ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಸಿ

ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಬಿಇಒ ನಾಗರಾಜಗೌಡ ಸೂಚನೆ
Last Updated 17 ಮಾರ್ಚ್ 2019, 12:42 IST
ಅಕ್ಷರ ಗಾತ್ರ

ಕೋಲಾರ: ‘ತಾಲ್ಲೂಕಿನ 17 ಕೇಂದ್ರಗಳಲ್ಲಿ ಮಾರ್ಚ್‌ 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಕೇಂದ್ರದಲ್ಲಿ ಮೂಲಸೌಕರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಮುಖ್ಯ ಅಧೀಕ್ಷಕರಿಗೆ ಸೂಚನೆ ನೀಡಿದರು.

ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯಿಂದ ಸರಬರಾಜಾದ ಪರೀಕ್ಷಾ ಸಾಮಗ್ರಿಗಳನ್ನು ಇಲ್ಲಿ ಭಾನುವಾರ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ವಿತರಿಸಿ ಮಾತನಾಡಿ, ‘ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 5,321 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ’ ಎಂದರು.

‘ವಿದ್ಯಾರ್ಥಿ ಜೀವನದ ಪ್ರಥಮ ಪಬ್ಲಿಕ್ ಪರೀಕ್ಷೆ ಇದಾಗಿದ್ದು, ಮಕ್ಕಳಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಕ್ರಮ ವಹಿಸಿ. ಎಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಅಕ್ರಮಕ್ಕೆ ಅವಕಾಶ ನೀಡದೆ ಸುಸೂತ್ರವಾಗಿ ಪರೀಕ್ಷೆ ನಡೆಸಬೇಕು’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ 2,783 ಬಾಲಕರು ಹಾಗೂ 2,538 ಮಂದಿ ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಖಾಸಗಿ ಅಭ್ಯರ್ಥಿಗಳಿರುವ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಮತ್ತು ಬಾಪೂಜಿ ಪ್ರೌಢ ಶಾಲೆಯನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದ್ದು, ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ’ ಎಂದು ಹೇಳಿದರು.

ನಿಷೇಧಾಜ್ಞೆ ಜಾರಿ: ‘ಪ್ರತಿ ಪರೀಕ್ಷಾ ಕೇಂದ್ರಕ್ಕೂ ಒಬ್ಬರು ಸ್ಥಾನಿಕ ಜಾಗೃತ ದಳ ಸಿಬ್ಬಂದಿ, ಒಬ್ಬರು ಕಸ್ಟೋಡಿಯನ್‌ ನೇಮಿಸಲಾಗಿದೆ, ಕೇಂದ್ರಗಳ ಸುತ್ತಮುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಜತೆಗೆ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ’ ಎಂದು ವಿವರಿಸಿದರು.

‘ಮಕ್ಕಳು ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವಂತೆ ತಿಳಿಸಿ. ಜತೆಗೆ ಮಕ್ಕಳಲ್ಲಿ ಕೀಳರಿಮೆಗೆ ಅವಕಾಶವಿಲ್ಲದಂತೆ ಉತ್ತೀರ್ಣರಾಗುವ ವಿಶ್ವಾಸ ತುಂಬಿ. ಗುಣಾತ್ಮಕ ಫಲಿತಾಂಶಕ್ಕೆ ಒತ್ತು ನೀಡಿ ಮತ್ತು ಮಕ್ಕಳಲ್ಲಿನ ಪರೀಕ್ಷಾ ಭಯ ದೂರ ಮಾಡಿ’ ಎಂದು ಕಿವಿಮಾತು ಹೇಳಿದರು.

ಆತಂಕಗೊಳ್ಳಬೇಡಿ: ‘ಪೋಷಕರು ಪರೀಕ್ಷೆ ದಿನ ಮಕ್ಕಳನ್ನು ಒಂದು ತಾಸು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಕರೆತರಬೇಕು. ಮಕ್ಕಳಲ್ಲಿ ಗೊಂದಲ, ಗಾಬರಿಗೆ ಅವಕಾಶವಿಲ್ಲದಂತೆ ಎಚ್ಚರ ವಹಿಸಬೇಕು. ಪರೀಕ್ಷಾ ಕೊಠಡಿ ಸಂಖ್ಯೆ ಹಾಗೂ ಆಸನ ವ್ಯವಸ್ಥೆ ಬಗ್ಗೆ ಗೊಂದಲವಾದರೆ ಮಕ್ಕಳು ಆತಂಕಗೊಳ್ಳಬೇಡಿ. ಕೇಂದ್ರದ ಮುಖ್ಯ ಅಧೀಕ್ಷಕರನ್ನು ಸಂಪರ್ಕಿಸಿ ಗೊಂದಲ ಪರಿಹರಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ತಾಲ್ಲೂಕು ಪರೀಕ್ಷಾ ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಮುಖ್ಯ ಅಧೀಕ್ಷಕರಾದ ಶ್ರೀರಾಮರೆಡ್ಡಿ, ಸಿ.ಎನ್.ಪ್ರದೀಪ್‌ಕುಮಾರ್, ಸುಲೋಚನಾ, ದಾಸಪ್ಪ, ಜಯರಾಮ್‌ ಹಾಗೂ ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT