ಶುಕ್ರವಾರ, ಅಕ್ಟೋಬರ್ 18, 2019
23 °C

ಹಿರಿಯರ ಅನುಭವ ಅತ್ಯಮೂಲ್ಯ ಆಸ್ತಿ: ಗಂಗಾಧರ್ ಕಿವಿಮಾತು

Published:
Updated:
Prajavani

ಕೋಲಾರ: ‘ಹಿರಿಯ ನಾಗರಿಕರು ಬದುಕಿದ ರೀತಿ ಮತ್ತು ಅವರ ಅನುಭವ ಸಮಾಜಕ್ಕೆ ಅತ್ಯಮೂಲ್ಯ ಆಸ್ತಿ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಕಿವಿಮಾತು ಹೇಳಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಹಿರಿಯ ನಾಗರಿಕರು ನಾಗರೀಕರು ಯೌವ್ವನದಲ್ಲಿ ದುಡಿದು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಮಾರ್ಗದರ್ಶಕರಾಗಿದ್ದಾರೆ. ಆದರೆ, ಯುವಕ ಯುವತಿಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಹಿರಿಯರನ್ನು ಮರೆಯುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಆದರೆ, ಈಗ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಮನಸ್ಥಿತಿ ಇಲ್ಲವಾಗಿದೆ. ವಯೋವೃದ್ಧರಿಗೆ ನೀಡುತ್ತಿದ್ದ ಗೌರವ ಕಡಿಮೆಯಾಗುತ್ತಿದ್ದು, ದೇಶದಲ್ಲಿ ವೃದ್ಧಾಶ್ರಮ ಸಂಸ್ಕೃತಿ ತಲೆಯೆತ್ತಿದೆ’ ಎಂದು ವಿಷಾದಿಸಿದರು.

‘ಮಕ್ಕಳಿಗೆ ತಂದೆ ತಾಯಿ ಸಂಪಾದಿಸಿದ ಆಸ್ತಿ ಹಾಗೂ ಹಣ ಬೇಕು. ಆದರೆ, ವಯೋವೃದ್ಧ ಪೋಷಕರನ್ನು ಕೊನೆವರೆಗೂ ಪೋಷಿಸಲು ಹಿಂದೇಟು ಹಾಕುತ್ತಾರೆ. ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಅಧಿಕಾರಿಗಳು ಈ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.

‘ಕ್ರೀಡೆಗೆ ವಯಸ್ಸಿನ ಬೇಧವಿಲ್ಲ. ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕರವರೆಗೂ ಕ್ರೀಡೆಯಲ್ಲಿ ಭಾಗವಹಿಸಬಹುದು. ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಚಟುವಟಿಕೆ ಇಲ್ಲವಾಗಿದೆ. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದೈಹಿಕ ಚಟುವಟಿಕೆಗಳಿಂದ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕ್ರೀಡಾ ಚಟುವಟಿಕೆಗಳು ಮನಸ್ಸಿಗೆ ಮುದ ನೀಡುತ್ತವೆ’ ಎಂದು ಕಿವಿಮಾತು ಹೇಳಿದರು.

ಸಂತಸದ ಸಂಗತಿ: ‘4 ವರ್ಷದಿಂದ ಹಿರಿಯ ನಾಗರಿಕರ ದಿನಾಚರಣೆ ಆಚರಿಸುತ್ತಿರುವುದು ಸಂತಸದ ಸಂಗತಿ. ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ದೈಹಿಕ ಚಟುವಟಿಕೆಗಳಿಂದ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಯೋಗ ಮಾಡಬೇಕು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು’ ಎಂದು ಅಂಗವಿಕಲರ ಜಿಲ್ಲಾ ಸಮಿತಿ ಸದಸ್ಯ ಗೋವಿಂದಪ್ಪ ತಿಳಿಸಿದರು.

ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಅಧಿಕಾರಿ ವೆಂಕಟರಾಮಪ್ಪ, ಜಾಗೃತಿ ಸೇವಾ ಸಂಸ್ಥೆ ಕಾರ್ಯದರ್ಶಿ ಧನರಾಜ್, ಜಿಲ್ಲಾ ನಿವೃತ್ತ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದ್ಯಾವರಪ್ಪ, ನಿವೃತ್ತ ಡಿವೈಎಸ್‍ಪಿ ವೆಂಕಟಸ್ವಾಮಿ, ಸಾಯಿ ಜ್ಯೋತಿ ವೃದ್ಧಾಶ್ರಮ ಸೇವಾ ಸಂಸ್ಥೆ ಕಾರ್ಯದರ್ಶಿ ಸುಲೋಚನಾ ಪಾಲ್ಗೊಂಡಿದ್ದರು.

Post Comments (+)