ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಮಬದ್ಧವಾಗಿ ಮೌಲ್ಯಮಾಪನ ನಡೆಸಿ: ಶಿಕ್ಷಕರಿಗೆ ಡಿಡಿಪಿಐ ರತ್ನಯ್ಯ ಸೂಚನೆ

ತರಬೇತಿ ಕಾರ್ಯಾಗಾರ
Last Updated 9 ಏಪ್ರಿಲ್ 2019, 13:58 IST
ಅಕ್ಷರ ಗಾತ್ರ

ಕೋಲಾರ: ‘ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಮಯ ಪಾಲನೆಯೊಂದಿಗೆ ಕ್ರಮಬದ್ಧವಾಗಿ ವಿದ್ಯಾರ್ಥಿಸ್ನೇಹಿ ಮೌಲ್ಯಮಾಪನ ನಡೆಸಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಜಂಟಿ ಹಾಗೂ ಉಪ ಮೌಲ್ಯಮಾಪಕರು, ಗಣಕಯಂತ್ರ ಆಪರೇಟರ್‌ಗಳಿಗೆ ಸೂಚನೆ ನೀಡಿದರು.

ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ನಿಯಮಗಳ ಪಾಲನೆ, ಅಂಕ ನೀಡಿಕೆ ಕುರಿತು ಇಲ್ಲಿ ಮಂಗಳವಾರ ಜಂಟಿ ಹಾಗೂ ಉಪ ಮೌಲ್ಯಮಾಪಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಈ ಬಾರಿಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿಶೇಷತೆ ಇದೆ. ಪ್ರತಿ ವರ್ಷ ಮೌಲ್ಯಮಾಪನ ಮಾಡಿ ಅಂಕ ನೀಡುತ್ತಿದ್ದಿರಿ. ಆದರೆ, ಈ ಬಾರಿ ಮೌಲ್ಯಮಾಪಕರೇ ಗಣಕ ಯಂತ್ರದಲ್ಲಿ ಆನ್‌ಲೈನ್‌ ಮೂಲಕ ಅಂಕ ದಾಖಲಿಸಬೇಕು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳ ಭವಿಷ್ಯ ಅಡಗಿರುವ ಮೌಲ್ಯಮಾಪನ ಕಾರ್ಯದಲ್ಲಿ ಉಪ ಮುಖ್ಯ ಮೌಲ್ಯಮಾಪಕರು ಹೆಚ್ಚು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಸಹ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು. ತಪ್ಪು ಮಾಡಿದರೆ ದಂಡ ತೆರಬೇಕಾಗುತ್ತದೆ’ ಎಂದರು.

‘ಕರ್ನಾಟಕ ಶಿಕ್ಷಣ ಕಾಯಿದೆ 28 ಹಾಗೂ 126ರ ಅನ್ವಯ ಮತ್ತು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಯಮ 2012ರಂತೆ ಶಿಕ್ಷಕರಿಗೆ ಮೌಲ್ಯಮಾಪನ ಕಾರ್ಯ ಕಡ್ಡಾಯಗೊಳಿಸಲಾಗಿದೆ. ಸಕಾರಣವಿಲ್ಲದೆ ಮೌಲ್ಯಮಾಪನ ಕಾರ್ಯಕ್ಕೆ ಗೈರಾಗುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

1,700 ಮಂದಿ: ‘ನಗರದ ಆರು ಮೌಲ್ಯಮಾಪನ ಕೇಂದ್ರಗಳಲ್ಲಿ 6 ಜಂಟಿ ಮುಖ್ಯ ಮೌಲ್ಯಮಾಪಕರು, 230 ಉಪ ಮುಖ್ಯ ಮೌಲ್ಯಮಾಪಕರು, 1,500 ಮಂದಿ ಸಹ ಮೌಲ್ಯಮಾಪಕರು, 6 ಮಂದಿ ಕ್ಯಾಂಪ್ ಅಧಿಕಾರಿಗಳು ಸೇರಿದಂತೆ 1,700ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಾರೆ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವರಿಸಿದರು.

‘ಆ ದಿನ ಮೌಲ್ಯಮಾಪನ ಮಾಡಿದ ವಿದ್ಯಾರ್ಥಿಗಳು ಅಂಕಗಳನ್ನು ಅದೇ ದಿನವೇ ಆನ್‌ಲೈನ್‌ನಲ್ಲಿ ಅಡಕ ಮಾಡಬೇಕಿರುವುದರಿಂದ ಪ್ರತಿ ಕೇಂದ್ರಕ್ಕೆ ಒಬ್ಬರು ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಒಬ್ಬರು ಆಪರೇಟರ್‌ ನಿಯೋಜಿಸಲಾಗಿದೆ. ಏ.10ರಂದು ಬೆಳಿಗ್ಗೆ ಎಲ್ಲಾ ಸಹ ಮೌಲ್ಯಮಾಪಕರು ಕೇಂದ್ರದಲ್ಲಿ ಹಾಜರಿರಬೇಕು. ಮೌಲ್ಯಮಾಪನ ಕಾರ್ಯ ಎಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಆರಂಭವಾಗುತ್ತದೆ’ ಎಂದು ಮಾಹಿತಿ ನೀಡಿದರು.

ಗುರುತಿನ ಚೀಟಿ: ‘ಜಂಟಿ ಹಾಗೂ ಕೇಂದ್ರ ವ್ಯವಸ್ಥಾಪಕರು ಪ್ರತಿನಿತ್ಯ ಬೆಳಿಗ್ಗೆ 9 ಗಂಟೆಗೆ ಮೌಲ್ಯಮಾಪನ ಕೇಂದ್ರದಲ್ಲಿ ಹಾಜರಿರಬೇಕು. ಅದೇ ರೀತಿ ಉಪ ಮೌಲ್ಯಮಾಪಕರು ಬೆಳಿಗ್ಗೆ 9.30ಕ್ಕೆ ಮತ್ತು ಸಹ ಮೌಲ್ಯಮಾಪಕರು 10 ಗಂಟೆಗೆ ಹಾಜರಿರಬೇಕು’ ಎಂದು ಸೂಚಿಸಿದರು.

‘ಸಮಯ ಪಾಲನೆಯ ಜತೆಗೆ ಮೌಲ್ಯಮಾಪನ ನಡೆಸುವಾಗ ಮಧ್ಯದಲ್ಲಿ ಹೊರ ಹೋಗುವುದು, ಬೇರೆ ಕೆಲಸದ ಮೇಲೆ ತೆರಳುವುದನ್ನು ನಿರ್ಬಂಧಿಸಲಾಗಿದೆ. ಮೌಲ್ಯಮಾಪಕರಿಗೆ ಮತ್ತು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗೆ ಗುರುತಿನ ಚೀಟಿ ಕಡ್ಡಾಯ’ ಎಂದು ಮಾಹಿತಿ ನೀಡಿದರು.

ಪ್ರವೇಶ ನಿಷೇಧ: ‘ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಮೌಲ್ಯಮಾಪನ ಕೇಂದ್ರಕ್ಕೆ ಹೊರಗಿನ ವ್ಯಕ್ತಿಗಳು, ರಾಜಕೀಯ ಪಕ್ಷ, ಸಂಘಟನೆಗಳ ಮುಖಂಡರ ಪ್ರವೇಶ ನಿಷೇಧಿಸಲಾಗಿದೆ. ಕೇಂದ್ರದ ಸಿಬ್ಬಂದಿ ಯಾವುದೇ ಪ್ರಾಯೋಜಕರಿಂದ ಊಟ, ತಿಂಡಿ, ಟೀ, ಕಾಫಿ ಪಡೆಯುವಂತಿಲ್ಲ’ ಎಂದು ಸ್ವಷ್ಟಪಡಿಸಿದರು.

‘ಮೌಲ್ಯಮಾಪಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಲೋಪವಾಗದಂತೆ ಕಾರ್ಯ ನಿರ್ವಹಿಸಿ. ತಹಸೀಲ್ದಾರ್‌ ಮೌಲ್ಯಮಾಪನ ಕೇಂದ್ರಗಳ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಮುಗಿಯುವವರೆಗೂ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಸಭೆ, ಸಮಾರಂಭ ಮಾಡುವಂತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT