್ತಕಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರೆ ಸಾಹಿತ್ಯ ಆಸಕ್ತಿ ಹೆಚ್ಚುತ್ತದೆ’ ಎಂದರು.

‘ಕವಿ ಕುವೆಂಪು ಅವರ ರಚನೆಯ ಶ್ರೀರಾಮಾಯಣ ದರ್ಶನಂ ಕುರಿತು ಜಿಲ್ಲೆಯ ವಿವಿಧ ತಾಲ್ಲೂಕಿನ ಕಾಲೇಜುಗಳಲ್ಲಿ ವಿಚಾರ ಸಂಕಿರಣ, ವಿಶೇಷ ಉಪನ್ಯಾಸ, ನೃತ್ಯರೂಪಕ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದೆ ಎಲ್ಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ’ ಎಂದು ಹೇಳಿದರು.

‘ಇತ್ತೀಚೆಗೆ ನಡೆದ ವಿ.ವಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 225 ಕಾಲೇಜುಗಳ ಪೈಕಿ ಕೋಲಾರ, ಚಿಕ್ಕಬಳ್ಳಾಪುರದ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ಕೀರ್ತಿ ಹೆಚ್ಚಿಸಿದ್ದಾರೆ. ಈ ಸಾಧಕರು ವಿದ್ಯಾರ್ಥಿಗಳಿಗೆ ಮಾದರಿ. ಇವರನ್ನು ಸ್ಫೂರ್ತಿಯಾಗಿಸಿಕೊಂಡು ಶೈಕ್ಷಣಿಕ ಸಾಧನೆ ಮಾಡಿ’ ಎಂದು ಸಲಹೆ ನೀಡಿದರು.

ಮೇರು ಕೃತಿ: ‘ರಾಮಾಯಣ ದರ್ಶನಂ ಕೃತಿಯು ಸಾಹಿತ್ಯಕವಾಗಿ ಮೇರು ಕೃತಿ. ಎಲ್ಲಾ ಪದವಿ ಕಾಲೇಜುಗಳಲ್ಲಿ ಈ ಕೃತಿಯ ಕುರಿತು ಕಾರ್ಯಕ್ರಮ ನಡೆಯಬೇಕು’ ಎಂದು ಬೆಂಗಳೂರು ಉತ್ತರ ವಿ.ವಿಯ ವಿದ್ಯಾ ವಿಷಯಕ ಪರಿಷತ್ ಸದಸ್ಯ ಎಂ.ವಿ.ರಂಗಪ್ಪ ಆಶಿಸಿದರು.

‘ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ನಾಡು ನುಡಿಗೆ ಗೌರವ ತರುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೈತಿಕತೆ ಚೌಕಟ್ಟು: ‘ಶ್ರೀರಾಮಾಯಣ ದರ್ಶನಂ ಕೃತಿಯು ಆಧುನಿಕ ಕರ್ನಾಟಕದ ಮಹಾಕಾವ್ಯ. ರಾಜ್ಯದ ನವೋದಯ ನೈತಿಕತೆ ಚೌಕಟ್ಟನ್ನು ಈ ಕೃತಿ ಒಳಗೊಂಡಿದೆ’ ಎಂದು ಬೆಂಗಳೂರು ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಡೊಮಿನಿಕ್ ಹೇಳಿದರು.

‘ವಾಲ್ಮೀಕಿ ರಚನೆಯ ರಾಮಾಯಣಕ್ಕೂ ಕುವೆಂಪುರ ಶ್ರೀರಾಮಾಯಣ ದರ್ಶನಂಗೂ ಬಹಳ ವಿಭಿನ್ನತೆಯಿದೆ. ಕುವೆಂಪುರ ರಾಮಾಯಣದಲ್ಲಿ ಪ್ರಬುದ್ಧತೆಯ ಬದಲಾವಣೆಗಳನ್ನು ಕಾಣಬಹುದು. ಇದರಲ್ಲಿ ಬರುವ ಸನ್ನಿವೇಶದಲ್ಲಿ ಎಲ್ಲರನ್ನೂ ಮಾನವರಾಗಿ ಬಿಂಬಿಸಲಾಗಿದೆ. ತಪ್ಪು ಸರಿಪಡಿಸಿಕೊಂಡು ಹೋಗುವ ಬದುಕಿನ ಚಿತ್ರಣವಿದೆ’ ಎಂದು ವಿವರಿಸಿದರು.

‘ರಾಮಾಯಣದಲ್ಲಿ ಬರುವಂತಹ ಅಯೋಧ್ಯೆ, ಕಿಷ್ಕಿಂದ ಮತ್ತು ಲಂಕೆ ಈ ಮೂರು ಪ್ರದೇಶಗಳನ್ನು ವಿಶೇಷವಾಗಿ ವಿಶ್ಲೇಷಿಸಲಾಗಿದೆ. ಅಯೋಧ್ಯೆಯನ್ನು ಶೀಲದ ಮೌಲ್ಯತೆಯಾಗಿ ಬಿಂಬಿಸಲಾಗಿದೆ. ಕಿಷ್ಕಿಂದವು ಬುಡಕಟ್ಟು ಜನಾಂಗದ ಸಂಘಟನೆಯನ್ನು ವಿಶ್ಲೇಷಿಸಿದೆ. ಲಂಕೆಯು ಭೋಗ ವಿಲಾಸದ ಅರ್ಥ ಕಲ್ಪಿಸಿದೆ’ ಎಂದು ಪ್ರತಿಪಾದಿಸಿದರು.

ಅರಿವು ಮೂಡಿಸಬೇಕು: ‘ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಯುವಕ ಯುವತಿಯರಿಗೆ ಅರಿವು ಮೂಡಿಸಬೇಕು. ಸಾಮಾಜಿಕತೆ, ಅಸಮಾನತೆ, ಅನಕ್ಷರಸ್ಥತೆ, ಮೌಢ್ಯತೆ, ಜಾತೀಯತೆ ತೊಡೆದು ಹಾಕುವ ಜವಾಬ್ದಾರಿ ಯುವಕ ಯುವತಿಯರ ಮೇಲಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಕಿವಿಮಾತು ಹೇಳಿದರು.

‘ರಾಮಾಯಣ ದರ್ಶನಂ ಕೃತಿಯು ವಿಭಿನ್ನತೆಯಿಂದ ಕೂಡಿದೆ. ವೇದ, ಉಪನಿಷತ್‌ಗಳಿಂದ ಹಿಡಿದು ವಿವೇಕ ನಂತರ ತತ್ವಗಳವರೆಗೆ ಒಳಗೊಂಡಿದೆ. ಅನೇಕ ಸಾಹಿತಿಗಳು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ಸಾಹಿತ್ಯವು ಎಂದೆಂದಿಗೂ ಜೀವಂತವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಪ್ರೊ.ಚಂದ್ರಶೇಖರ ನಂಗಲಿ, ಬೆಂಗಳೂರು ಉತ್ತರ ವಿ.ವಿ ಕುಲಸಚಿವ (ಮೌಲ್ಯಮಾಪನ) ಜನಾರ್ಧನಂ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಎಂ.ಮುನಿರತ್ನಪ್ಪ, ವಿ.ವಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಪ್ರೊ.ವಿ.ನಾಗರಾಜ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಕುಮುದಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT