ಶನಿವಾರ, ಜನವರಿ 25, 2020
22 °C
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಒತ್ತಾಯ

ಕರ್ನಾಟಕ ಸಹಕಾರಿ ಬ್ಯಾಂಕ್ ಸ್ಥಾಪಿಸಿ: ವಿ.ಆರ್.ಸುದರ್ಶನ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಎಲ್ಲ ಸಹಕಾರಿ ಸಂಸ್ಥೆಗಳನ್ನು ವಿಲೀನಗೊಳಿಸಿ ಕರ್ನಾಟಕ ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡಿ, ಪ್ರತಿ ಕುಟುಂಬಕ್ಕು ಸದಸ್ಯತ್ವ ನೀಡಲು ಸರ್ಕಾರ ಮುಂದಾಗಬೇಕು’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಒತ್ತಾಯಿಸಿದರು.

ತಾಲ್ಲೂಕಿನ ವೇಮಗಲ್‌ನಲ್ಲಿ ಡಿಸಿಸಿ ಬ್ಯಾಂಕ್‌, ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ೩೩ ಸ್ತ್ರೀ ಶಕ್ತಿ ಸಂಘಗಳಿಗೆ ₹1.45 ಕೋಟಿ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿ, ‘ಸಹಕಾರಿ ಬ್ಯಾಂಕ್‌ಗಳ ಪ್ರಯತ್ನದಿಂದ ಬಡವರಿಗೆ ಸಾಲ ಸೌಕರ್ಯ ಕಲ್ಪಿಸಲು ಸಾಧ್ಯ’ ಎಂದರು.

‘ಕೇರಳ ಮುಖ್ಯಮಂತ್ರಿ ರಾಜ್ಯದ ಎಲ್ಲ ಸಹಕಾರಿ ಬ್ಯಾಂಕ್ ಹಾಗೂ ಸಂಸ್ಥೆಗಳನ್ನು ಒಗ್ಗೂಡಿಸಿದ್ದಾರೆ. ಇದರಿಂದ ಗ್ರಾಮಮಕ್ಕೆ ಶಾಖೆಗಳನ್ನು ವಿಸ್ತರಿಸಿದರೆ ಹಣಕಾಸಿನ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಚಿಂತನೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಸಾಲ ವಿತರಣೆಮಾಡುವುದರಿಂದ ಮಹಿಳೆಯರ ಸಬಲೀಕರಣ ಕಾಣಬಹುದಾಗಿದೆ. ಅದೇ ರೀತಿ ಬ್ಯಾಂಕ್‌ನಿಂದ ಬಡ ಪುರುಷರಿಗೂ ಸಾಲ ವಿತರಣೆ ಮಾಡಲು ಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ಹಿಂದೆ ಡಿಸಿಸಿ ಬ್ಯಾಂಕನ್ನು ಅಧಃಪತನಕ್ಕೆ ಇಳಿಸಿದ ಆಡಳಿತ ಮಂಡಳಿ ನಿಲುವಿನ ಕುರಿತು ಕೋಪ ಬರುತ್ತದೆ. ಆದರೆ ಇಂದು ಬ್ಯಾಂಕ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದು ಖುಷಿ ತಂದಿದೆ. ಬ್ಯಾಂಕ್‌ ಅಭಿವೃದ್ಧಿಗೆ ಶಕ್ತಿ ಮೀರಿ ಸಹಕಾರ ನೀಡುತ್ತೇನೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ‘ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿರುವ ಸಾಕಷ್ಟು ಮಂದಿ ಮಹಿಳೆಯರು ಉಳಿಕೆ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಮುಂದುಬರುತ್ತಿಲ್ಲ’ ಎಂದು ವಿಷಾದಿಸಿದರು.

‘ವೇಮಗಲ್‌ನಲ್ಲಿ ಮುಂದಿನ ಏಪ್ರಿಲ್ ತಿಂಗಳೊಳಗೆ ಬ್ಯಾಂಕ್ ಶಾಖೆ ಆರಂಭಿಸುವ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಮಹಿಳೆಯರು ಇದನ್ನು ಸಮರ್ಪಕವಾಗಿ ಬಳಸಿಕೊಂಡು ಮಹಿಳಾ ಸ್ನೇಹಿ ಬ್ಯಾಂಕನ್ನು ಉಳಿಸಲು ಮುಂದಾಗಬೇಕೆಂದು’ ಎಂದು ಕೋರಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಅನಿಲ್ ಕುಮಾರ್, ಕೆ.ವಿ.ದಯಾನಂದ್, ವೇಮಗಲ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷೆ ಶೈಲಜಾ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ.ಶಂಕರಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು