ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ– ಶಿಕ್ಷಣ ಸಂಸ್ಥೆ ಆರಂಭ: ಭರವಸೆ

Last Updated 23 ಫೆಬ್ರುವರಿ 2020, 12:04 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಭೀಮಲಿಂಗೇಶ್ವರ ಸ್ವಾಮಿ ದೇವಾಲಯದ ಮೂಲಕ ಗೋಶಾಲೆ, ಸೇವಾ ಕೇಂದ್ರ, ಶಿಕ್ಷಣ ಸಂಸ್ಥೆ ಆರಂಭಿಸುವ ಉದ್ದೇಶವಿದ್ದು, ಇವುಗಳ ಸ್ಥಾಪನೆಗೆ ಹಠಯೋಗಿಯಂತೆ ಕಾರ್ಯ ನಿರ್ವಹಿಸುತ್ತೇವೆ’ ಎಂದು ಹೊಳಲಿ ಗ್ರಾಮದ ಸೇವಾಶ್ರಮ ಪೀಠದ ದತ್ತಾತ್ರೆಯ ಅವಧೂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹೊಳಲಿ ಗ್ರಾಮದಲ್ಲಿ ಭಾನುವಾರ ನಡೆದ ಬ್ರಹ್ಮ ರಥೋತ್ಸವ ಹಾಗೂ ಗಿರಿಜೋತ್ಸವದಲ್ಲಿ ಮಾತನಾಡಿ, ‘ಭೀಮಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ನಾದಸಾದುಗಳನ್ನು ಕರೆಸಿ ಮಹಾಯಾಗ ನಡೆಸುವ ಮೂಲಕ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿಯಾಗುವಂತೆ ಮಾಡುತ್ತೇವೆ. ಬಸವ ಜಯಂತಿ ದಿನ ರೈತರಿಗೆ ಕೃಷಿ ಮೇಳ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ನಡೆಸುತ್ತೇವೆ’ ಎಂದು ಭರವಸೆ ನೀಡಿದರು.

‘ಹೊಳಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರ ಅನುಕೂಲಕ್ಕಾಗಿ ಉಚಿತವಾಗಿ ಆಂಬುಲೆನ್ಸ್ ಸೇವೆ ಕಲ್ಪಿಸುತ್ತೇವೆ. ಪೀಠಾಧ್ಯಕ್ಷನಾಗಿ ಗೋವು ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಗೋವುಗಳು ಕಸಾಯಿ ಖಾನೆ ಸೇರದಂತೆ ಎಚ್ಚರ ವಹಿಸುತ್ತೇವೆ. ಜಿಲ್ಲೆಯಲ್ಲಿ ಹಿಂದೂ ಧರ್ಮ ಬಿಟ್ಟು ಬೇರೆ ಧರ್ಮಗಳಿಗೆ ಮತಾಂತರವಾಗುವುದನ್ನು ತಡೆಯುತ್ತೇವೆ. ಜತೆಗೆ ಮತಾಂತರ ಆಗಿರುವವರನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರುತ್ತೇವೆ’ ಎಂದು ತಿಳಿಸಿದರು.

‘ಸಮಾಜದಲ್ಲಿ ಧರ್ಮ ಒಡೆಯುವ ಮತ್ತು ಸಮಾಜವನ್ನು ಲೂಟಿ ಮಾಡುವ ರಾಜಕಾರಣಿಗಳ ಸಂಖ್ಯೆ ಹೆಚ್ಚಿದೆ. ಭಕ್ತಿ ಕೇಂದ್ರಗಳ ನಿರ್ಮಾಣಕ್ಕೆ ಪಣ ತೊಟ್ಟಿದ್ದೇವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಉದ್ದೇಶಕ್ಕೆ ಪೋಷಕರು ಮಕ್ಕಳನ್ನು ಮಠಗಳಿಗೆ ಕಳುಹಿಸಬೇಕು. ನಶಿಸಿ ಹೋಗುತ್ತಿರುವ ಅಧ್ಯಾತ್ಮಿಕ ಸಂಸ್ಕಾರ ಬೆಳಸಬೇಕು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯ ಜನ ಸನ್ಮಾರ್ಗದಲ್ಲಿ ಸಾಗಲು ಧಾರ್ಮಿಕ ಮತ್ತು ಮೌಲ್ಯಯುತ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು’ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸದಸ್ಯ ಮುನಿವೆಂಕಟಪ್ಪ, ದೇವಾಲಯದ ಧರ್ಮಾಧಿಕಾರಿ ಮಂಜುಳಾ, ಟಿಎಪಿಸಿಎಂಎಸ್ ಅಧ್ಯಕ್ಷ ಮಾರ್ಕೊಂಡೇಗೌಡ, ರಕ್ಷ ಪ್ರತಿಷ್ಠಾನದ ಅಧ್ಯಕ್ಷೆ ವಿಭಾ ಸುಷ್ಮಾ, ನಿವೃತ್ತ ಮುಖ್ಯ ಶಿಕ್ಷಕ ಎಸ್.ವಿ.ವೆಂಕಟಕೃಷ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT