ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ವಿವಾದ ಅಂತ್ಯ: ಕೋಮು ಸಾಮರಸ್ಯಕ್ಕೆ ಮುನ್ನುಡಿ

ಕ್ಲಾಕ್‌ಟವರ್‌ನಲ್ಲಿ ಹಾರಿದ ರಾಷ್ಟ್ರಧ್ವಜ: ದೇಶಪ್ರೇಮ ಮೆರೆದ ಮುಸ್ಲಿಂ ಬಾಂಧವರು
Last Updated 19 ಮಾರ್ಚ್ 2022, 15:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಡಳಿತವು ಜಿಲ್ಲಾ ಕೇಂದ್ರದ ಕ್ಲಾಕ್‌ಟವರ್‌ನಲ್ಲಿ ಶನಿವಾರ ರಾಷ್ಟ್ರಧ್ವಜ ಹಾರಿಸುವ ಮೂಲಕ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವಿನ ಕೋಮು ಸಾಮರಸ್ಯಕ್ಕೆ ನಾಂದಿಯಾಡಿತು.

ಉದ್ವಿಗ್ನ ಪರಿಸ್ಥಿತಿ ನಡುವೆಯೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಅಂಜುಮಾನ್‌ ಇಸ್ಲಾಮಿಯ ಸಂಘಟನೆ ಮತ್ತು ಮುಸ್ಲಿಂ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಲಾಕ್‌ಟವರ್‌ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿತು.

ಮುಸ್ಲಿಮರ ಪ್ರಾಬಲ್ಯವಿರುವ ಕ್ಲಾಕ್‌ಟವರ್‌ಗೆ ಕೇಸರಿ, ಬಿಳಿ, ಹಸಿರು ಬಣ್ಣ ಬಳಿಸಿ ಮತ್ತು ರಾಷ್ಟ್ರಧ್ವಜ ಹಾರಿಸುವಂತೆ ಆಗ್ರಹಿಸಿ ಮಾರ್ಚ್‌ 18ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದ್ದರು. ಆದರೆ, ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯು ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಧರಣಿಗೆ ಅನುಮತಿ ನೀಡದ ಕಾರಣ ಸಂಸದರು ಧರಣಿಯನ್ನು ಮಾರ್ಚ್ 21ಕ್ಕೆ ಮುಂದೂಡಿ ಎರಡು ದಿನಗಳ ಗಡುವು ನೀಡಿದ್ದರು.

ಸಂಸದರ ಹೋರಾಟದ ಕರೆಯಿಂದ ಕ್ಲಾಕ್‌ಟವರ್‌ ವಿವಾದವು ಗಂಭೀರ ಸ್ಪರೂಪಕ್ಕೆ ತಿರುಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ವೆಂಕಟ್‌ರಾಜ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರು ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಅಂಜುಮಾನ್‌ ಇಸ್ಲಾಮಿಯ ಸಂಘಟನೆಯ ಪದಾಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದರು.

ಪರಿಸ್ಥಿತಿಯ ಗಂಭೀರತೆ ಅರಿತ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಅಂಜುಮಾನ್‌ ಇಸ್ಲಾಮಿಯಾ ಸಂಘಟನೆ ಪದಾಧಿಕಾರಿಗಳು ಕ್ಲಾಕ್‌ಟವರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಜಿಲ್ಲಾಡಳಿತಕ್ಕೆ ಬೆಂಬಲ ಸೂಚಿಸಿದರು. ಬಿಗಿ ಪೊಲೀಸ್‌ ಭದ್ರತೆಯಲ್ಲಿ ಶನಿವಾರ ನಸುಕಿನಿಂದಲೇ ಕಾರ್ಯೋನ್ಮುಖವಾದ ಜಿಲ್ಲಾಡಳಿತವು ಕ್ಲಾಕ್‌ಟವರ್‌ಗೆ ಬಿಳಿ ಬಣ್ಣ ಬಳಿಸಿ ಹೊಸ ರೂಪ ನೀಡಿತು.

ಅಲ್ಲದೇ, ಕ್ಲಾಕ್‌ಟವರ್‌ನಲ್ಲಿ ಹಾಕಿದ್ದ ಇಸ್ಲಾಂ ಧರ್ಮದ ಧ್ವಜವನ್ನು ತೆರವುಗೊಳಿಸಿತು. ಈ ವೇಳೆ ಅಕ್ಕಪಕ್ಕದ ಬಡಾವಣೆಗಳಲ್ಲಿನ ಮುಸ್ಲಿಂ ಯುವಕರ ಗುಂಪು ಪ್ರತಿರೋಧದ ಧ್ವನಿ ಮೊಳಗಿಸಿತು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ರಸ್ತೆಗಳು ಬಂದ್‌: ಮುನ್ನೆಚ್ಚರಿಕೆ ಕ್ರಮವಾಗಿ ಕ್ಲಾಕ್‌ಟವರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಇಡೀ ದಿನ ವಾಹನ ಸಂಚಾರ ಮತ್ತು ಜನರ ಓಡಾಟ ನಿರ್ಬಂಧಿಸಲಾಯಿತು. ವಾಹನಗಳು ಕ್ಲಾಕ್‌ಟವರ್‌ಗೆ ಪರ್ಯಾಯವಾಗಿ ಟೇಕಲ್‌ ರಸ್ತೆ, ಬಂಗಾರಪೇಟೆ ರಸ್ತೆ, ಎಂ.ಜಿ ರಸ್ತೆಯಲ್ಲಿ ಸಂಚರಿಸಿದವು. ಬೆಂಗಳೂರು ಮತ್ತು ತಿರುಪತಿ ನಡುವೆ ಓಡಾಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಖಾಸಗಿ ವಾಹನಗಳು ನಗರವನ್ನು ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿ 75ರಲ್ಲೇ ಸಂಚರಿಸಿದವು.

ಕ್ಲಾಕ್‌ಟವರ್‌ನಲ್ಲಿನ ಅಂಗಡಿಗಳ ಮಾಲೀಕರು ಮುನ್ನೆಚ್ಚರಿಕೆ ಕ್ರಮವಾಗಿ ಮಳಿಗೆಗಳನ್ನು ಬಂದ್‌ ಮಾಡಿದರು. ಹೀಗಾಗಿ ಕ್ಲಾಕ್‌ಟವರ್‌ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅಘೋಷಿತ ಬಂದ್‌ ವಾತಾವರಣವಿತ್ತು. ರಾಜ್ಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ), ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಡಿಎಆರ್‌) ಸೇರಿದಂತೆ ಸುಮಾರು 800 ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಡೀ ದಿನ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಿಸಿದರು.

ರಾಷ್ಟ್ರ ಧ್ವಜಾರೋಹಣದ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಮುಸ್ಲಿಂ ಮುಖಂಡರು ಹಾಗೂ ಸಮುದಾಯದ ಜನರು ‘ಹಿಂದೂಸ್ತಾನ್‌ ಜಿಂದಾಬಾದ್‌’ ಘೋಷಣೆ ಕೂಗಿ ದೇಶ ಪ್ರೇಮ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT