ಬುಧವಾರ, ನವೆಂಬರ್ 13, 2019
23 °C

ಮೆರುಗು ನೀಡಿದ ಕಲಾ ತಂಡಗಳ ಪ್ರದರ್ಶನ

Published:
Updated:
Prajavani

 ಕೋಲಾರ: ವಾಲ್ಮೀಕಿ ಜಯಂತಿ ಅಂಗವಾಗಿ ನಗರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಆಯೋಜಿಸಿದ್ದ ಪಲ್ಲಕ್ಕಿ ಮೆರವಣಿಗೆಗೆ ಸಾಂಸ್ಕೃತಿಕ ಕಲಾ ತಂಡಗಳು ಮೆರಗು ನೀಡಿದವು.

ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಚ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಉಪ ವಿಭಾಗಾಧಿಕಾರಿ ಸೋಮಶೇಖರ್ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿ ಮೆರವಣಿಗೆ ಚಾಲನೆ ನೀಡಿದರು.

ವಿವಿಧ ಕಲಾ ತಂಡಗಳು ವೇಷ ಭೂಷಣ ಹಾಗೂ ಕೆಲೆಗಾರಿಕೆ ಪ್ರದರ್ಶಿಸುವ ಮೂಲಕ ಮೆರವಣಿಗೆಗೆ ಮೆರಗು ನೀಡಿದವು. ಡೊಳ್ಳು ಕುಣಿತ, ಪೂಜಾ ಕುಣಿತ, ವ್ಯಾದ್ಯ ಗೋಷ್ಠಿ, ತಮಟೆ, ಹುಲಿ ವೇಶಧಾರಿ, ವೀರಗಾಸೆ ಸೇರಿದಂತೆ 10ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು.

ನಗರದ ವಾಲ್ಮೀಕಿ ಭವನದಿಂದ ಆರಂಭವಾದ ಪಲ್ಲಕ್ಕಿ ಮೆರವಣಿಗೆ ಎಂಬಿ ರಸ್ತೆ, ಎಂಜಿ ರಸ್ತೆ, ಬಸ್‌ ನಿಲ್ದಾಣದ ವೃತ್ತ, ಕಾಳಮ್ಮಗುಡಿ ರಸ್ತೆಯಲ್ಲಿ ಸಾಗಿ ರಂಗಮಂದಿರದವರೆಗೆ ನಡೆಯಿತು. ಕೆಎಸ್‌ಆರ್‌ಟಿಸಿ, ರೇಷ್ಮೆ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪಲ್ಲಕ್ಕಿ ಮೆರವಣಿಗೆ ನಡೆಸಿದರು. ವಾಲ್ಮೀಕಿ ವೇಷಧಾರಿಗಳು ಗಮನ ಸೆಳೆದರು.

ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮತ್ತು ಸಂಸದ ಎಸ್.ಮುನಿಸ್ವಾಮಿ ತಮಟೆ ಸದ್ದಿಗೆ ಕುಣಿದರು.

ಪಲ್ಲಕ್ಕಿ ಮೆರವಣಿಗೆ ಹಿನ್ನಲೆಯಲ್ಲಿ ಶ್ರೀನಿವಾಸಪುರ – ಬಂಗಾರಪೇಟೆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗತಿಗೊಳಿಸಲಾಗಿತ್ತು. ಯಾವುದೇ ಅಹಿತರಕರ ಘಟನೆಗಳು ಸಂಭವಿಸದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸಿಂಧು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ವಾಲ್ಮೀಕಿ ಸಂಘದ ಮುಖಂಡರಾದ ಅಂಬರೀಷ್, ವೆಂಕಟರಾಂ, ನರಸಿಂಹಯ್ಯ, ರಾಜಣ್ಣ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)