ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯಿಂದ ನೆಮ್ಮದಿ, ಸಂಬಂಧ ವೃದ್ಧಿ

ಉತ್ತರ ವಿ.ವಿ: ರಾಧೇಯ ತಾಳಮದ್ದಲೆಗೆ ಪ್ರೊ.ನಿರಂಜನ ವಾನಳ್ಳಿ ಚಾಲನೆ
Last Updated 23 ಜೂನ್ 2022, 4:14 IST
ಅಕ್ಷರ ಗಾತ್ರ

ಕೋಲಾರ: ‘ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಿದರೆ ಪರಸ್ಪರ ಸಂಬಂಧಗಳ ವೃದ್ಧಿ ಮತ್ತು ಮಾನಸಿಕ ನೆಮ್ಮದಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ. ಕಲೆಯನ್ನು ಗೌರವಿಸಿ ಕಲಾವಿದರನ್ನು ಉಳಿಸಬೇಕು. ಅವರ ಕಲೆಗೆ ಜೀವ ತುಂಬಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಪ್ರತಿಪಾದಿಸಿದರು.

ತಾಲ್ಲೂಕಿನ ಮಂಗಸಂದ್ರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಉಜಿರೆಯ ಕುರಿಯ ವಿಠಲಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಸ್ತುತಪಡಿಸಿದ ‘ರಾಧೇಯ’ ವಿಶೇಷ ತಾಳಮದ್ದಲೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕನ್ನಡ ನಾಡು ವಿಶಿಷ್ಟವಾದ ಸಾಂಸ್ಕೃತಿಕ ಸೊಬಗು ಹೊಂದಿದ್ದು, ವಿವಿಧ ಕಲೆಗಳ ತವರಾಗಿದೆ. ಆಯಾ ಭಾಗದಲ್ಲೂ ವಿಶಿಷ್ಟ ಕಲೆಗಳ ಶ್ರೀಮಂತಿಕೆ ಕಾಣಬಹುದಾಗಿದೆ.ತಾಳಮದ್ದಲೆ ಕಲೆ ಅತ್ಯಂತ ವೈಭವಯುತವಾಗಿದ್ದು, ಕಲಾವಿದರು ಕೈ, ಕಣ್ಣು, ಮುಖಗಳಿಂದ ಭಾವ ಪ್ರದರ್ಶನ ಮಾಡುವ ಮೂಲಕ ಪ್ರಸ್ತುತಪಡಿಸುತ್ತಾರೆ.ಇದು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ಕಲೆಯಾಗಿದೆ’ ಎಂದು ಹೇಳಿದರು.

ಪ್ರತಿಷ್ಠಾನದ ಅಶೋಕ್ ಭಟ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ. ಕುಮುದಾ ಪಾಲ್ಗೊಂಡಿದ್ದರು. ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಾಳಮದ್ದಲೆಯ ರಸದೌತಣ ಸವಿದರು.

ಜಿಲ್ಲೆಯ ಇತಿಹಾಸದಲ್ಲೇ ಇಂಥ ತಾಳಮದ್ದಲೆ ಕಾರ್ಯಕ್ರಮ ನಡೆದಿದ್ದು ಇದೇ ಮೊದಲು. ಹಿಮ್ಮೇಳದಲ್ಲಿ ಕಾವ್ಯಾ ಶ್ರೀನಾಯಕ್ ಆಜೇರು, ಶ್ರೀಶ ರಾವ್‌ ನಿಡ್ಲೆ, ಅವಿನಾಶ ಬೈಪಾಡಿತ್ತಾಯ, ಮುಮ್ಮೇಳ ಉಜಿರೆ ಅಶೋಕ್ ಭಟ್, ಹರೀಶ ಬಳಂತಿಮೊಗರು, ಶೇಣಿ ಮೇಣುಗೋಪಾಲ ಭಟ್, ಶಶಾಂಕ ಆರ್ನಾಡಿ, ಸುಧಾಕರ್ ಜೈನ್ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT