ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿ

Last Updated 14 ಆಗಸ್ಟ್ 2019, 14:35 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಡಿ.ಕುರುಬರಹಳ್ಳಿ ನಿವಾಸಿ ಬೀಜಮಾತೆ ಪಾಪಮ್ಮ ಅವರ ಹೆಸರಿನಲ್ಲಿ ಸಾವಯವ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿ, 10 ಎಕರೆ ಜಮೀನು ನೀಡಬೇಕು’ ಎಂದು ಕೆಪಿಸಿಸಿ ಕಿಸಾನ್‌ ಘಟಕದ ಮಾಜಿ ಸಂಚಾಲಕ ಅಶ್ವತ್ಥನಾರಾಯಣ ಒತ್ತಾಯಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಾಪಮ್ಮ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಿದರು.

‘ಪಾಪಮ್ಮ ತಮ್ಮ ಜಮೀನಿನಲ್ಲಿ 30 ವರ್ಷಗಳಿಂದ ವಿವಿಧ ದೇಸಿ ಬೀಜಗಳನ್ನು ಮಡಿಕೆಯಲ್ಲಿ ಸಂರಕ್ಷಿಸಿ ಬೀಜಮಾತೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ರಾಜ್ಯದ ಹಲವೆಡೆ ಸಾವಯವ ಕೃಷಿ ಕುರಿತು ಉಪನ್ಯಾಸ ನೀಡಿ ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಿದ್ದಾರೆ. ಅವರ ಸಾಧನೆಗೆ ದೇಶ ವಿದೇಶದ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದರು.

‘ನವಜೀವನ ಚಾರಿಟಬಲ್ ಟ್ರಸ್ಟ್‌ನ ಸದಸ್ಯೆಯಾಗಿರುವ ಪಾಪಮ್ಮ ಅವರಿಗೆ ರಾಜ್ಯ ಸರ್ಕಾರ 2008ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರು ಇಳಿ ವಯಸ್ಸಿನಲ್ಲೂ ಸಾವಯವ ಕೃಷಿ ನಂಬಿ ದೇಶಿ ತರಕಾರಿ ಹಾಗೂ ಬೆಳೆ ಬೆಳೆಯುತ್ತಿದ್ದಾರೆ. ಬೆಳೆಗಳಿಗೆ ಬೇವು, ಹೊಂಗೆ, ಲಕ್ಕಿ ಸೊಪ್ಪು ಹಾಗೂ ಎರೆಹುಳು ಗೊಬ್ಬರಗಳನ್ನು ಸ್ವತಃ ತಯಾರಿಸುತ್ತಿದ್ದಾರೆ’ ಎಂದು ಹೇಳಿದರು.

‘ನನ್ನ ತವರು ಮನೆ ಹಾಗೂ ಅತ್ತೆ ಮನೆಯಲ್ಲಿ ಬೀಜ ತಯಾರಿಕೆ ಮಾಡುತ್ತಿದ್ದು, ಆ ವೃತ್ತಿಯನ್ನೇ  ಮುಂದುವರಿಸಿಕೊಂಡು ಬಂದಿದ್ದೇನೆ. ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ನಾನು ಯಾರಿಗೇ 1 ಕೆ.ಜಿ ಬೀಜ ನೀಡಿದರೂ ಮತ್ತೆ ನನಗೆ 2 ಕೆ,ಜಿ ಬೀಜ ಹಿಂದಿರುಗಿಸಬೇಕೆಂದು ಷರತ್ತು ಹಾಕುತ್ತೇನೆ’ ಎಂದು ಪಾಪಮ್ಮ ವಿವರಿಸಿದರು.

ನವಜೀವನ ಟ್ರಸ್ಟ್‌ ಅಧ್ಯಕ್ಷೆ ಈಶ್ವರಮ್ಮ, ಕೆಪಿಸಿಸಿ ರಾಜ್ಯ ಸಂಚಾಲಕ ಎಂ.ವಿಜಯ್‌ಕುಮಾರ್‌, ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ರಾಮಚಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT