ಶನಿವಾರ, ಸೆಪ್ಟೆಂಬರ್ 18, 2021
24 °C
ಉಪನ್ಯಾಸಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮನವಿ

ವಿದ್ಯಾರ್ಥಿಗಳ ಕಲಿಕೆಗೆ ಚೈತನ್ಯ ತುಂಬಿ: ರಾಮಚಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ ಮಹಾಮಾರಿಯು ಶೈಕ್ಷಣಿಕ ಅಭಿವೃದ್ಧಿಗೆ ಭಾರಿ ಹಿನ್ನಡೆ ಉಂಟು ಮಾಡಿದ್ದು, ಇದೀಗ ಭೌತಿಕ ತರಗತಿಗಳ ಆರಂಭದೊಂದಿಗೆ ಮತ್ತೆ ವಿದ್ಯಾರ್ಥಿಗಳ ಕಲಿಕೆಗೆ ಚೈತನ್ಯ ತುಂಬಬೇಕು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ಹೇಳಿದರು.

ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ಸಂವಾದದಲ್ಲಿ ಮಾತನಾಡಿ, ‘ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಮೊದಲ 5 ಸ್ಥಾನದೊಳಗೆ ತರಲು ಉಪನ್ಯಾಸಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಕೋವಿಡ್‌ನಿಂದ ಜಗತ್ತು ಅಯೋಮಯವಾಗಿದ್ದು, ನಾನಾ ಕ್ಷೇತ್ರಗಳಲ್ಲಿ ಕೆಲಸ ಕಾರ್ಯ ಸ್ಥಗಿತಗೊಂಡಿವೆ. ಇದಕ್ಕೆ ಶಿಕ್ಷಣ ಕ್ಷೇತ್ರ ಸಹ ಹೊರತಾಗಿಲ್ಲ. ಆನ್‌ಲೈನ್‌ ತರಗತಿಗಳು ಎಂದಿಗೂ ಪೂರ್ಣ ಕಲಿಕೆಗೆ ಪೂರಕವಲ್ಲ. ಇದರ ನಡುವೆಯೂ ಮಕ್ಕಳ ಕಲಿಕಾಭಿವೃದ್ಧಿಗೆ ಒತ್ತು ನೀಡಬೇಕು. ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ’ ಎಂದರು.

‘ಹಲವು ವರ್ಷಗಳ ಕಾಲ ಶಿಕ್ಷಕರ ವೃತ್ತಿಯಲ್ಲಿ ತೊಡಗಿಕೊಂಡಿದ್ದು, ಸರ್ಕಾರದ ಇತರೆ ವೃತ್ತಿಗಳಲ್ಲಿ ಸಿಗದೆ ಇರುವ ಹೆಚ್ಚು ಖುಷಿ ಉಪನ್ಯಾಸಕರ ವೃತ್ತಿಯಲ್ಲಿ ಸಿಗುತ್ತದೆ. ಸೇವೆ ಸಲ್ಲಿಸುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಜೀವನಪರ್ಯಂತ ನೆನೆಪಿಸಿಕೊಳ್ಳುವಂತೆ ಮಾಡುವ ಮೂಲಕ ಮಾದರಿ ಉಪನ್ಯಾಸಕರಾಗಬೇಕು. ವೃತ್ತಿ ಗೌರವ ಹೆಚ್ಚಿಸಿಕೊಳ್ಳುವ ದಿಸೆಯಲ್ಲಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿ’ ಎಂದು ಕಿವಿಮಾತು ಹೇಳಿದರು.

ಗುಂಪುಗಾರಿಕೆ ಬೇಡ: ‘ಸರ್ಕಾರಿ ಶಾಲೆಗಳಿಗೆ ರೈತರ, ಕಾರ್ಮಿಕರ, ಹಿಂದುಳಿದ ವರ್ಗದವರ ಮಕ್ಕಳೇ ಹೆಚ್ಚಾಗಿ ಸೇರುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಭದ್ರ ಬುನಾದಿ ಹಾಕಿ ಭವಿಷ್ಯ ರೂಪಿಸಿಕೊಳ್ಳುವ ಕಡೆ ಸಾಗುವಂತೆ ಮಾಡುವುದು ಉಪನ್ಯಾಸಕರ ಜವಾಬ್ದಾರಿ. ಕಾಲೇಜುಗಳಲ್ಲಿ ಉಪನ್ಯಾಸಕರು ಗುಂಪುಗಾರಿಕೆಗೆ ಅವಕಾಶ ನೀಡದೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಪಣ ತೊಡಬೇಕು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಆ.23ರಿಂದ ಶಾಲಾ ಕಾಲೇಜು ಆರಂಭಿಸಲು ನಿರ್ಧರಿಸಿದೆ. ಇಡೀ ವಿಶ್ವ, ರಾಜ್ಯ, ಜಿಲ್ಲೆ, ಗ್ರಾಮವನ್ನು ಬಾಧಿಸುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದು ಮಕ್ಕಳ ಜತೆಯಲ್ಲಿ ಶಿಕ್ಷಕರು ಪಾಠ ಮಾಡುವ ಸುದಿನ ಒದಗಿ ಬರಲಿ’ ಎಂದು ಆಶಿಸಿದರು.

ಸಂಪೂರ್ಣ ಸಹಕಾರ: ‘ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಉಪನ್ಯಾಸಕರು ದಕ್ಷತೆ ಮತ್ತು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಜಿಲ್ಲಾ ಪದವಿ ಪೂರ್ವ ಕಾಲೇಜು ಶಿಕ್ಷಣ ವ್ಯವಸ್ಥೆಯು ರಾಜ್ಯದಲ್ಲಿ ಮಾದರಿಯಾಗಲಿದೆ ಎಂಬ ಆಶಾಭಾವನೆ ಸಂಘಕ್ಕೆ ಇದೆ. ಈ ನಿಟ್ಟಿನಲ್ಲಿ ಸಂಘ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಅಧ್ಯಕ್ಷ ಟಿ.ಕೆ.ನಟರಾಜ್ ಹೇಳಿದರು.

ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಉದಯಕುಮಾರ್, ಕಾರ್ಯಾಧ್ಯಕ್ಷ ಜೆ.ಜಿ.ನಾಗರಾಜ್, ಪದಾಧಿಕಾರಿಗಳಾದ ಟಿ.ಚಂದ್ರಪ್ಪ, ಗೋಪಿಕೃಷ್ಣನ್, ರತ್ನಪ್ಪ ಮೇಲಾಗಾಣಿ, ಬೋಡಿರೆಡ್ಡಿ, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಕೃಷ್ಣಪ್ಪ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು