ರಕ್ತದಾನದಿಂದ ಆರೋಗ್ಯ ವೃದ್ಧಿ

ಶುಕ್ರವಾರ, ಜೂಲೈ 19, 2019
24 °C
ಡಿಎಚ್‌ಓ ಡಾ.ಎಸ್.ಎನ್.ವಿಜಯಕುಮಾರ್ ಅಭಿಪ್ರಾಯ

ರಕ್ತದಾನದಿಂದ ಆರೋಗ್ಯ ವೃದ್ಧಿ

Published:
Updated:
Prajavani

ಕೋಲಾರ: ‘ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದಾಗ ರಕ್ತದ ಬೇಡಿಕೆಯನ್ನು ನಿವಾರಣೆ ಮಾಡಲು ಸಹಕಾರಿಯಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯಕುಮಾರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿದಿಂದ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನ ದಿನಾಚರಣೆಯಲ್ಲಿ ಮಾತನಾಡಿ, ‘ಜಿಲ್ಲೆಗೆ ವಾರ್ಷಿಕ 16,000 ಯೂನಿಟ್ ರಕ್ತದ ಅವಶ್ಯಕತೆಯಿದ್ದು, ರಕ್ತದ ಸಂಗ್ರಹ ಕಡಿಮೆಯಿದೆ’ ಎಂದರು.

‘ಜನಸಂಖ್ಯೆಯ ಶೇ.1ರಷ್ಟು ಅಂದರೆ ವಾರ್ಷಿಕ 16,000 ಯೂನಿಟ್ ರಕ್ತ ಬೇಕಾಗುತ್ತದೆ. ಪ್ರಸ್ತುತ ಇದಕ್ಕಿಂತ ಸ್ವಲ್ಪ ಕಡಿಮೆ ರಕ್ತ ಸಾಕು. ಅದಕ್ಕೂ ಕೊರತೆ ಇದೆ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಯಾವುದೇ ರೀತಿಯ ತೊಂದರೆಯಾಗುವುದಿಲ್ಲ’ ಎಂದು ಹೇಳಿದರು.

‘ಹದಿನೆಂಟು ವರ್ಷ ಮೇಲ್ಪಟ್ಟ ಆರೋಗ್ಯವಂತರು ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ರಕ್ತದಾನ ಮಾಡಿದರೆ ರಕ್ತದ ಕೊರತೆ ನೀಗಿಸಬಹುದು. ಪ್ರಮುಖವಾಗಿ ಪಾಸಿಟಿವ್ ರಕ್ತದ ಗುಂಪುಗಳ ಅಭಾವ ಉಂಟಾಗುತ್ತಿದೆ. ಇಂತಹ ರಕ್ತದ ಗುಂಪುಗಳುಳ್ಳವರು ರಕ್ತನಿಧಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡರೆ ಅವಶ್ಯವಿದ್ದಾಗ ರಕ್ತವನ್ನು ಪಡೆಯಲು ನೆರವಾಗುತ್ತದೆ’ ಎಂದು ತಿಳಿಸಿದರು.

ಔಷಧ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್ ಮಾತನಾಡಿ, ‘ರಕ್ತದಾನ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಯುವಕರು ಹೊರ ಬರಬೇಕು’ ಎಂದು ಮನವಿ ಮಾಡಿದರು.

‘ರಕ್ತದಾನಕ್ಕೆ ಭಯಪಡಬೇಕಿಲ್ಲ. ರಕ್ತದಾನದಾನಕ್ಕೆ ಕಾಲೇಜು ವಿದ್ಯಾರ್ಥಿಗಳು ಮುಂದೆ ಬರಬೇಕು, ರಕ್ತದಾನದ ಮಹತ್ವ ಅರಿತವರು ಮುಂದೆ ಬರುತ್ತಾರೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಜಗದೀಶ್ ಮಾತನಾಡಿ, ‘ರಕ್ತ ದಾನ ಮಾಡುವವರನ್ನು ಪ್ರೋತ್ಸಾಹಿಸುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಮುಂದಾಗಬೇಕು’ ಎಂದು ಕೋರಿದರು.

‘ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಹೆಚ್ಚಿದೆ. ದೇಶದಲ್ಲಿ ಶೇ. 70ರಷ್ಟು ಮಹಿಳೆಯರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶದ ಕೊರತೆಯಿದೆ. ಗರ್ಭಿಣಿಯರು ಹೆರಿಗೆ ಸಂದರ್ಭದಲ್ಲಿ ರಕ್ತಹೀನತೆಯ ಕೊರತೆ ಅನುಭವಿಸುವುದರಿಂದ ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು’ ಎಂದು ಸಲಹೆ ನೀಡಿದರು.

‘ಎಚ್‍ಐವಿ, ಹೆಪಟೈಸಿಸ್, ಹೆಪಟೈಸಿಸ್-ಸಿ, ಮಲೇರಿಯಾ ಮುಕ್ತರಾಗಿರುವವರು 18ರಿಂದ 60 ವರ್ಷ ಮೇಲ್ಪಟ್ಟ, 50ಕೆಜಿ ತೂಕವಿರುವವರು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು’ ಎಂದು ಹೇಳಿದರು.

ರಕ್ತದಾನ ಮಾಡಿದ ರಘುವಂಶಿ, ಶಂಕರ್, ಲೋಕೇಶ್,ಬಿ.ಉಮೇಶ್,ರಾಜೇಶ್ ಅವರನ್ನು ಸನ್ಮಾನಿಸಲಾಯಿತು.

ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪವನ್ ನರ್ಸಿಂಗ್ ಕಾಲೇಜಿನ ಅರ್ಚಿತಾ ಪ್ರಥಮ, ಎಸ್‌ಎನ್‌ಆರ್ ಪ್ಯಾರಾಮೆಡಿಕಲ್ ವಿಭಾಗದ ಗಾಯತ್ರಿ ದ್ವಿತೀಯ ಹಾಗೂ ಚನ್ನೇಗೌಡ ನರ್ಸಿಂಗ್ ಕಾಲೇಜಿನ ಮಂಜಿ ಮನೋಜ್ ತೃತೀಯ ಬಹುಮಾನ ವಿತರಿಸಲಾಯಿತು.

ಚನ್ನೇಗೌಡ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಭಾರತಿ, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ರೇವತಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಹೇಮಲತಾ, ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !