ಬಂಗಾರಪೇಟೆ: ಕೆರೆ ಒತ್ತುವರಿ, ರಾಜಕಾಲುವೆ, ನಕಾಶೆ ರಸ್ತೆ ಮುಚ್ಚಿರುವವರನ್ನು ಗುರುತಿಸಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಮಾತನಾಡಿ, ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವಾಗ ಮುಂದೆ ಹಾಗೂ ಹಿಂದೆ ಇರುವ ಜಮೀನುಗಳಿಗೆ ಓಡಾಡಲು ರಸ್ತೆಗಳನ್ನು ಗುರುತಿಸಿ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.
ನಮೂನೆ 50, 53 ಮತ್ತು 57 ಅರ್ಜಿಗಳನ್ನು ಸಲ್ಲಿಸಿದವರಿಗೆ ಜಮೀನು ಮಂಜೂರು ಮಾಡುವಾಗ ಅಧಿಕಾರಿಗಳು ಜಮೀನುಗಳನ್ನು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಬೇಕು. ಅನುಮೋದನೆಯಾದ ವಿಸ್ತೀರ್ಣ, ಚೆಕ್‌ಬಂದಿ ಗುರುತಿಸಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಗಣಕೀಕೃತ ಪಹಣಿ ಮಾಡುವಾಗ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡುವುದಿಲ್ಲ. ಮನಬಂದಂತೆ ವಿಸ್ತೀರ್ಣ ನಮೂದಿಸುತ್ತಾರೆ. ಸ್ಥಳದ ತನಿಖೆ ಮಾಡಿದಾಗ ಪಹಣಿಯಲ್ಲಿರುವ ವಿಸ್ತೀರ್ಣ ಸ್ಥಳದಲ್ಲಿ ಇರುವುದಿಲ್ಲ. ತಾಲ್ಲೂಕಿನಾದ್ಯಂತ ಈ ಸಮಸ್ಯೆ ಇದೆ. ದೊಡ್ಡ ರೈತರು ಒಂದೇ ಕುಟುಂಬದಲ್ಲಿ ತನ್ನ ಹೆಸರಿಗೆ, ಹೆಂಡತಿ, ಅಣ್ಣ-ತಮ್ಮ, ಮಕ್ಕಳು ಮತ್ತು ಸಂಬಂಧಿಕರ ಹೆಸರಿನಲ್ಲಿ ಬೇರೆ ಬೇರೆ ಗ್ರಾಮಗಳಲ್ಲಿ ಅರ್ಜಿ ಹಾಕುವುದು ವಾಡಿಕೆಯಾಗಿದೆ ಎಂದು ದೂರಿದರು.
ಈ ವಿಚಾರದಲ್ಲಿ ಒಂದು ಸಮಿತಿ ರಚಿಸಬೇಕು. ತಾಲ್ಲೂಕಿನಾದ್ಯಂತ ಈ ರೀತಿ ಒಂದೇ ಕುಟುಂಬದವರಿಗೆ ಮಂಜೂರು ಆಗಿರುವ ಜಮೀನುಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಭೂರಹಿತ ರೈತರಿಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಕಚೇರಿಯಲ್ಲಿ ಲಂಚಾವತಾರ ಹೆಚ್ಚಿದ್ದು, ಕಡಿವಾಣ ಹಾಕಬೇಕು. ನಕಲಿ ದಾಖಲೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಕಾಯದರ್ಶಿ ವೀರಭದ್ರಸ್ವಾಮಿ, ಪದಾಧಿಕಾರಿಗಳಾದ ಲಕ್ಷ್ಮಣ್, ಮುರಳಿ, ಶ್ರೀನಿವಾಸ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.